Homeಕ್ರೀಡಾ ಸುದ್ದಿವಿಶ್ವಕಪ್‌ ಫೈನಲ್‌ ಸಂಭ್ರಮದ ವೇಳೆ ಸ್ಪೇನ್‌- ಅರ್ಜೆಂಟೀನಾ ಆಟಗಾರರ ಘರ್ಷಣೆ: ಫಿಫಾ ತನಿಖೆ

ವಿಶ್ವಕಪ್‌ ಫೈನಲ್‌ ಸಂಭ್ರಮದ ವೇಳೆ ಸ್ಪೇನ್‌- ಅರ್ಜೆಂಟೀನಾ ಆಟಗಾರರ ಘರ್ಷಣೆ: ಫಿಫಾ ತನಿಖೆ

FIFA investigating on-pitch brawl after Spain vs Argentina World Cup final

ಈಸ್ಟ್‌ ರುದರ್‌ಫೋರ್ಡ್‌-ಜು.21- ಫಿಫಾ ವಿಶ್ವಕಪ್‌ ಫೈನಲ್‌ನಲ್ಲಿ ಸ್ಪೇನ್‌ ತಂಡದ ವಿಜಯೋತ್ಸವದ ವೇಳೆ ಅರ್ಜೆಂಟೀನಾ ಆಟಗಾರರು ಮೈದಾನದಲ್ಲೇ ಘರ್ಷಣೆಗೆ ಇಳಿದ ಘಟನೆಗೆ ಸಂಬಂಧಿಸಿ ಫಿಫಾ ಶಿಸ್ತು ಕ್ರಮದ ತನಿಖೆ ಆರಂಭಿಸಿದೆ.

ಪಂದ್ಯದ ನಂತರ ನಡೆದ ಘಟನೆಗಳು ಫಿಫಾ ಶಿಸ್ತು ಸಂಹಿತೆಯ ಉಲ್ಲಂಘನೆಯಾಗಿದೆಯೇ ಎಂಬುದನ್ನು ಪರಿಶೀಲಿಸಲು ಶಿಸ್ತು ಮತ್ತು ನೈತಿಕತಾ ವಿಭಾಗದ ವಿಶೇಷ ತನಿಖಾಧಿಕಾರಿಯನ್ನು ನೇಮಿಸಲಾಗಿದೆ ಎಂದು ಫಿಫಾ ತಿಳಿಸಿದೆ. ಘಟನೆಯ ವಿಡಿಯೊ ಮರುಪ್ರಸಾರದಲ್ಲಿ ಅರ್ಜೆಂಟೀನಾದ ಮಧ್ಯಮೈದಾನ ಆಟಗಾರ ಲಿಯಾಂಡ್ರೊ ಪರೆಡೆಸ್‌‍ ಸೇರಿದಂತೆ ಹಲವು ಆಟಗಾರರು ಘರ್ಷಣೆಯಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.

ಪರೆಡೆಸ್‌‍ ಅವರು ಸ್ಪೇನ್‌ನ ಎರಿಕ್‌ ಗಾರ್ಸಿಯಾ ಅವರ ಕುತ್ತಿಗೆಯನ್ನು ತಳ್ಳಿದಂತೆ ಕಾಣಿಸಿಕೊಂಡಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಲು ಬಂದ ಸ್ಪೇನ್‌ನ ಬದಲಿ ಆಟಗಾರ ಗಾವಿಯನ್ನು ಪರೆಡೆಸ್‌‍ ನೆಲಕ್ಕೆ ತಳ್ಳಿರುವ ದೃಶ್ಯವೂ ಕಂಡುಬಂದಿದೆ.

ಸ್ಪೇನ್‌ ನಾಯಕ ರೊಡ್ರಿ ಅವರು ಸಹ ಆಟಗಾರರೊಂದಿಗೆ ಪ್ರಶಸ್ತಿ ಸಂಭ್ರಮದಲ್ಲಿ ಭಾಗಿಯಾಗಲು ಓಡುತ್ತಿದ್ದ ವೇಳೆ ಅರ್ಜೆಂಟೀನಾದ ರಕ್ಷಣಾ ಆಟಗಾರ ನಹುಯೆಲ್‌ ಮೊಲಿನಾ ಅವರಿಂದ ಹೊಟ್ಟೆಗೆ ಹೊಡೆತ ಬಿದ್ದಂತೆ ಕಂಡುಬಂದಿದೆ. ಬಳಿಕ ಮೊಲಿನಾ ಅವರು ರೊಡ್ರಿ ಅವರನ್ನು ಸುತ್ತುವರಿದರೆ, ರೊಡ್ರಿಯ ಮಾಜಿ ಮ್ಯಾಂಚೆಸ್ಟರ್‌ ಸಿಟಿ ಸಹ ಆಟಗಾರ ನಿಕೊಲಾಸ್‌‍ ಒಟಮೆಂಡಿ ಅವರೊಂದಿಗೆ ವಾಗ್ವಾದವೂ ನಡೆದಿದೆ.

ಪರಿಸ್ಥಿತಿಯನ್ನು ನಿಯಂತ್ರಿಸಲು ಅರ್ಜೆಂಟೀನಾ ಮುಖ್ಯ ಕೋಚ್‌ ಲಿಯೋನೆಲ್‌ ