Homeರಾಜ್ಯಡಿ.31ರೊಳಗೆ ಜಿಬಿಎ ವ್ಯಾಪ್ತಿಯ 5 ಪಾಲಿಕೆಗಳಿಗೆ ಚುನಾವಣೆ ನಡೆಸುವಂತೆ ಸುಪ್ರೀಂ ಆಜ್ಞೆ

ಡಿ.31ರೊಳಗೆ ಜಿಬಿಎ ವ್ಯಾಪ್ತಿಯ 5 ಪಾಲಿಕೆಗಳಿಗೆ ಚುನಾವಣೆ ನಡೆಸುವಂತೆ ಸುಪ್ರೀಂ ಆಜ್ಞೆ

Supreme Court orders elections to 5 corporations under GBA by December 31

ನವದೆಹಲಿ, ಜು.17- ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ 5 ಮಹಾನಗರ ಪಾಲಿಕೆಯ ಚುನಾವಣೆಯನ್ನು ಡಿ.31ರೊಳಗೆ ನಡೆಸಬೇಕೆಂದು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಸ್ಪಷ್ಟ ನಿರ್ದೇಶನ ನೀಡಿದ್ದು, ಪುನಃ ಕಾಲಾವಕಾಶ ಕೇಳಬಾರದು ಎಂದು ತಾಕೀತು ಮಾಡಿದೆ.

ನ್ಯಾಯಾಲಯದ ಈ ತೀರ್ಪಿನಿಂದಾಗಿ ಬಹು ನಿರೀಕ್ಷಿತ ಜಿಬಿಎ ಚುನಾವಣೆ ಇನ್ನು ನಾಲ್ಕರಿಂದ ಐದು ತಿಂಗಳಿಗೆ ಮುಂದೂಡಿಕೆಯಾದಂತಾಗಿದೆ. ಮತ್ತೆ ಸಮಯಾವಕಾಶ ಕೇಳಿದರೆ ಅರ್ಜಿಯನ್ನು ಪುರಸ್ಕಾರ ಮಾಡುವುದಿಲ್ಲ ಎಂದು ಸುಪ್ರೀಂಕೋರ್ಟ್‌ ಎಚ್ಚರಿಕೆ ನೀಡಿದಾಗ, ಅಂತಹ ಸಮಯಾವಕಾಶ ಬಂದರೆ ನಾನೇ ನ್ಯಾಯಾಲಯಕ್ಕೆ ಹಾಜರಾಗುವುದಿಲ್ಲ ಎಂದು ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲ ಕಪೀಲ್‌ ಸಿಬಾಲ್‌ ನ್ಯಾಯಪೀಠಕ್ಕೆ ತಿಳಿಸಿದರು.

ಕರ್ನಾಟಕದಲ್ಲಿ ಪ್ರಸ್ತುತ ಮತದಾರರ ತೀವ್ರ ಪರಿಷ್ಕರಣೆ (ಎಸ್‌‍ಐಆರ್‌) ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಬಿಎ ಚುನಾವಣೆಯನ್ನು 2026 ಡಿ.31 ರವರೆಗೆ ಮುಂದೂಡಬೇಕೆಂದು ಬಿಬಿಎಂಪಿ ಮಾಜಿ ಸದಸ್ಯ ಎಂ.ಶಿವರಾಜ್‌ ಅವರು ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದರು.

ಈ ಅರ್ಜಿಯನ್ನು ಪುರಸ್ಕರಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌, ವಿ.ಮೋಹನ ಹಾಗೂ ಜಾಯಲ್ಯ ಬಾಗ್ಚಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಡಿ.31 ರೊಳಗೆ ಜಿಬಿಎ ಚುನಾವಣೆಯನ್ನು ನಡೆಸಬೇಕು. ಪುನಃ ಯಾವುದೇ ಕಾರಣಕ್ಕೂ ಮತ್ತೆ ಜಿಬಿಎ ಚುನಾವಣೆ ಮುಂದೂಡುವಂತೆ ನ್ಯಾಯಾಲಯದ ಕದ ತಟ್ಟಬಾರದು ಎಂದು ಕಟುಮಾತುಗಳನ್ನು ಅರ್ಜಿದಾರರ ಪರ ವಕೀಲರಿಗೆ ಸೂಚನೆ ನೀಡಿತು.

