Homeರಾಷ್ಟ್ರೀಯದೆಹಲಿಯಲ್ಲಿ ಜಿರಲೆಗಳ 'ಚಲೋ ಸಂಸತ್‌' ಹೈಡ್ರಾಮಾ : ಲಾಠಿಚಾರ್ಜ್‌, ಇಂಟರ್‌ನೆಟ್‌‍ ಸ್ಥಗಿತ

ದೆಹಲಿಯಲ್ಲಿ ಜಿರಲೆಗಳ ‘ಚಲೋ ಸಂಸತ್‌’ ಹೈಡ್ರಾಮಾ : ಲಾಠಿಚಾರ್ಜ್‌, ಇಂಟರ್‌ನೆಟ್‌‍ ಸ್ಥಗಿತ

Mobile Internet Reportedly Suspended in Parts of Central Delhi Amid 'Chalo Sansad' Protest

ನವದೆಹಲಿ,ಜು.20- ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವಾದ ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತೀವ್ರ ರಾಜಕೀಯ ಹಾಗೂ ಆಡಳಿತಾತಕ ಬಿಕ್ಕಟ್ಟು ಸೃಷ್ಟಿಯಾಗಿದೆ.
ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌‍ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಶಿಕ್ಷಣ ವಲಯದ ಅವ್ಯವಸ್ಥೆಗಳನ್ನು ಖಂಡಿಸಿ, ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್‌ ಜನತಾ ಪಾರ್ಟಿ ಹಮಿಕೊಂಡಿದ್ದ ಚಲೋ ಸಂಸತ್‌ ಮುಷ್ಕರವು ಹಿಂಸಾತಕ ರೂಪ ಪಡೆದುಕೊಂಡಿದೆ.

ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಂತರ್‌ ಮಂತರ್‌ ಬಳಿ ಲಘು ಲಾಠಿಚಾರ್ಜ್‌ ನಡೆಸಿದ್ದು, ಮುಂಜಾಗ್ರತಾ ಕ್ರಮವಾಗಿ ಕೇಂದ್ರ ದೆಹಲಿಯ ಕೆಲವು ಆಯ್ದ ಭಾಗಗಳಲ್ಲಿ ಮೊಬೈಲ್‌ ಇಂಟರ್ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಸಾಮಾಜಿಕ ಜಾಲತಾಣದಿಂದ ಬೀದಿಗೆ ಬಂದ ಚಳವಳಿ :
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆಯೊಂದಕ್ಕೆ ತಿರುಗೇಟು ನೀಡಲು ಅಭಿಜೀತ್‌ ದಿಪ್ಕೆ ಅವರು ಆರಂಭಿಸಿದ ಈ ಡಿಜಿಟಲ್‌ ವಿಡಂಬನಾತಕ ಒಕ್ಕೂಟ, ಪ್ರಸ್ತುತ ದೇಶದ ವಿದ್ಯಾರ್ಥಿ ಸಮೂಹದ ಬೃಹತ್‌ ಧ್ವನಿಯಾಗಿ ಮಾರ್ಪಟ್ಟಿದೆ.

ಪರೀಕ್ಷಾ ಅಕ್ರಮ ಮತ್ತು ಸಿಬಿಎಸ್‌‍ಇ ಮರುಮೌಲ್ಯಮಾಪನ ದೋಷಗಳ ವಿರುದ್ಧ ಕಳೆದ ಒಂದು ತಿಂಗಳಿನಿಂದ ಜಂತರ್‌ ಮಂತರ್‌ನಲ್ಲಿ ಧರಣಿ ನಡೆಯುತ್ತಿತ್ತು. ಸಾಮಾಜಿಕ ಪರಿಸರ ಹಾಗೂ ಶಿಕ್ಷಣ ಕಾರ್ಯಕರ್ತ ಸೋನಮ್‌ ವಾಂಗ್ಚುಕ್‌ ಅವರು ನಡೆಸುತ್ತಿದ್ದ ಸುದೀರ್ಘ ಉಪವಾಸ ಸತ್ಯಾಗ್ರಹ ಮತ್ತು ಕರೆ ನೀಡಿದ್ದ ಚಲೋ ಸಂಸತ್‌ ಚಳವಳಿ ಹಿನ್ನೆಲೆಯಲ್ಲಿ ದೇಶದ ನಾನಾ ಭಾಗಗಳಿಂದ ಸಾವಿರಾರು ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರು ದೆಹಲಿಗೆ ಲಗ್ಗೆ ಇಟ್ಟಿದ್ದರು.

