ಬೆಂಗಳೂರು, ಜು.18- ಬಿಡದಿಯ ಉಪನಗರ ನಿರ್ಮಾಣಕ್ಕೆ ಅಧಿಸೂಚನೆ ಹೊರಡಿಸಿದ ಆಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಡಿಎಲ್ಎಫ್ಗೆ ಹಣವನ್ನು ವಾಪಸ್ ಕೊಟ್ಟ ಯಡಿಯೂರಪ್ಪ ಅವರು ಎಷ್ಟು ಕಿಕ್ಬ್ಯಾಕ್ ಪಡೆದಿದ್ದಾರೆ ಮತ್ತು ಅದರಲ್ಲಿ ಅವರ ಪಕ್ಷದ ಹಿರಿಯ ನಾಯಕರ ಪಾಲು ಎಷ್ಟು ಎಂದು ಮಾಗಡಿಯ ಕಾಂಗ್ರೆಸ್ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ನ ನಾಯಕರು ಬಿಡದಿ ಯೋಜನೆಯನ್ನು ರಿಯಲ್ ಎಸ್ಟೇಟ್ ವ್ಯವಹಾರ ಎಂದು ಪದೇ ಪದೇ ಹೇಳುತ್ತಿದ್ಧಾರೆ. ಈ ಯೋಜನೆಯಿಂದ ಹಣ ಸಂಗ್ರಹಿಸಿ ಹೈಕಮಾಂಡ್ಗೆ ನೀಡಲು ಮುಖ್ಯಮಂತ್ರಿ ಮುಂದಾಗಿದ್ದಾರೆ ಎಂಬ ಗಂಭೀರ ಆರೋಪ ಮಾಡುತ್ತಿದ್ದಾರೆ. ಆದರೆ ಈ ಯೋಜನೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಪಾಪದ ಕೂಸು ಎಂದು ತಿರುಗೇಟು ನೀಡಿದರು.
ಯೋಜನೆ ವಿರೋಧಿಸಿ ನಿನ್ನೆ ಬಿಜೆಪಿಯ ನಾಯಕರು ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿ, ವೀರಾವೇಶದ ಮಾತನ್ನಾಡಿದ್ದಾರೆ ಮತ್ತು ಬಿಡದಿಯವರೆಗೂ ಪಾದಯಾತ್ರೆ ನಡೆಸುವುದಾಗಿ ಘೋಷಿಸಿದ್ದಾರೆ. ಇದು ಪಾದಯಾತ್ರೆಯಲ್ಲ, ಬಿಜೆಪಿಯವರ ಪಶ್ಚಾತ್ತಾಪದ ಯಾತ್ರೆ ಎಂದು ಲೇವಡಿ ಮಾಡಿದರು. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಈ ಪಾಪದ ಕೂಸು ಸೃಷ್ಟಿಯಾಯಿತು. ಅದರ ಕೈ-ಕಾಲು ತಿರುಚಿ ಕುಮಾರಸ್ವಾಮಿಯವರು ವಿಕಲಚೇತನವನ್ನಾಗಿಸಿದ್ದಾರೆ. ಅನಂತರ ಅದನ್ನು ಯಡಿ ಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್, ಬಸವರಾಜ ಬೊಮಾಯಿ ಅವರು ಹೊತ್ತುಕೊಂಡು ತಿರುಗಿದ್ದಾರೆ. ಎಂದು ಹೇಳಿದರು.
ಯೋಜನೆ ವಿಷಯದಲ್ಲಿ ಯಡಿಯೂರಪ್ಪ ಅವರು ನುಡಿದಂತೆ ನಡೆಯುತ್ತಿಲ್ಲ, ಹೇಳುವುದು ಒಂದು ಮಾಡುವುದು ಇನ್ನೊಂದು ಎಂಬಂತೆ ವರ್ತಿಸುತ್ತಿದ್ದಾರೆ ಎಂದರು.ಯೋಜನೆ ಆರಂಭಕ್ಕೆ ಅಧಿಸೂಚನೆ ಹೊರಡಿಸಿದ್ದ ಕುಮಾರಸ್ವಾಮಿಯವರು, ಎಷ್ಟು ಲಂಚ ಪಡೆದಿದ್ದರು ಮತ್ತು ಯಾರಿಗೆಲ್ಲಾ ಪಾಲು ಕೊಟ್ಟರು ಎಂಬುದನ್ನು ಬಹಿರಂಗಪಡಿಸಲಿ. ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ನಿರ್ಮಿಸಲು ಡಿಎಲ್ಎಫ್ ಸಂಸ್ಥೆಯಿಂದ 400 ಕೋಟಿ ರೂ.ಗಳನ್ನು ಕಟ್ಟಿಸಿಕೊಳ್ಳಲಾಗಿತ್ತು. ಅದನ್ನು ವಾಪಸ್ ನೀಡಲು ಅವಕಾಶ ಇರಲಿಲ್ಲ.
ಸರ್ಕಾರ ಹಣವನ್ನು ಮುಟ್ಟುಗೋಲು ಹಾಕಿಕೊಂಡು ಹೊಸದಾಗಿ ಟೆಂಡರ್ ಕರೆಯಬೇಕಿತ್ತು. ಆದರೆ ಡಿಎಲ್ಎಫ್ ಸಂಸ್ಥೆಗೆ 400 ಕೋಟಿ ರೂ.ಗಳನ್ನು ಯಡಿಯೂರಪ್ಪ ವಾಪಸ್ ಕೊಟ್ಟಿದ್ದಾರೆ. ಇದಕ್ಕೆ ಎಷ್ಟು ಕಿಕ್ಬ್ಯಾಕ್ ಪಡೆಯಲಾಗಿದೆ ಮತ್ತು ಅದರಲ್ಲಿ ಬಿಜೆಪಿ ಹೈಕಮಾಂಡ್ಗೆ ಎಷ್ಟು ಪಾಲು ನೀಡಲಾಗಿದೆ ಎಂದು ವಿಜಯೇಂದ್ರ ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.
