ಬೆಂಗಳೂರು, ಜು.20- ವಾರದೊಳಗಾಗಿ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇರುವುದರಿಂದ ಅವಕಾಶ ಗಿಟ್ಟಿಸಲು ತೀವ್ರ ಲಾಬಿ ನಡೆಸುತ್ತಿದ್ದು, ಹಿರಿಯ ಶಾಸಕರು ದೆಹಲಿಯಲ್ಲೇ ಬೀಡುಬಿಟ್ಟಿದ್ದು, ವರಿಷ್ಠರನ್ನು ಪದೇ ಪದೇ ಭೇಟಿ ಮಾಡುತ್ತಿದ್ದಾರೆ. ಹಿರಿಯ ಶಾಸಕರಾದ ಆರ್.ವಿ.ದೇಶಪಾಂಡೆ, ಆರ್.ಬಿ.ತಿಮಾಪೂರ್, ಬಸವರಾಜರಾಯ ರೆಡ್ಡಿ ಸೇರಿದಂತೆ ಹಲವಾರು ಮಂದಿ ದೆಹಲಿಯಲ್ಲೇ ಉಳಿದಿದ್ದಾರೆ.
ಕಳೆದ ವಾರ ಕಾಂಗ್ರೆಸ್‌ನ ಹೈಕಮಾಂಡ್ ನಾಯಕರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರನ್ನು ದೆಹಲಿಗೆ ಆಹ್ವಾನಿಸಿ, ಸಂಪುಟ ವಿಸ್ತರಣೆ, ಪಕ್ಷ ಸಂಘಟನೆ ಸೇರಿದಂತೆ ಮಹತ್ವದ ವಿಚಾರಗಳನ್ನು ಚರ್ಚೆ ನಡೆಸಿದ್ದರು. ಆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ದೆಹಲಿಯಲ್ಲಿ ಇಲ್ಲದ ಕಾರಣಕ್ಕೆ ಚರ್ಚೆ ಅಪೂರ್ಣವಾಗಿತ್ತು.
ಆಗಸ್ಟ್ ಮೊದಲ ವಾರದಿಂದ ವಿಧಾನಮಂಡಲ ಅಧಿವೇಶ ಆರಂಭವಾಗಲಿದೆ. ಅದಕ್ಕೂ ಮೊದಲೆ ವಾರದೊಳಗಾಗಿ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ನಿನ್ನೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆಗಳು ಮತ್ತು ಲಾಬಿಗಳು ಜೋರಾಗಿವೆ. ಕಳೆದವಾರ ದೆಹಲಿಗೆ ತೆರಳಿದ್ದ ಕೆಲವು ಶಾಸಕರು ಬೆಂಗಳೂರಿಗೆ ವಾಪಸ್ಸಾಗಿಲ್ಲ. ದೆಹಲಿಯಲ್ಲೇ ಉಳಿದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್‌ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಶಾಸಕ ಅಜಯ್ ಸಿಂಗ್, ಈ ಬಾರಿ ನನಗೆ ಸಂಪುಟದಲ್ಲಿ ಅವಕಾಶ ಸಿಗಲಿದೆ ಎಂಬ ವಿಶ್ವಾಸವಿದೆ. ಎಲ್ಲಾ ನಾಯಕರು ನನ್ನ ಪರವಾಗಿ ಮಾತನಾಡಿದ್ದಾರೆ. ಈ ಹಿಂದೆಯೂ ಆಶ್ವಾಸನೆ ನೀಡಲಾಗಿತ್ತು ಎಂದು ಹೇಳಿದ್ದಾರೆ.ನಾಳೆ ಎಐಸಿಸಿ ಅಧ್ಯಕ್ಷರ ಹುಟ್ಟುಹಬ್ಬವಿದೆ. ಹೀಗಾಗಿ ಅವರಿಗೆ ಶುಭ ಹಾರೈಸಲು ದೆಹಲಿಗೆ ತೆರಳುತ್ತಿದ್ದೇನೆ. ಈ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕರ ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ.
ಶಾಸಕ ಬೇಳೂರು ಕೃಷ್ಣ ಮಾತನಾಡಿ, ಸಚಿವ ಸ್ಥಾನಕ್ಕಾಗಿ ನಾನು ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಎಲ್ಲರೂ ಆವಕಾಶ ಕೇಳುತ್ತಾರೆ. ಆದರೆ ನಿರ್ಧರಿಸುವುದು ಹೈಕಮಾಂಡ್ ಎಂದಿದ್ದಾರೆ. ಸಂಪುಟದಲ್ಲಿ ಹೊಸಬರಿಗೆ ಅವಕಾಶ ನೀಡುವಂತೆ ರಾಹುಲ್ ಹೇಳಿದ್ದಾರೆ. ಜಾತಿ ಮತ್ತು ಸಮುದಾಯಕ್ಕೆ ಆದ್ಯತೆ ಮೇರೆಗೆ ಮತ್ತು ಜಿಲ್ಲಾವಾರು ಪ್ರಾತಿನಿದ್ಯವನ್ನು ಪರಿಗಣಿಸಬೇಕು ಎಂದಿದ್ದಾರೆ. ಇಂದು ಸಂಜೆ ದೆಹಲಿಗೆ ಪ್ರಯಾಣಿಸುತ್ತಿದ್ದೇನೆ. ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡುತ್ತೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
