ಚಿಕ್ಕಬಳ್ಳಾಪುರ, ಜು.18- ನಗರದ ಮನೆಯೊಂದರ ಮುಂದೆ ಬೈಕ್ ಕಳ್ಳತನಕ್ಕೆ ಯತ್ನಿಸಿದ ಕಳ್ಳರಿಬ್ಬರು ಸಾರ್ವಜನಿಕರು ಬೆನ್ನತ್ತಿದ್ದರಿಂದ ತಮ್ಮ ಬೈಕನ್ನೇ ಬಿಟ್ಟು ಪರಾರಿಯಾಗಿರುವ ಸ್ವಾರಸ್ಯಕರ ಘಟನೆ ಬೆಳಗಿನ ಜಾವ ನಡೆದಿದೆ.
ನಗರದ ನಾಗಲಮುದ್ದಮ ದೇವಸ್ಥಾನದ ಬಳಿ ಬೆಳಗಿನ ಜಾವ 2 ಗಂಟೆ ಸುಮಾರಿನಲ್ಲಿ ಮನೆಯಲ್ಲಿ ಕ್ರಿಕೆಟ್ ವ್ಯಾಚ್ ನೋಡುವುದರಲ್ಲಿ ಮಗ್ನರಾಗಿದ್ದ ಸಂದರ್ಭದಲ್ಲಿ ಕಳ್ಳರು ಈ ಕೃತ್ಯಕ್ಕೆ ಮುಂದಾಗಿ ಬೈಕ್ ಹ್ಯಾಂಡಲ್ ಮುರಿಯಲು ಪ್ರಯತ್ನಿಸಿದ್ದಾರೆ. ಅಚಾನಕ್ಕಾಗಿ ಏನೋ ಶಬ್ದವಾಯಿತು ಎಂದು ತಕ್ಷಣವೇ ಗಮನಿಸಿದ ಮನೆಯವರು ಕೂಡಲೇ ಕೂಗಿಕೊಳ್ಳುತ್ತಾ ಸುತ್ತಲಿನ ಜನರನ್ನು ಎಚ್ಚರಿಸಿದ್ದಾರೆ.
ಕಳ್ಳರನ್ನು ಸ್ಥಳೀಯರು ಬೆನ್ನತ್ತಿ ಹಿಡಿಯಲು ಪ್ರಯತ್ನಿಸಿದಾಗ ತಮ ಹೀರೊಹೊಂಡ ಬೈಕನ್ನೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ಸ್ಥಳೀಯ ನಿವಾಸಿ ಅಭಿಷೇಕ್ ತಿಳಿಸಿದ್ದಾರೆ.
ಸದ್ಯ ಕಳ್ಳರ ದ್ವಿಚಕ್ರವಾಹನವನ್ನು ವಶಕ್ಕೆ ಪಡೆದು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