ರಾಜ್ಯ ಸರ್ಕಾರದ ಪರವಾಗಿ ಹಿರಿಯ ವಕೀಲ ಕಪಿಲ್‌ ಸಿಬಲ್‌ ಹಾಜರಾಗಿದ್ದರು. ರಾಜ್ಯದಲ್ಲಿ ಪ್ರಕ್ರಿಯೆ ನಡೆಯುತ್ತಿದೆ. 1.03 ಕೋಟಿ ಮತದಾರರ ಮತ್ತು 40 ಲಕ್ಷ ಮನೆಗಳ ಪರಿಶೀಲನೆ ನಡೆಯುತ್ತಿದೆ. ಚುನಾವಣೆಗೆ ಭದ್ರತಾ ಸಿಬ್ಬಂದಿ ಹೊರತುಪಡಿಸಿ 60 ಸಾವಿರ ಸಿಬ್ಬಂದಿ ಅಗತ್ಯವಿದೆ. ಪ್ರಕ್ರಿಯೆಯಿಂದ ಸಿಬ್ಬಂದಿ ಕೊರತೆ ಉಂಟಾಗಿದೆ. ಹೀಗಾಗಿ ಚುನಾವಣಾ ಗಡುವು ವಿಸ್ತರಣೆ ಕೋರಿದರು.

ಸರ್ಕಾರದ ವಾದ ಆಲಿಸಿದ ಸುಪ್ರೀಂ ಕೋರ್ಟ್‌ ಸರ್ಕಾರ ಡಿ.31 ರ ತನಕ ಸಮಯ ನೀಡುವಂತೆ ಮನವಿ ಮಾಡಿದ್ದರಿಂದ ಮತ್ತೆ ಡಿ. 31ರ ತನಕ ಸಮಯಾವಕಾಶ ನೀಡುತ್ತೇವೆ. ಇದೇ ಕೊನೆಯ ಅವಕಾಶ. ಮತ್ತೆ ಯಾವುದೇ ಕಾಲಾವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತು.

ಚುನಾವಣಾ ಆಯೋಗದ ಪರ ಹಾಜರಾದ ವಕೀಲರು, ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಆಯೋಗವು ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಐದು ಪಾಲಿಕೆ ಗಳ ಅಂತಿಮ ಮತದಾರರ ಪಟ್ಟಿಯನ್ನು ಏ.18ರಂದು ಪ್ರಕಟಿಸಲಾಗಿದೆ. ಆದರೆ, ಎಸ್‌‍ಐಆರ್‌ ಕಾರ್ಯ ನಡೆಯು ತ್ತಿರುವುದರಿಂದ ಚುನಾವಣೆ ನಡೆಸಲು ಅಗತ್ಯವಿರುವ, ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಹಾಗೂ ಕೈಬಿಡುವ ಕಾರ್ಯ ಸಾಧ್ಯವಾಗುತ್ತಿಲ್ಲ ಎಂದು ಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.

ಜಿಬಿಎ ಚುನಾವಣೆ ನಡೆಸಲು ಪರಿಷ್ಕೃತ ಮತದಾರರ ಪಟ್ಟಿ ಒದಗಿಸುವಂತೆ ಆಯೋಗಕ್ಕೆ ಪತ್ರ ಬರೆಯಲಾಗಿದೆ. ಎಸ್‌‍ಐಆರ್‌ ಮುಗಿದ ಮೇಲೆಯೇ ಈ ಪಟ್ಟಿ ಸಿಗಲಿದೆ ಎಂದು ತಿಳಿಸಿದರು.
ಒಂದು ವೇಳೆ ಈಗ ಚುನಾವಣೆಗೆ ಅಧಿಸೂಚನೆ ಹೊರಡಿಸಿದರೆ 2026ರ ಏ.18ರ ನಂತರ 18 ವರ್ಷ ಪೂರ್ಣ ಗೊಂಡವರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಆಗುವುದಿಲ್ಲ. ಇದರಿಂದಾಗಿ, ಅರ್ಹರು ತಮ ಸಾಂವಿಧಾನಿಕ ಹಾಗೂ ಶಾಸನಬದ್ಧ ಮತದಾನದ ಹಕ್ಕು ಕಳೆದುಕೊಳ್ಳಲಿದ್ದಾರೆ ಎಂಬ ಆತಂಕವನ್ನು ಹೊರಹಾಕಿದರು.

ಎಸ್‌‍ಐಆರ್‌ ನಂತರ ಪರಿಷ್ಕೃತ ಮತದಾರರ ಪಟ್ಟಿ ಅಕ್ಟೋಬರ್‌ನಲ್ಲಿ ಲಭ್ಯವಾಗಲಿದೆ. ಈ ಪಟ್ಟಿಯ ಆಧಾರದಲ್ಲಿ ಚುನಾವಣೆ ನಡೆಸಿದರೆ ಜಿಬಿಎ (ಮತದಾರರ ನೋಂದಣಿ) ನಿಯಮ 2025 ಪಾಲಿಸಿದಂತಾಗುತ್ತದೆ ಎಂದು ವಕೀಲರು ತಿಳಿಸಿದರು.

