ಬೆಂಗಳೂರು,ಜು.17- ರಾಜ್ಯ ರಾಜಕಾರಣದಲ್ಲಿ ಭಾರಿ ವಿವಾದದ ಬಿರುಗಾಳಿಯನ್ನು ಸೃಷ್ಟಿಸಿರುವ ಬಿಡದಿ ಟೌನ್ ಶಿಪ್ ಯೋಜನೆಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಿದೆ.ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ರದ್ದುಪಡಿಸುವುದು, ರೈತರ ಜಮೀನನ್ನು ಭೂ ಸ್ವಾಧೀನ ಮಾಡಿಕೊಳ್ಳದಿರುವುದು, ಹಾಗೂ ರೈತರ ಮೇಲೆ ದಾಖಲಾಗಿರುವ ಮೊಕದ್ದಮೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ, ರಾಜ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ,ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್ ಬಿಡದಿ ಭಾಗದ ರೈತರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಹಲವರು ಭಾಗಿಯಾಗಿದ್ದರು.
ಬಿಡದಿ ಸಮೀಪ ಟೌನ್ಶಿಪ್ ಯೋಜನೆ ಅನುಷ್ಠಾನ ಮಾಡುವ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರೈತರ ಫಲವತ್ತಾದ ಜಮೀನುಗಳನ್ನು ಬಲವಂತವಾಗಿ ಕಿತ್ತುಕೊಂಡು ಹೈಕಮಾಂಡ್ ಹೊಟ್ಟೆ ತುಂಬಿಸಲು ರಿಯಲ್ ಎಸ್ಟೇಟ್ ದಂಧೆಗೆ ಇಳಿದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.ಡಿ.ಕೆ.ಶಿವಕುಮಾರ್ ಅವರು ನನ್ನನ್ನು ಮುಖ್ಯಮಂತ್ರಿ ಮಾಡಿದರೆ ಬಿಡದಿ ಟೌನ್ಶಿಪ್ ಮಾಡುತ್ತೇನೆ ಮತ್ತು ಡಿಎಲ್ಎಫ್ ಸಂಸ್ಥೆಗೆ ಅವಕಾಶ ಮಾಡಿಕೊಡುತ್ತೇನೆ ಎಂದು ಕಾಂಗ್ರೆಸ್ ಹೈಕಮಾಂಡ್ ನಾಯಕಿ ಪ್ರಿಯಾಂಕಾ ಗಾಂಧಿ ಅವರಿಗೆ ನೀಡಿದ ಭರವಸೆಯನ್ನು ಈಡೇರಿಸಲು ಇವತ್ತು ರೈತರ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರ ಬಿಡದಿ ಭಾಗದಲ್ಲಿ ರೈತರ ಜಮೀನುಗಳನ್ನು ಒತ್ತಾಯಪೂರ್ವಕವಾಗಿ ಹಾಗೂ ಬಲವಂತವಾಗಿ ಕಸಿದುಕೊಳ್ಳುವ ಮೂಲಕ ಹುಚ್ಚಾಟಿಕೆ ನಡೆಸುತ್ತಿದೆ. ಈ ನಾಡಿಗೆ ಅನ್ನ ನೀಡುವ ರೈತರ ಹಿತ ಕಾಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೃಷಿ ಚಟುವಟಿಕೆಯನ್ನೇ ನೆಚ್ಚಿಕೊಂಡಿರುವ ಬಡ ರೈತ ಕುಟುಂಬಗಳ ನಾಲ್ಕೈದು ಎಕರೆ ಜಮೀನನ್ನು ಕಿತ್ತುಕೊಂಡು ಅವರನ್ನು ಬೀದಿಗೆ ತಳ್ಳಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿಯವರಿಗೆ ಉತ್ತರ ಕರ್ನಾಟಕದ ರೈತರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಅಥವಾ ಅವರ ಸಂಕಷ್ಟಗಳಿಗೆ ಸ್ಪಂದಿಸಲು ಪುರುಸೊತ್ತಿಲ್ಲ. ಆದರೆ ಬಿಡದಿ ಟೌನ್ಶಿಪ್ ಮತ್ತು ಕನಕಪುರ ಏರ್ಪೋರ್ಟ್ನಂತಹ ರಿಯಲ್ ಎಸ್ಟೇಟ್ ಆಧಾರಿತ ಯೋಜನೆಗಳ ಮೇಲೆ ಮಾತ್ರ ತೀವ್ರ ಆಸಕ್ತಿ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜಮೀನು ನೀಡಲು ಒಪ್ಪದ ಅಮಾಯಕ ರೈತ ಕುಟುಂಬಗಳ ಮನೆಗೆ ರಾತ್ರೋರಾತ್ರಿ ಗೂಂಡಾಗಳನ್ನು ಕಳುಹಿಸಿ, ನಿಮಗೆ ಉಳಿಗಾಲವಿಲ್ಲ ಎಂದು ಪ್ರಾಣ ಬೆದರಿಕೆ ಹಾಕಲಾಗುತ್ತಿದೆ. ಒಂದೆಡೆ ರೈತರಿಂದ ಬಲವಂತವಾಗಿ ಜಮೀನು ಕಸಿದುಕೊಳ್ಳುವುದಿಲ್ಲ ಎಂದು ಹೇಳುತ್ತಾರೆ. ಮತ್ತೊಂದೆಡೆ ತಮಗಾಗಿ ಹೋರಾಡುತ್ತಿರುವ ರೈತರ ಮೇಲೆಯೇ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಅವರನ್ನು ಜೈಲಿಗಟ್ಟುವ ಕುತಂತ್ರವನ್ನು ಸರ್ಕಾರ ಮಾಡುತ್ತಿದೆ. ಅಧಿಕಾರದ ಮದ ಮತ್ತು ದರ್ಪದಿಂದ ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ಯತ್ನಿಸುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದರು.
ಶಿವಕುಮಾರ್ ಸಿಎಂ ಆಗಿ ಒಂದು ತಿಂಗಳು ಕಳೆದರೂ ಸರ್ಕಾರಕ್ಕೆ ಒಬ್ಬ ಕೃಷಿ ಸಚಿವರು ಇಲ್ಲ. ರೈತರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿರುವ ಮುಖ್ಯಮಂತ್ರಿಗಳು ತಮ ಕೃಷಿ ಇಲಾಖೆಯನ್ನು ಸಂಪೂರ್ಣ ಬದಿಗಿಟ್ಟು, ತಮ ಇಲಾಖೆಯ ಹೆಸರನ್ನು ರಿಯಲ್ ಎಸ್ಟೇಟ್ ಕಾಂಗ್ರೆಸ್ ಇಲಾಖೆ ಎಂದು ಬದಲಾಯಿಸಿಕೊಂಡರೆ ಮಾತ್ರ ಇಲಾಖೆಗೆ ನ್ಯಾಯ ಒದಗಿಸಲು ಸಾಧ್ಯ ಎಂದು ಲೇವಡಿ ಮಾಡಿದರು.
