Homeರಾಷ್ಟ್ರೀಯಸಂಸತ್ತಿನಲ್ಲಿ ಪ್ರತಿದ್ವನಿಸಿದ ನೀಟ್‌ ಅಕ್ರಮ, ರಾಮಮಂದಿರ ದೇಣಿಗೆ ಕಳವು : ಉಭಯ ಸದನಗಳು ಮುಂದೂಡಿಕೆ

ಸಂಸತ್ತಿನಲ್ಲಿ ಪ್ರತಿದ್ವನಿಸಿದ ನೀಟ್‌ ಅಕ್ರಮ, ರಾಮಮಂದಿರ ದೇಣಿಗೆ ಕಳವು : ಉಭಯ ಸದನಗಳು ಮುಂದೂಡಿಕೆ

NEET irregularities, Ram temple donation theft echo in Parliament: Both Houses adjourned

ನವದೆಹಲಿ, ಜು.20- ನಿರೀಕ್ಷೆಯಂತೆ ಸಂಸತ್ತಿನ ಉಭಯ ಸದನಗಳಲ್ಲಿ ರಾಮಮಂದಿರ ಹುಂಡಿ ಕಳವು, ನೀಟ್‌ ಅಕ್ರಮ, ಜಂತರ್‌ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಸೇರಿದಂತೆ ಹಲವು ವಿಷಯಗಳು ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರುಗಳ ನಡುವೆ ಭಾರೀ ಮಾತಿನ ಚಕಮಕಿ ನಡೆದು ಕಲಾಪವನ್ನು ಮುಂದೂಡಲಾಯಿತು. ಬೆಳಿಗ್ಗೆ 11 ಗಂಟೆಗೆ ದಿನದ ಕಲಾಪ ಆರಂಭವಾಗುತ್ತಿದ್ದಂತೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಪ್ರತಿಪಕ್ಷದ ಸದಸ್ಯರು ಇತ್ತೀಚಿನ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮುಗಿಬಿದ್ದರು.

ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್‌ಗಾಂಧಿ ಅವರು ವಿಷಯ ಪ್ರಸ್ತಾಪಿಸಿ ನೀಟ್‌ ಅಕ್ರಮದಲ್ಲಿ ಶಿಕ್ಷಣ ಸಚಿವ ಧಮೇಂದ್ರ ಪ್ರದಾನ್‌ ರಾಜೀನಾಮೆ ನೀಡಬೇಕು. ಉ.ಪ್ರದೇಶದ ಲಕ್ನೋದಲ್ಲಿರುವ ಅಯೋಧ್ಯೆಯ ರಾಮಮಂದಿರ ದೇವಸ್ಥಾನದಲ್ಲಿ ನಡೆದಿರುವ ಹುಂಡಿ ಕಳವು ಪ್ರಕರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಜು ದಿನದ ಕಲಾಪವನ್ನು ಸ್ಪೀಕರ್‌ ಓಂಬಿರ್ಲಾ ಅವರು ಈಗಾಗಲೇ ನಿಗದಿಪಡಿಸಿರುವಂತೆ ನಡೆಸುತ್ತಾರೆ. ಪ್ರತಿಪಕ್ಷಗಳು ಪ್ರಸ್ತಾಪಿಸಿರುವ ವಿಷಯಕ್ಕೆ ಸಮಯವನ್ನು ನಿಗದಿಪಡಿಸುತ್ತಾರೆ. ಮೊದಲು ಕಲಾಪ ನಡೆಯಲು ಅವಕಾಶ ಕೊಡಿ ಎಂದು ಮನವಿ ಮಾಡಿದರು.

ಇದನ್ನು ಒಪ್ಪದ ಪ್ರತಿಪಕ್ಷಗಳು ಮೊದಲು ನೀಟ್‌ ಅಕ್ರಮ, ಜಂತರ್‌ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ವಿಷಯದ ಕುರಿತು ಚರ್ಚೆಯಾಗಲೇಬೇಕೆಂದು ಪಟ್ಟು ಹಿಡಿದರು. ಪ್ರತಿಪಕ್ಷಗಳು ಎತ್ತುತ್ತಿರುವ ವಿಷಯದಲ್ಲಿ ಸರ್ಕಾರ ಯಾವುದನ್ನೂ ಮರೆಮಾಚುತ್ತಿಲ್ಲ. ಎಲ್ಲಾ ವಿಷಯಗಳಿಗೂ ಸಮರ್ಪಕವಾದ ಉತ್ತರವನ್ನು ಸರ್ಕಾರ ನೀಡಲಿ. ಆದರೆ ಇಂತಹುದೇ ವಿಷಯ ಕೈಗೆತ್ತಿಕೊಳ್ಳಬೇಕೆಂದು ಸ್ಪೀಕರ್‌ ಮೇಲೆ ಒತ್ತಡ ಹಾಕುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.

ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರುಗಳ ನಡುವೆ ಭಾರೀ ಮಾತಿನ ಕೋಲಾಹಲ, ಆರೋಪ-ಪ್ರತ್ಯಾರೋಪಗಳು ನಡೆದವು.ಇದೇ ವೇಳೆ ಡಿಎಂಕೆ ಸದಸ್ಯರು ಮೇಕೆದಾಟು ನದಿ ನೀರು ಯೋಜನೆ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ನಿಲುವಳಿ ಸೂಚನೆ ಮಂಡಿಸಲು ಮುಂದಾದರು. ಸ್ಪೀಕರ್‌ ಇದಕ್ಕೆ ಅವಕಾಶ ಕೊಡಲಿಲ್ಲ.

ಇದರಿಂದ ಅಸಮಾಧಾನಗೊಂಡ ಡಿಎಂಕೆ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಹೀಗೆ ಲೋಕಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಗದ್ದಲ ಉಂಟಾಗಿದ್ದರಿಂದ ಸ್ಪೀಕರ್‌ ಓಂಬಿರ್ಲಾ ಕಲಾಪವನ್ನು ಮುಂದೂಡಿದರು.

RELATED ARTICLES

Latest News