ಬೆಂಗಳೂರು,ಜು.17-ಮನೆಯ ನೀರಿನ ಸಂಪ್ ನಿರ್ಮಾಣದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಮನೆ ಮಾಲೀಕ ಗಾರೆ ಮೇಸಿ ತಂಗಿ ಗಂಡನ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಆಂಧ್ರಪ್ರದೇಶ ಮೂಲದ ರವಿ (38) ಕೊಲೆಯಾದ ಪ್ಲಂಬರ್.
ನಗರದ ಕಿತ್ತನಹಳ್ಳಿಯಲ್ಲಿ ರವಿ ವಾಸವಾಗಿದ್ದುಕೊಂಡು ಗಾರೆ ಕೆಲಸ ಹಾಗೂ ಪ್ಲಂಬರ್ ಕೆಲಸ ಮಾಡುತ್ತಿದ್ದರು. ಈತ ಮಂಜುನಾಥ್ ಎಂಬಾತನ ಸಹೋದರಿಯನ್ನು ಮದುವೆಯಾಗಿದ್ದು, ಮಂಜುನಾಥ್ ಸಹ ಇವರ ಮನೆಯಲ್ಲೇ ವಾಸವಾಗಿದ್ದಾರೆ.
ಕಡಬಗೆರೆಯಲ್ಲಿ ಮಹಾಲಕ್ಷ್ಮೀ ಲೇಔಟ್ ನಿವಾಸಿ ದೇವರಾಜ್ ಎಂಬುವವರಿಗೆ ಸೇರಿದ ಸೈಟ್ ಇದೆ. ಈ ಸೈಟ್‌ನಲ್ಲಿ ಸಣ್ಣದಾಗಿ ಮನೆ ಕಟ್ಟಿಕೊಡುವಂತೆ ಹಾಗೂ ನೀರಿನ ಸಂಪ್ ನಿರ್ಮಿಸಿ ಮುಚ್ಚುಳ ಹಾಕುವಂತೆ ತನಗೆ ಪರಿಚಯವಿದ್ದ ಗಾರೆ ಮೇಸಿ ಮಂಜುನಾಥನಿಗೆ ತಿಳಿಸಿದ್ದರು.
ಅದರಂತೆ ಮಂಜುನಾಥ ಸಣ್ಣ ಮನೆ ನಿರ್ಮಿಸಿ, ಸಂಪ್ ಟ್ಯಾಂಕ್ ಕಟ್ಟಿ ಮುಚ್ಚುಳ ಹಾಕಿದ್ದರು. ನಿನ್ನೆ ದೇವರಾಜು ನಿರ್ಮಾಣ ಹಂತದ ತನ್ನ ಮನೆ ಬಳಿ ಹೋದಾಗ ನೀರಿನ ಸಂಪಿಗೆ ಹಾಳಾಗಿರುವ ಮುಚ್ಚುಳ ಅಳವಡಿಸಿರುವುದನ್ನು ಕಂಡು ಸಿಡಿಮಿಡಿಗೊಂಡು ಮಂಜುನಾಥನಿಗೆ ಕರೆ ಮಾಡಿ ದೇವರಾಜ್ ಗಲಾಟೆ ಮಾಡಿದ್ದರಿಂದ ಆತ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.
ರಾತ್ರಿ 7.30 ರಿಂದ 8.30 ರ ಮಧ್ಯೆ ದೇವರಾಜು ತನ್ನ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರೊಂದಿಗೆ ಮಂಜುನಾಥನ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದಾರೆ. ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಮನೆಯೊಳಗಿದ್ದ ರವಿ ಹೊರಗೆ ಬಂದು ಜಗಳ ಬಿಡಿಸಲು ಮುಂದಾದಾಗ ದೇವರಾಜು ಮತ್ತು ಆತನ ಜೊತೆಗೆ ಬಂದಿದ್ದವರು ಏಕಾಏಕಿ ರವಿ ಮೇಲೆ ಹಲ್ಲೆ ನಡೆಸಿ ಮರ್ಮಾಂಗಕ್ಕೆ ಒದ್ದಿದ್ದರಿಂದ ಅವರು ಸಾವನ್ನಪ್ಪಿದ್ದಾರೆ.
ಹಲ್ಲೆಯಿಂದ ಮಂಜುನಾಥ ಸಹ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುದ್ದಿ ತಿಳಿದು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