ದೇಶಾದ್ಯಂತ ಭಾರತ್ ಜೋಡೋ ಯಾತ್ರೆ ನಡೆಸಿ ರೈತರ ರಕ್ಷಣೆ ಮಾಡುತ್ತೇನೆ ಎಂದಿದ್ದ ರಾಹುಲ್ ಗಾಂಧಿ ಅವರು ಕರ್ನಾಟಕದ ರೈತರ ಮೇಲಾಗುತ್ತಿರುವ ಇಷ್ಟೊಂದು ದೊಡ್ಡ ದೌರ್ಜನ್ಯದ ವಿರುದ್ಧ ಸಂಪೂರ್ಣ ಮೌನ ವಹಿಸಿ ನಾಪತ್ತೆಯಾಗಿದ್ದಾರೆ. ತಕ್ಷಣವೇ ತಮ ಪರಮಾಪ್ತ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿ ರೈತರ ಮೇಲಿನ ಮೊಕದ್ದಮೆಗಳನ್ನು ಕೈಬಿಡಬೇಕು ಹಾಗೂ ಬಿಡದಿ ಟೌನ್ಶಿಪ್ ಯೋಜನೆಯಿಂದ ಸರ್ಕಾರ ಹಿಂದೆ ಸರಿಯುವಂತೆ ಆದೇಶಿಸಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಬಿಡದಿ ಟೌನ್ಶಿಪ್ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಈಗಾಗಲೇ ರಾಜ್ಯದ ರೈತರು ಬರಗಾಲದಿಂದ ಪರಿತಪಿಸುವ ಸ್ಥಿತಿ ಇದೆ. ಇನ್ನೊಂದೆಡೆ ಹೈನುಗಾರಿಕೆ, ರೇಷೆ, ಮಾವು, ರಾಗಿಗೆ ಹೆಸರಾದ ಬಿಡದಿ ಪ್ರದೇಶವನ್ನು ಕಿತ್ತುಕೊಳ್ಳಲು ಸರಕಾರ ಹೊರಟಿದೆ. ಇದರ ವಿರುದ್ಧವಾಗಿ ನಾವಿದ್ದೇವೆ. ಈ ಯೋಜನೆಗೆ ಅವಕಾಶ ಕೊಡುವುದಿಲ್ಲ.ಇದು ಲ್ಯಾಂಡ್ ಮಾಫಿಯ ಸರಕಾರ ಎಂದು ಟೀಕಿಸಿದರು.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ನಂತರ ರಾಜ್ಯದಲ್ಲಿ ರಿಯಲ್ ಎಸ್ಟೇಟ್ ದಂಧೆ ಅಧಿಕೃತವಾಗಿ ಆರಂಭವಾಗಿದೆ. ಒಂದೂವರೆ ತಿಂಗಳ ಸಾಧನೆ ರಿಯಲ್ ಎಸ್ಟೇಟ್. ಇವರು ಬಂದು ಬರಗಾಲ ತಂದರು. ಇದು ಮನೆಹಾಳ ಸರ್ಕಾರ ಎಂದು ಕಿಡಿಕಾರಿದರು.
ಮಾಜಿ ಸಚಿವ ಸಿ.ಟಿ.ರವಿ, ನೆಲ ಕೆರೆದರೂ ದುಡ್ಡು ಬರುತ್ತೆ, ಬರದಲ್ಲಿ ಬೆಳೆ ಆಗಲ್ಲ, ಆಲೂಗೆಡ್ಡೆ ಹಾಕಿ ಚಿನ್ನ ತೆಗೆಯಲು ಆಗಲ್ಲ. ಅದಕ್ಕೆ ಟೌನ್ಶಿಪ್ ಮಾಡಲು ಹೊರಟಿದ್ದಾರೆ. ಇದು ರೈತ ವಿರೋಧಿ ನೀತಿ, ಇದಕ್ಕೆ ನಮ ವಿರೋಧವಿದೆ. ಸಿಎಂ ಅವರ ವ್ಯಾಪಾರದ ಮನೋಭಾವ ರೈತರಿಗೆ ಸಂಕಷ್ಟ ತಂದಿದೆ. ಬಿಡದಿ ಜನರ ಹೋರಾಟದ ಆಕ್ರೋಶ ಸಿಎಂಗೆ ಅರ್ಥ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರೈತರ ಬದುಕಿನ ಸಮಾಧಿ ಮೇಲೆ ರಾಜಕಾರಣ ಮಾಡಲು ಹೋದವರ ರಾಜಕೀಯ ಸಮಾಧಿ ಆಗಿದೆ. ರೈತರ ವಿಚಾರದಲ್ಲಿ ದುಸ್ಸಾಹಸ ಮಾಡಬೇಡಿ ಎಂದು ಎಚ್ಚರಿಸಿದರು.
