Homeಬೆಂಗಳೂರುಬೆಂಗಳೂರಲ್ಲಿ ಇಂದಿನಿಂದ ಅನಾಥ ವಾಹನ ತೆರವು ಕಾರ್ಯಚರಣೆ ಆರಂಭ

ಬೆಂಗಳೂರಲ್ಲಿ ಇಂದಿನಿಂದ ಅನಾಥ ವಾಹನ ತೆರವು ಕಾರ್ಯಚರಣೆ ಆರಂಭ

Abandoned vehicle clearance operation begins in Bengaluru from today

ಬೆಂಗಳೂರು, ಜು.17 ನಗರದ ರಸ್ತೆ ಹಾಗೂ ಫುಟ್‌ಪಾತ್‌ಗಳಲ್ಲಿ ಹಲವು ವರ್ಷಗಳಿಂದ ಅನಾಥವಾಗಿ ನಿಂತು ಸಂಚಾರ ಮತ್ತು ಪಾದಚಾರಿಗಳಿಗೆ ತೊಂದರೆ ಉಂಟುಮಾಡುತ್ತಿದ್ದ ವಾಹನಗಳ ವಿರುದ್ಧ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಟ್ರಾಫಿಕ್‌ ಪೊಲೀಸರ ಜಂಟಿ ಕಾರ್ಯಾಚರಣೆ ಇಂದಿನಿಂದ ಆರಂಭವಾಗಿದೆ.

ಕಳೆದ ಜುಲೈ 10ರಂದು ಬೆಂಗಳೂರು ಉಸ್ತುವಾರಿ ಸಚಿವರು ಅಭಿಯಾನಕ್ಕೆ ಚಾಲನೆ ನೀಡಿ, ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ನಿಲ್ಲಿಸಲಾಗಿದ್ದ ಅನಾಥ ವಾಹನಗಳ ಮೇಲೆ ನೋಟಿಸ್‌‍ ಅಂಟಿಸಿ, ಏಳು ದಿನಗಳೊಳಗೆ ವಾಹನಗಳನ್ನು ತೆರವುಗೊಳಿಸುವಂತೆ ಮಾಲೀಕರಿಗೆ ಎಚ್ಚರಿಕೆ ನೀಡಿದ್ದರು.

ನಿಗದಿತ ಅವಧಿಯಲ್ಲಿ ವಾಹನ ತೆರವುಗೊಳಿಸದಿದ್ದರೆ ಜಿಬಿಎ ಮತ್ತು ಟ್ರಾಫಿಕ್‌ ಪೊಲೀಸರು ವಾಹನಗಳನ್ನು ವಶಕ್ಕೆ ಪಡೆದು ಗುರುತಿಸಲಾದ ಡಂಪಿಂಗ್‌ ಯಾರ್ಡ್‌ಗೆ ಸಾಗಿಸುವುದಾಗಿ ಸೂಚಿಸಲಾಗಿತ್ತು.ವಾಹನವನ್ನು ಮರಳಿ ಪಡೆಯಲು ಮಾಲೀಕರು ದಂಡ ಹಾಗೂ ವಿಲೇವಾರಿ ವೆಚ್ಚವನ್ನು ಪಾವತಿಸಬೇಕಾಗುತ್ತದೆ.

ನಿಗದಿತ ಅವಧಿಯಲ್ಲೂ ವಾಹನವನ್ನು ಯಾರೂ ಪಡೆದುಕೊಳ್ಳದಿದ್ದರೆ, ಕಾನೂನು ಪ್ರಕ್ರಿಯೆ ಅನುಸರಿಸಿ ಅಂತಹ ವಾಹನಗಳನ್ನು ಹರಾಜು ಹಾಕಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸಚಿವರ ಎಚ್ಚರಿಕೆಯ ಹೊರತಾಗಿಯೂ ಅನೇಕ ವಾಹನ ಮಾಲೀಕರು ತಮ್ಮ ವಾಹನಗಳನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ, ಇಂದಿನಿಂದ ಕಟ್ಟುನಿಟ್ಟಿನ ಕಾರ್ಯಾಚರಣೆ ಆರಂಭಿಸಲಾಗಿದೆ.

ಕಳೆದ ಒಂದು ವಾರದಲ್ಲಿ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ರಸ್ತೆ ಹಾಗೂ ಫುಟ್‌ಪಾತ್‌ಗಳಲ್ಲಿ ತುಕ್ಕು ಹಿಡಿದು ನಿಂತಿದ್ದ ಸುಮಾರು 3,000ಕ್ಕೂ ಹೆಚ್ಚು ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ನೋಟಿಸ್‌‍ ನೀಡಲಾಗಿತ್ತು.

ನಗರದ ಪ್ರಮುಖ ಆರ್ಟಿರಿಯಲ್‌ ಹಾಗೂ ಸಬ್‌‍-ಆರ್ಟಿರಿಯಲ್‌ ರಸ್ತೆಗಳಿಗೆ ಮೊದಲ ಆದ್ಯತೆ ನೀಡಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಸಂಚಾರ ದಟ್ಟಣೆ ಕಡಿಮೆ ಮಾಡುವುದು ಹಾಗೂ ಪಾದಚಾರಿಗಳಿಗೆ ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸುವುದು ಇದರ ಉದ್ದೇಶವಾಗಿದೆ.

ಜಿಬಿಎ ಮತ್ತು ಟ್ರಾಫಿಕ್‌ ಪೊಲೀಸರ ಜಂಟಿ ಕ್ರಮಕ್ಕೆ ಸ್ಥಳೀಯ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಯಮ ಉಲ್ಲಂಘಿಸಿರುವ ವಾಹನಗಳ ಮಾಲೀಕರಿಗೆ 1,000ರಿಂದ 5,000ರವರೆಗೆ ದಂಡ ವಿಧಿಸಲಾಗುತ್ತಿದ್ದು, ವಿಲೇವಾರಿ ವೆಚ್ಚವನ್ನೂ ಪಾವತಿಸಿದ ಬಳಿಕವೇ ವಾಹನ ಬಿಡುಗಡೆ ಮಾಡಲಾಗುತ್ತದೆ. ಅಧಿಕಾರಿಗಳ ಪ್ರಕಾರ, ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಕಾರ್ಯಾಚರಣೆ ನಗರದ ವಿವಿಧ ಭಾಗಗಳಲ್ಲಿ ನಿರಂತರವಾಗಿ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.

RELATED ARTICLES

Latest News