ಸಂಸತ್ತಿನ ಜಂಟಿ ಅಧಿವೇಶನ ಆರಂಭವಾಗುವ ಮೊದಲ ದಿನವೇ ಸರ್ಕಾರದ ಗಮನ ಸೆಳೆಯಲು ಪ್ರತಿಭಟನಾಕಾರರು ಜಂತರ್‌ ಮಂತರ್‌ನಿಂದ ಸಂಸತ್‌ ಭವನದವರೆಗೆ ರ್ಯಾಲಿ ನಡೆಸಿ ಮುತ್ತಿಗೆ ಹಾಕಲು ಯೋಜಿಸಿದ್ದರು. ಮುಂಜಾನೆಯೇ ಜಮಾಯಿಸಿದ ಸಾವಿರಾರು ಆಕ್ರೋಶಿತ ಕಾರ್ಯಕರ್ತರು ಪೊಲೀಸರ ಭದ್ರತಾ ಕಾವಲನ್ನು ಮೀರಿ, ಬ್ಯಾರಿಕೇಡ್‌ಗಳನ್ನು ದಾಟಲು ಯತ್ನಿಸಿದರು.

ಪರಿಸ್ಥಿತಿ ನಿಯಂತ್ರಣ ಮೀರುತ್ತಿರುವುದನ್ನು ಕಂಡು ದೆಹಲಿ ಪೊಲೀಸ್‌‍ ಮತ್ತು ರಾಪಿಡ್‌ ಆಕ್ಷನ್‌ ಫೋರ್ಸ್‌ಸಿಬ್ಬಂದಿ ಹಗುರ ಲಾಠಿಚಾರ್ಜ್‌ ನಡೆಸಿ ಜನರನ್ನು ಚದುರಿಸಿದರು. ಮುಖ್ಯಸ್ಥ ಅಭಿಜೀತ್‌ ದಿಪ್ಕೆ ಸೇರಿದಂತೆ ಹಲವು ಪ್ರಮುಖ ನಾಯಕರನ್ನು ವಶಕ್ಕೆ ಪಡೆಯಲಾಯಿತು. ಮುಂಜಾಗ್ರತಾ ಕ್ರಮವಾಗಿ ದೆಹಲಿಯ ಪ್ರಮುಖ ರಾಜೀವ್‌ ಚೌಕ್‌ ಮತ್ತು ಪಟೇಲ್‌ ಚೌಕ್‌ ಮೆಟ್ರೋ ನಿಲ್ದಾಣಗಳ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಬಂದ್‌ ಮಾಡಲಾಗಿತ್ತು.

ಲಾಠಿ ಚಾರ್ಜ್‌ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳ ಮೂಲಕ ವದಂತಿಗಳು ಹರಡುವುದನ್ನು ತಡೆಯಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ದೆಹಲಿ ಆಡಳಿತವು ಕೇಂದ್ರ ದೆಹಲಿಯ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಮೊಬೈಲ್‌ ಇಂಟರ್ನೆಟ್‌ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಈ ಮೆರವಣಿಗೆಗೆ ಪೊಲೀಸರು ಯಾವುದೇ ಅಧಿಕೃತ ಅನುಮತಿ ನೀಡಿರಲಿಲ್ಲ. ಹೀಗಾಗಿ ಇಡೀ ನಗರದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್‌ 163 (ಹಳೆಯ ಸಿಆರ್‌ಪಿಸಿ 144ನೇ ವಿಧಿ) ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ತಡೆಯಲು ಇಂಟರ್ನೆಟ್‌ ಸ್ಥಗಿತ ಹಾಗೂ ಬಿಎನ್‌ಎಸ್‌‍ಎಸ್‌‍ ಸೆಕ್ಷನ್‌ ಜಾರಿ ಮಾಡುವುದು ಆಡಳಿತ ವ್ಯವಸ್ಥೆಯ ತುರ್ತು ಮತ್ತು ಪರಿಣಾಮಕಾರಿ ಅಸ್ತ್ರವಾಗಿದೆ.

