ಬೆಂಗಳೂರು, ಜು.17- ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಕೆಲ ಕಾಲ ಮುಂದೂಡಿಕೆಯಾಗಿದ್ದು, ಭಾನುವಾರದ ಬಳಿಕ ಪ್ರಕ್ರಿಯೆಗಳು ನಡೆಯುವ ಸಾಧ್ಯತೆ ಇದೆ.ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ಮೊನ್ನೆ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್ ಅವರು, ನಿನ್ನೆ ಇಡೀ ದಿನ ಹೈಕಮಾಂಡ್ ನಾಯಕರ ಜೊತೆ ಸರಣಿ ಸಭೆ ನಡೆಸಿದ್ದಾರೆ. ಆದರೆ ಎಐಸಿಸಿ ಮಲ್ಲಿಕಾರ್ಜುನ ಖರ್ಗೆಯವರ ಅನುಪ ಸ್ಥಿತಿಯಿಂದಾಗಿ ಯಾವುದೇ ಅಂತಿಮ ತೀರ್ಮಾನಗಳಾಗದೆ ಗೊಂದಲ ಮುಂದುವರೆದಿದೆ.
ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್ ಅವರುಗಳು ಪ್ರತ್ಯೇಕವಾದ ಮೂರು ಪಟ್ಟಿಗಳನ್ನು ಹೈಕಮಾಂಡ್‌ಮುಂದೆ ಇಟ್ಟಿದ್ದಾರೆ. ಅದರನುಸಾರ ಒಟ್ಟು 48 ಮಂದಿ ಸಂಭವನೀಯರ ಕರಡುಪಟ್ಟಿ ಸಿದ್ಧವಾಗಿತ್ತು. ಅದನ್ನು 20ಕ್ಕೆ ಇಳಿಸುವುದು ಹೈಕಮಾಂಡ್‌ಗೆ ಭಾರಿ ತಲೆ ನೋವು ತಂದಿದೆ.
ಈ ನಡುವೆ ರಾಹುಲ್ ಗಾಂಧಿಯವರು ಖಾಸಗಿ ಏಜೆನ್ಸಿಯ ಮೂಲಕ ರಾಜ್ಯದ ರಾಜಕೀಯ ಚಿತ್ರಣದ ವರದಿ ಪಡೆದಿದ್ದಾರೆ. ಅದನ್ನು ಆಧರಿಸಿ ಶೇ.80 ರಷ್ಟು ಹೊಸ ಮುಖಗಳಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕು ಎಂಬ ಶಿಾರಸು ಇದೆ. ಅದರಲ್ಲೂ ನಾಲ್ಕರಿಂದ ಆರು ಬಾರಿಯವರೆಗೂ ಶಾಸಕರಾಗಿ ಆಯ್ಕೆಯಾಗಿ, ಈವರೆಗೂ ಒಮ್ಮೆಯೂ ಸಚಿವರಾಗದೇ ಇರುವವರಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬುದು ಖಾಸಗಿ ಸಂಸ್ಥೆಯ ವರದಿಯ ಪ್ರಮುಖ ಶಿಾರಸಾಗಿದೆ.
ಜಾತಿ ಮತ್ತು ಭೌಗೋಳಿಕತೆ ಆದರಿಸಿ ಅನಿವಾರ್ಯವಾದ ಸಂದರ್ಭದಲ್ಲಿ ಪುನರಾವರ್ತಿತರಿಗೆ ಶೇ.20ರಷ್ಟು ಸಚಿವ ಸ್ಥಾನ ನೀಡಬಹುದು. ಆದರೆ ಬಹುತೇಕ ಹೊಸ ಮುಖಗಳಿಗೆ ಮಣೆ ಹಾಕುವುದರಿಂದ ಕಾರ್ಯಕರ್ತರಲ್ಲಿ ಹೆಚ್ಚಿನ ವಿಶ್ವಾಸ ಬರುತ್ತದೆ. ಕಾಂಗ್ರೆಸ್‌ಗೆ ವಂಶ ಪಾರಂಪರ್ಯ ಆಡಳಿತ ಎಂಬ ಆರೋಪದ ಸೋಂಕು ಸ್ವಲ್ಪ ತಗ್ಗುತ್ತದೆ.
ಹೊಸ ಮುಖಗಳಿಗೆ ಅದರಲ್ಲೂ ವಿದ್ಯಾವಂತ ಮತ್ತು ಸುಶಿತರಿಗೆ ಅವಕಾಶ ನೀಡುವುದರಿಂದ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿ, 2028ರ ವಿಧಾನಸಭಾ ಚುನಾವಣೆಯಲ್ಲಿ ಜನರ ಒಲವು ಗಳಿಸಲು ಸಾಧ್ಯವಾಗಬಹುದು ಎಂದು ವಿಶ್ಲೇಷಿಸಲಾಗಿದೆ. ವರದಿಯ ಅನುಸಾರ ರಾಹುಲ್ ಗಾಂಽಯವರಿಗೆ ಖಾಸಗಿ ಸಂಸ್ಥೆ, ಸಚಿವರಾಗಲು ಅರ್ಹರಾಗಿರುವ ಪ್ರಮುಖ ಶಾಸಕರುಗಳ ಹೆಸರಿನ ಪಟ್ಟಿಯನ್ನು ನೀಡಿದೆ ಎಂದು ತಿಳಿದು ಬಂದಿದೆ.