ಯೋಜನೆಯ ಇತಿಹಾಸವನ್ನು ಎಳೆಎಳೆಯಾಗಿ ಬಿಡಿಸಿಟ್ಟ ಬಾಲಕೃಷ್ಣ ಅವರು, 2013ರಿಂದ 2018ರ ವರೆಗೂ ಕಾಂಗ್ರೆಸ್ ಸರ್ಕಾರ ಈ ಯೋಜನೆಗೆ ಕೈ ಹಾಕಿರಲಿಲ್ಲ. ಆದರೆ ಬಿಡದಿ ಭಾಗದ ರೈತರ ಜಮೀನುಗಳು ರೆಡ್ ಝೋನ್ನಲ್ಲಿದ್ದವು. ಅದಕ್ಕಾಗಿ ನಾವು ಅದನ್ನು ಸರಿಪಡಿಸಲು ಮುಂದಾಗಿದ್ದೇವೆ ಎಂದರು.ಬಿಜೆಪಿ, ಜೆಡಿಎಸ್ ನಾಯಕರು ಈಗ ಯೋಜನೆಯ ವಿಷಯವಾಗಿ ನಾಟಕವಾಡುತ್ತಿದ್ದಾರೆ. ಪಾತಿವೃತೆಯರಂತೆ ಮಾತನಾಡುತ್ತಿದ್ದಾರೆ. ಶೋಭಾಕ್ಕ ಇದು ನಿಮ ಯಜಮಾನರು ಮಾಡಿದ ಪಾಪದ ಕೂಸು ಎಂದು ಬಾಲಕೃಷ್ಣ ವಾಗ್ದಾಳಿ ನಡೆಸಿದರು.
ಬಿಜೆಪಿ, ಜೆಡಿಎಸ್ ಪಕ್ಷದಲ್ಲಿ ತಮ ಮಕ್ಕಳ ಪ್ರಚಾರಕ್ಕೆ ಪೈಪೋಟಿಗೆ ಬಿದ್ದಂತ್ತಿದೆ. ವಿಧಾನ ಪರಿಷತ್ ಚುನಾವಣೆ ಬಳಿಕ ವಿಜಯೇಂದ್ರ, ಅಶೋಕ್ ಅವರಿಗೆ ಅಸ್ತಿತ್ವದ ಭಯ ಕಾಡುತ್ತಿದೆ ಮತ್ತು ವೈದ್ಯರ ಸಲಹೆ ಮೇರೆಗೆ ಅವರು ಆರೋಗ್ಯ ಸುಧಾರಣೆಗೆ ಪಾದಯಾತ್ರೆ ನಡೆಸಲು ಬಿಡದಿ ಯೋಜನೆಯನ್ನು ನೆಪ ಮಾಡಿಕೊಂಡಿದ್ದಾರೆ ಎಂದರು.ಕುಮಾರಸ್ವಾಮಿ ತಾವು ಯೋಜನೆಗೆ ಸಹಿ ಹಾಕಿಲ್ಲ ಎಂದಿದ್ದಾರೆ. ಅದಕ್ಕೆ ನಾವು ವಿಧಾನಸಭೆಯಲ್ಲಿ ಮಾಹಿತಿ ನೀಡುತ್ತೇವೆ. ಆರ್.ಆಶೋಕ್ ತಾವು ಸಹಿ ಹಾಕಿಲ್ಲ ಎನ್ನುತ್ತಿದ್ದಾರೆ. ಅವರ ಮುಖ್ಯಮಂತ್ರಿಯೇ ಸಹಿ ಹಾಕಿದ್ದ ಮೇಲೆ ಸಚಿವರ ಸಹಿ ಅಗತ್ಯ ಇರುವುದಿಲ್ಲ ಎಂದು ಹೇಳಿದರು.
ವಿಧಾನಮಂಡಲದಲ್ಲಿ ವಿರೋಧ ಪಕ್ಷದವರು ಪ್ರಸ್ತಾಪಿಸುವ ಮೊದಲು ನಾವೆ ಸ್ವಯಂ ಪ್ರೇರಿತವಾಗಿ ವಿಷಯ ಮಂಡಿಸಿ ಎಲ್ಲಾ ವಿಚಾರಗಳನ್ನು ಬಿಚ್ಚಿಡುತ್ತೇವೆ ಎಂದರು.ಪಾದಯಾತ್ರೆಯ ಹೆಸರಿನಲ್ಲಿ ಪಶ್ಚಾತ್ತಾಪದ ಯಾತ್ರೆ ನಡೆಸುತ್ತಿರುವವರು ನಮ ಪ್ರಶ್ನೆಗಳಿಗೆ ಉತ್ತರ ಕೊಡಲಿ ಎಂದು ಸವಾಲು ಹಾಕಿದರು.ಕುಣಿಗಲ್ ಶಾಸಕ ಎಚ್.ಡಿ.ರಂಗನಾಥ್, ಕೆಪಿಸಿಸಿ ಮಾಧ್ಯಮ ಘಟಕದ ಅಧ್ಯಕ್ಷ ರಮೇಶ್ ಬಾಬು, ಕೆಪಿಸಿಸಿ ಸಾಮಾಜಿಕ ಜಾಲತಾಣದ ಅಧ್ಯಕ್ಷೆ ಐಶ್ವರ್ಯ ಮಹದೇವ್ ಮತ್ತಿತರರು ಉಪಸ್ಥಿತರಿದ್ದರು.
