Homeರಾಜ್ಯಚನ್ನಮ್ಮನವರ ಅಂತಿಮ ಯಾತ್ರೆ - LIVE

ಚನ್ನಮ್ಮನವರ ಅಂತಿಮ ಯಾತ್ರೆ – LIVE

Chennamma Devegowda's final journey today

ಹಾಸನ,ಜು.20- ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಧರ್ಮಪತ್ನಿ ಚನ್ನಮ ದೇವೇಗೌಡ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಗೆ ಆಗಮಿಸುವ ಗಣ್ಯಾತಿಗಣ್ಯರ ಅನುಕೂಲಕ್ಕಾಗಿ 5 ತಾತ್ಕಾಲಿಕ ಹೆಲಿಪ್ಯಾಡ್‌ಗಳನ್ನು ನಿರ್ಮಾಣ ಮಾಡಲಾಗಿತ್ತು.

ಚನ್ನಮರವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ರಾಜ್ಯ ಹಾಗೂ ರಾಷ್ಟ್ರಮಟ್ಟದ ಗಣ್ಯಾತಿಗಣ್ಯರು ಹಾಸನಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಹಾಸನ ಜಿಲ್ಲಾಡಳಿತವು ಸೂಕ್ತ ಸಿದ್ಧತೆಗಳನ್ನು ಕೈಗೊಂಡಿತ್ತು.ಹರದನಹಳ್ಳಿ, ಹೊಳೆನರಸೀಪುರ ಸೇರಿದಂತೆ ಒಟ್ಟು 5 ತಾತ್ಕಾಲಿಕ ಹೆಲಿಪ್ಯಾಡ್‌ಗಳ ನಿರ್ಮಾಣ ಮಾಡಲಾಗಿತ್ತು. ಜಿಲ್ಲಾಡಳಿತವು ಗಣ್ಯರ ಸುಗಮ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕೈಗೊಂಡಿತ್ತು.

ಅಂತಿಮ ಯಾತ್ರೆ :
ಹೊಳೆನರಸೀಪುರದಲ್ಲಿರುವ ರೇವಣ್ಣ ಅವರ ನಿವಾಸದಲ್ಲಿ ಚನ್ನಮ ಅವರ ಪಾರ್ಥಿವ ಶರೀರಕ್ಕೆ ಸಂಪ್ರದಾಯದಂತೆ ಪೂಜೆ ಸಲ್ಲಿಸಿದ ನಂತರ ಅಂತಿಮ ಯಾತ್ರೆಯ ಮೆರವಣಿಗೆ ಆರಂಭವಾಯಿತು.ಹೊಳೆನರಸೀಪುರದಂದ ಹರದನಹಳ್ಳಿಯವರೆಗೆ ಸಾಗಿದ ಮೆರವಣಿಗೆಯ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ಕಿಕ್ಕಿರಿದು ನಿಂತು ಅಂತಿಮ ದರ್ಶನ ಪಡೆದು ಶೋಕ ವ್ಯಕ್ತಪಡಿಸಿ ವಿದಾಯ ಹೇಳಿದರು.

ಮನೆಯ ಮುಂದೆ, ಮನೆಯ ಮೇಲೆ, ಸೇತುವೆ ಮೇಲೆ ನಿಂತು ಪಾರ್ಥಿವ ಶರೀರ ಹೊತ್ತೊಯ್ಯುತ್ತಿದ್ದ ವಾಹನವನ್ನು ಮೆರವಣಿಗೆಯುದ್ದಕ್ಕೂ ಜನರು ವೀಕ್ಷಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡುಬಂದಿತು.ಹರದನಹಳ್ಳಿಯಲ್ಲಿ ಕೆಲಕಾಲ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಕೆಲಕಾಲ ಅನುವು ಮಾಡಿಕೊಡಲಾಗಿತ್ತು. ಆ ನಂತರ ಮಾವಿನಕೆರೆ (ಕ್ಯಾತನಹಳ್ಳಿ) ಬೆಟ್ಟದ ಶ್ರೀ ರಂಗನಾಥಸ್ವಾಮಿ ತಪ್ಪಲಿನಲ್ಲಿ ಸಿದ್ಧಪಡಿಸಿದ್ದ ಅಂತ್ಯ ಸಂಸ್ಕಾರದ ಸ್ಥಳಕ್ಕೆ ಕೊಂಡೊಯ್ಯಲಾಯಿತು.

2 ಸಾವಿರಕ್ಕೂ ಹೆಚ್ಚು ಪೊಲೀಸ್‌‍ ಸಿಬ್ಬಂದಿ ನಿಯೋಜನೆ
ಹಾಸನ, ಜು.20- ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಪತ್ನಿ ಚನ್ನಮ ಅವರ ಅಂತ್ಯಕ್ರಿಯೆಗೆ ಮುಖ್ಯಮಂತ್ರಿ ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗಿರಲಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಸೇರಿದಂತೆ 2 ಸಾವಿರಕ್ಕೂ ಹೆಚ್ಚು ಪೊಲೀಸ್‌‍ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌‍ ಮಹಾ ನಿರ್ದೇಶಕರಾದ ಹಿತೇಂದ್ರ ಅವರು ತಿಳಿಸಿದ್ದಾರೆ.

ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಮೊಕ್ಕಾಂ ಹೂಡಿರುವ ಅವರು ಈ ಸಂಜೆಯೊಂದಿಗೆ ಮಾತನಾಡಿ, ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ಬಳಿಯ ಶ್ರೀ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಚನ್ನಮ ಅವರ ಅಂತ್ಯಕ್ರಿಯೆ ನಡೆಯಲಿದ್ದು, ರಾಜಕೀಯ ಗಣ್ಯರು ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ 5 ಹೆಲಿಪ್ಯಾಡ್‌ಗಳನ್ನು ನಿರ್ಮಾಣ ಮಾಡಲಾಗಿದ್ದು, ಭದ್ರತೆಗಾಗಿ ಹಿರಿಯ ಪೊಲೀಸ್‌‍ ಅಧಿಕಾರಿಗಳ ನೇತೃತ್ವದಲ್ಲಿ 2 ಸಾವಿರ ಪೊಲೀಸ್‌‍ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದರು.

ಐವರು ಎಸ್ಪಿಗಳು, 15 ಎಎಸ್ಪಿಗಳು, 17 ಕೆಎಸ್‌‍ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದ್ದು, ಜೊತೆಗೆ 7 ಆ್ಯಂಬುಲೆನ್‌್ಸಗಳು, ಅಗ್ನಿಶಾಮಕ ವಾಹನಗಳನ್ನು ಸಹ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.ದಕ್ಷಿಣ ವಲಯದ ಐಜಿಪಿ ಸೇರಿದಂತೆ ಹಿರಿಯ, ಕಿರಿಯ ಅಧಿಕಾರಿಗಳು ಹೊಳೆನರಸೀಪುರದಲ್ಲಿ ಬಂದೋಬಸ್ತ್‌ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಅವರು ತಿಳಿಸಿದರು.

ಅಭಿಮಾನಿಗಳು, ಕಾರ್ಯಕರ್ತರಿಗೆ ಅನ್ನದಾನ
ಬೆಂಗಳೂರು, ಜು.20- ಮನೆಗೆ ಬಂದವರಿಗೆ ಹೊಟ್ಟೆ ತುಂಬಾ ಊಟ ಬಡಿಸಿ ಅನ್ನಪೂರ್ಣೆಯಂತಿದ್ದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಪತ್ನಿ ಚನ್ನಮ ಅವರ ಅಂತಿಮ
ದರ್ಶನಕ್ಕೆ ಸಾಗರೋಪಾದಿಯಲ್ಲಿ ಬಂದಿದ್ದ ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಮನೆಗೆ ಯಾರೇ ಬಂದರೂ ಸಹ ಮೊದಲು ಅವರನ್ನು ಸತ್ಕರಿಸಿ ನಂತರ ಊಟ ಬಡಿಸಿ ಆತೀಯವಾಗಿ ಮಾತನಾಡಿಸುತ್ತಿದ್ದ ಚನ್ನಮ ಅವರ ನಿಧನಕ್ಕೆ ಹಾಸನ ಜಿಲ್ಲೆಯ ಜನತೆ ಕಂಬನಿ ಮಿಡಿದಿದ್ದಾರೆ. ಅವರ ಸೇವೆಯನ್ನು ಸರಿಸುತ್ತಾ ಇಂದು ಅಪಾರ ಸಂಖ್ಯೆಯಲ್ಲಿ ಜನರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

ದೂರದೂರುಗಳಿಂದ ಚನ್ನಮ ಅವರ ಅಂತಿಮ ದರ್ಶನಕ್ಕೆ ಬಂದ ಸಾರ್ವಜನಿಕರಿಗೆ ಹಲವಾರು ಬಾಣಸಿಗರು ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ನಿರಂತರವಾಗಿ ಕುಟುಂಬದ ವತಿಯಿಂದ ಕಲ್ಪಿಸಲಾಗಿತ್ತು.ದಾನಧರ್ಮ, ಕರುಣೆ ವಾತ್ಸಲ್ಯದಲ್ಲಿ ಮೇಲುಗೈ ತೋರಿದ್ದ ಅವರು ತಾಯಿಯಂತೆ ಎಲ್ಲರನ್ನೂ ಪ್ರೀತೀಸುತ್ತಿದ್ದು, ಅತ್ಯಂತ ಸರಳ ವ್ಯಕ್ತಿತ್ವ ಅವರದ್ದಾಗಿದ್ದು, ಅವರ ನಿಧನದಿಂದ ಜನತೆ ತೀವ್ರ ದುಃಖ ವ್ಯಕ್ತಪಡಿಸುತ್ತಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಚನ್ನಮನ ಗುಣಗಾನ
ಬೆಂಗಳೂರು, ಜು.20- ಮತ್ತೆ ಮರಳಿ ಬಾರದೂರಿಗೆ ಪ್ರಯಾಣ ಬೆಳೆಸಿದ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಅವರ ಧರ್ಮಪತ್ನಿ ಚನ್ನಮ ಅವರಿಗೆ ಅಶ್ರುತರ್ಪಣದ ವಿದಾಯ ನೀಡಲಾಯಿತು. ಶನಿವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದ ಚನ್ನಮ ಅವರ ಅಗಲಿಯ ದುಃಖ. ದೇವೇಗೌಡರ ಕುಟುಂಬಕ್ಕೆ ಅಷ್ಟೇ ಅಲ್ಲ; ಅವರ ಒಡನಾಟವಿದ್ದ ಎಲ್ಲರಿಗೂ ಆಗಿದೆ ಎಂದರೆ ತಪ್ಪಾಗಲಾರದು.ಸರಳ, ಸಜ್ಜನಿಕೆಯ ಸಹಕಾರ ಮೂರ್ತಿಯಂತಿದ್ದ ಚನ್ನಮ ಅವರು ತ್ಯಾಗಮಯಿ ಮಾತ್ರವಲ್ಲ, ಕರುಣಾಮಯಿ, ಕ್ಷಮಾಮಯಿಯೂ ಆಗಿದ್ದರು. ಚನ್ನಮ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಗಣ್ಯರು, ಅತಿ ಗಣ್ಯರು, ಬಂಧು- ಬಾಂಧವರು, ಹಿತೈಷಿಗಳು ಮಾಡಿದ ಸರಣೆ, ಗುಣಗಾನವನ್ನು ನೋಡಿದರೆ ಅವರೊಬ್ಬ ಮಹಾಮಾತೆ ಎಂದೇ ಬಣ್ಣಿತರಾಗಿದ್ದಾರೆ.