ತೀರ್ಪಿನ ಹಿನ್ನೆಲೆ :
ಎಸ್‌‍ಐಆರ್‌ ನಡೆಯುತ್ತಿರುವುದರಿಂದ ಬೆಂಗಳೂರಿನ ಐದು ಪಾಲಿಕೆಗಳಿಗೆ ಚುನಾವಣೆ ನಡೆಸಲು ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ಕೋರಿ ಪ್ರಾಧಿಕಾರವು ಸುಪ್ರೀಂ ಕೋರ್ಟ್‌ಗೆ ಕಳೆದ ವಾರ ಅರ್ಜಿ ಸಲ್ಲಿಸಿತ್ತು.

ಪಾಲಿಕೆಗಳಿಗೆ ಆಗಸ್ಟ್‌ ಅಂತ್ಯದೊಳಗೆ ಚುನಾವಣೆ ನಡೆಸಬೇಕೆಂದು ಮೇ 20ರಂದು ಹೊರಡಿಸಿರುವ ಆದೇಶವನ್ನು ಮಾರ್ಪಡಿಸಬೇಕು ಹಾಗೂ ಚುನಾವಣೆ ನಡೆಸುವ ಗಡುವನ್ನು ಡಿ.31ರವರೆಗೆ ವಿಸ್ತರಿಸಬೇಕು ಎಂದು ಪ್ರಾಧಿಕಾರ ಮನವಿ ಮಾಡಿತ್ತು. ಕರ್ನಾಟಕದಲ್ಲಿ ಎಸ್‌‍ಐಆರ್‌ ಪ್ರಕ್ರಿಯೆ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಚುನಾವಣಾ ಆಯೋಗವು ಏಕಕಾಲದಲ್ಲಿ ಪ್ರತ್ಯೇಕವಾಗಿ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಪಾಲಿಕೆ ಚುನಾವಣೆಯನ್ನು ನಡೆಸುವುದು ಕಷ್ಟಕರ ಎಂದು ಹೇಳಿತ್ತು.

ಕರ್ನಾಟಕ ಸರ್ಕಾರ ಮತ್ತು ಜಿಬಿಎ ತಮ ಅರ್ಜಿಯಲ್ಲಿ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿರುವುದರಿಂದ ಆಡಳಿತಾತಕ ಸವಾಲುಗಳು ಎದುರಾಗಿವೆ. ಮನೆಮನೆಗೆ ತೆರಳಿ ಮತದಾರರ ವಿವರ ಪರಿಶೀಲಿಸುವ ಕಾರ್ಯದಲ್ಲಿ ಸಿಬ್ಬಂದಿ ನಿರತರಾಗಿರುವ ಕಾರಣ, ಅದೇ ಸಮಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಗತ್ಯವಿರುವ ಭಾರೀ ಪ್ರಮಾಣದ ಸಿಬ್ಬಂದಿಯನ್ನು ನಿಯೋಜಿಸುವುದು ಸಾಧ್ಯವಾಗುತ್ತಿಲ್ಲ ಎಂದು ಅರ್ಜಿಯಲ್ಲಿ ಸಮರ್ಥನೆ ಮಾಡಿಕೊಂಡಿತ್ತು.

ಬೆಂಗಳೂರು ನಗರದಲ್ಲೇ ಸುಮಾರು 1.03 ಕೋಟಿ ಮತದಾರರು ಹಾಗೂ 40 ಲಕ್ಷ ಮನೆಗಳಿದ್ದು, ಐದು ನಗರ ಪಾಲಿಕೆಗಳ ಚುನಾವಣೆಗೆ ಮತದಾನದ ದಿನ ಮಾತ್ರವೇ ಭದ್ರತಾ ಸಿಬ್ಬಂದಿಯನ್ನು ಹೊರತುಪಡಿಸಿ ಸುಮಾರು 60 ಸಾವಿರ ಸಿಬ್ಬಂದಿ ಅಗತ್ಯವಿದೆ. ಹೀಗಾಗಿ ಎರಡೂ ಪ್ರಕ್ರಿಯೆಗಳನ್ನು ಏಕಕಾಲದಲ್ಲಿ ನಿರ್ವಹಿಸುವುದು ಅತ್ಯಂತ ಕಷ್ಟಕರವಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.

RELATED ARTICLES

Latest News