ಸದ್ಯಕ್ಕೆ ದೆಹಲಿಯ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗುವಿನ ವಾತಾವರಣವಿದ್ದರೂ ಪರಿಸ್ಥಿತಿ ಸಂಪೂರ್ಣ ಹದ್ದುಬಸ್ತಿನಲ್ಲಿದೆ. ಮತ್ತೊಂದೆಡೆ, ಉದ್ವಿಗ್ನತೆಯನ್ನು ಶಮನಗೊಳಿಸಲು ದೆಹಲಿ ಪೋಲಿಸ್‌‍ ಉನ್ನತ ಅಧಿಕಾರಿಗಳ ಮೂಲಕ ಕೇಂದ್ರ ಸರ್ಕಾರವು ಸಿಜೆಪಿ ನಾಯಕರೊಂದಿಗೆ ಸಂಧಾನ ಮಾತುಕತೆಗೆ ಮುಂದಾಗಿದೆ. ಆದರೆ ಸಿಜೆಪಿ ನಾಯಕರು ಪ್ರಧಾನ ಮಂತ್ರಿಗಳು ಅಥವಾ ಕ್ಯಾಬಿನೆಟ್‌ ದರ್ಜೆಯ ಸಚಿವರೊಂದಿಗಿನ ನೇರ ಮಾತುಕತೆಗೆ ಪಟ್ಟು ಹಿಡಿದಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಪ್ರತಿಭಟನೆಗಳು ಹಿಂಸಾತಕ ರೂಪ ಪಡೆದುಕೊಳ್ಳುವುದನ್ನು ತಡೆಯಲು ಇಂಟರ್ನೆಟ್‌ ಸ್ಥಗಿತಗೊಳಿಸುವುದು ಆಡಳಿತ ವ್ಯವಸ್ಥೆಯ ತುರ್ತು ಕ್ರಮಗಳಲ್ಲೊಂದಾಗಿದೆ. ಸದ್ಯ ದೆಹಲಿಯ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗುವಿನ ವಾತಾವರಣವಿದ್ದರೂ ಪರಿಸ್ಥಿತಿ ಹದ್ದುಬಸ್ತಿನಲ್ಲಿದೆ.

ಡಿಜಿಟಲ್‌ ಜಗತ್ತಿನ ಸಣ್ಣದೊಂದು ವಿಡಂಬನಾತಕ ಆಂದೋಲನವು ಇಷ್ಟೊಂದು ಬೃಹತ್‌ ಮಟ್ಟದ ವಾಸ್ತವಿಕ ರಾಜಕೀಯ ಪ್ರತಿಭಟನೆಯಾಗಿ ಮಾರ್ಪಟ್ಟು, ದೇಶದ ರಾಜಧಾನಿಯನ್ನೇ ಸ್ತಬ್ಧಗೊಳಿಸುವ ಹಂತಕ್ಕೆ ತಲುಪಿರುವುದು ಇಂದಿನ ಯುವ ಪೀಳಿಗೆಯ ಸಾಮಾಜಿಕ ಸಂಘಟನಾ ಶಕ್ತಿಗೆ ಸಾಕ್ಷಿಯಾಗಿದೆ.ಜಂತರ್‌ ಮಂತರ್‌ ಸುತ್ತಮುತ್ತ ದೆಹಲಿ ಪೊಲೀಸ್‌‍ ಹಾಗೂ ರ್ಯಾಪಿಡ್‌ ಆಕ್ಷನ್‌ ಫೋರ್ಸ್‌ ಸಿಬ್ಬಂದಿಯನ್ನು ಬ್ಯಾರಿಕೇಡ್‌ಗಳೊಂದಿಗೆ ಸನ್ನದ್ಧ ಸ್ಥಿತಿಯಲ್ಲಿಡಲಾಗಿತ್ತು.

RELATED ARTICLES

Latest News