ಶತ್ರುಗಳಿಗೂ ಕೇಡು ಬಯಸದ ಅವರ ಸಂಸ್ಕಾರಯುತ ಮಾನವೀಯ ಗುಣ ಎಲ್ಲರನ್ನೂ ಬೆರಗುಗೊಳಿಸಿದೆ. ಮನೆಗೆ ಬಂದ ಅತಿಥಿಗಳಿಗೆ ಚನ್ನಮ ಅವರು ನೀಡುತ್ತಿದ್ದ ಆತಿಥ್ಯವನ್ನು ಎಲ್ಲರೂ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ದೈವ ಭಕ್ತರಾದ ಅವರು ಸಂಸಾರವನ್ನು ಸಮಚಿತ್ತ ಭಾವದಿಂದ ನಿಭಾಯಿಸಿರುವುದು ಇತರ ಗೃಹಿಣಿಯರಿಗೆ ಆದರ್ಶವಾಗಿದೆ. ಗಣ್ಯರು ಮಾಡಿರುವ ಗುಣಗಾನವನ್ನು ಗಮನಿಸಿದರೆ, ಸಂಸಾರದ ನೌಕೆಯನ್ನು ಗೃಹಣಿಯೊಬ್ಬರು ಯಾವ ರೀತಿ ಮುನ್ನಡೆಸಬೇಕು, ಸಂಸ್ಕಾರಯುತರನ್ನಾಗಿ ಮಕ್ಕಳನ್ನು ಹೇಗೆ ಬೆಳಸಬೇಕು, ಅತಿಥಿಗಳನ್ನು ಹೇಗೆ ಸತ್ಕರಿಸಬೇಕು, ಇದಕ್ಕೂ ಮಿಗಿಲಾಗಿ ಪತಿಯ ಕಷ್ಟ-ಸುಖಗಳಲ್ಲಿ ಭಾಗಿಯಾಗಿ ಅವರ ಶ್ರೇಯೋಭಿವೃದ್ಧಿಗೆ ಹೇಗೆ ಶ್ರಮಿಸಬೇಕು ಎಂಬುದಕ್ಕೆ ಉತ್ತಮ ಮಾದರಿಯಾಗಿದ್ದಾರೆ.

ಸಿರಿ ಬಂದಾಗ ಹಿಗ್ಗದೆ, ಕಷ್ಟ ಬಂದಾಗ ಕುಗ್ಗದೆ, ದೈವಸರಣೆಯಲ್ಲೇ ಬದುಕನ್ನು ಸಾಗಿಸಿ ತುಂಬು ದಾಂಪತ್ಯದ ಸಾರ್ಥಕತೆಯನ್ನು ಚನ್ನಮ ಪಡೆದರು. ದೇವೇಗೌಡರು ಪ್ರಧಾನಿಯಾದಾಗಲೂ ಹಮು-ಬಿಮು ತೋರದೆ ತಮ ಸರಳತೆಯನ್ನು ಕಾಪಾಡಿಕೊಂಡು ಬಂದ ಅನ್ನಪೂರ್ಣೇಶ್ವರಿ. ಅರವತ್ತು ದಶಕಗಳಿಗೂ ಹೆಚ್ಚು ಕಾಲ ಗೌಡರು ರಾಜಕೀಯದಲ್ಲಿದ್ದರೂ ಒಮೆಯೂ ರಾಜಕೀಯ ವಿಚಾರಕ್ಕಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಸಹನಾಮೂರ್ತಿ ಚನ್ನಮ ಹೆಚ್ಚು ಗೌಡರೊಂದಿಗೆ ಕಾಣಿಸಿಕೊಂಡದ್ದು ದೇವಾಲಯಗಳಲ್ಲಿ ಮಾತ್ರ.

ದೇವರ ಮೇಲಿನ ಅಚಲವಾದ ಶ್ರದ್ಧಾ ಭಕ್ತಿಯಿಂದಲೇ ಆಸಿಡ್‌ ದಾಳಿಯ ಸಂದರ್ಭದಲ್ಲೂ ಅವರು ಸಾವನ್ನು ಜಯಿಸಿ 72 ವರ್ಷಕ್ಕೂ ಹೆಚ್ಚು ಕಾಲ ಗೌಡರೊಂದಿಗೆ ಅನ್ಯೋನ್ಯ ಮತ್ತು ಆದರ್ಶವಾಗಿ ಬಾಳ್ವೆ ನಡೆಸಿದರು. ಗೌಡರ ಪ್ರಗತಿಯ ಪಥದ ಹಿಂದಿನ ಪ್ರೇರಕ ಶಕ್ತಿ ಆಗಿದ್ದರು ಎಂಬುದು ಚನ್ನಮ ಅವರನ್ನು ಬಲ್ಲವರ ಮೆಚ್ಚುಗೆ ಮಾತುಗಳು.

RELATED ARTICLES

Latest News