2028ರ ವಿಧಾನಸಭೆ ಹಾಗೂ 2029ರ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ರಾಹುಲ್‌ಗಾಂಧಿ ಸಂಪುಟ ವಿಸ್ತರಣೆಯಲ್ಲಿ ಅತೀ ಹೆಚ್ಚಿನ ಜಾಗೃತಿವಹಿಸಿದ್ದಾರೆ ಎಂದು ಹೇಳಲಾಗಿದೆ.
ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್‌ಗೆ ಸಲ್ಲಿಸಿರುವ ಪಟ್ಟಿಯಲ್ಲಿ ಭೌಗೋಳಿಕತೆಗೆ ಆದ್ಯತೆ ನೀಡಿದ್ದಾರೆ. ತಾವು ಸಲ್ಲಿಸಿರುವ ಶಾಸಕರ ಕರಡು ಪಟ್ಟಿಯಲ್ಲಿರುವವರು ಯಾವ ಸಮುದಾಯಕ್ಕೆ ಸೇರಿದ್ದಾರೆ?, ಜನಾಂಗೀಯ ಮತಗಳಿಕೆಯಲ್ಲಿ ಅವರ ಪ್ರಭಾವ ಎಷ್ಟು?, ಎಷ್ಟು ಬಾರಿ ಶಾಸಕರಾಗಿದ್ದಾರೆ?, ಇಲ್ಲಿವರೆಗೂ ಅವರು ಅನುಭವಿಸಿದ ಸಾಂವಿಧಾನಿಕ ಸ್ಥಾನಮಾನಗಳೇನು?, ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ, ಸಂಘಟನೆ ಮತ್ತು ಹೋರಾಟಗಳಲ್ಲಿ ಅವರ ಸಕ್ರಿಯ ಪಾಲ್ಗೊಳ್ಳುವಿಕೆ ಪ್ರಮಾಣ ಎಷ್ಟು? ಎಂಬೆಲ್ಲಾ ಸಮಗ್ರ ವಿವರಗಳನ್ನು ನೀಡಿದ್ದಾರೆ.ಜೊತೆಗೆ ಪಕ್ಷ ಬದ್ಧತೆ ಹಾಗೂ ನಾಯಕತ್ವ ನಿಷ್ಠೆ ವಿಚಾರವಾಗಿ ಶಾಸಕರುಗಳ ನಡವಳಿಕೆ ಕುರಿತು ತಮ್ಮ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಸಲ್ಲಿಸಿರುವ ಪಟ್ಟಿಯಲ್ಲಿ ಸಾಮಾಜಿಕ ನ್ಯಾಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಶಾಸಕರುಗಳ ಚಾರಿತ್ರದ ಬಗ್ಗೆಯೂ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತದೆ.
ಬಿ.ಕೆ.ಹರಿಪ್ರಸಾದ್ ಅವರ ಪಟ್ಟಿಯಲ್ಲಿ ಸಂಪುಟಕ್ಕೆ ಸೇರಿಸಿಕೊಳ್ಳುವ ಶಾಸಕರಿಂದ ಪಕ್ಷಕ್ಕೆ ಯಾವ ರೀತಿ ಅನುಕೂಲವಾಗಲಿದೆ. 2029ರ ಲೋಕಸಭಾ ಚುನಾವಣೆ ಮೇಲಾಗುವ ಪರಿಣಾಮಗಳೇನು ಎಂಬ ಕುರಿತು ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ನಿನ್ನೆ ತಡರಾತ್ರಿವರೆಗೂ ಕೆ.ಸಿ.ವೇಣುಗೋಪಾಲ್ ಮನೆಯಲ್ಲಿ ನಡೆದ ಸಭೆಯಲ್ಲಿ ರಣದೀಪ್ ಸಿಂಗ್ ಅವರೊಟ್ಟಿಗೆ, ರಾಜ್ಯದ ಮೂವರು ನಾಯಕರು ಚರ್ಚೆ ನಡೆಸಿದ್ದಾರೆ. ಸಂಪುಟ ವಿಸ್ತರಣೆಯ ಜೊತೆಗೆ ಪಕ್ಷ ಸಂಘಟನೆ ಮತ್ತು ಚುನಾವಣಾ ತಯಾರಿಗಳ ಬಗ್ಗೆ ಕೂಡ ಸಮಾಲೋಚನೆಯಾಗಿದೆ ಎಂದು ಮೂಲಗಳು ತಿಳಿಸಿವೆ.
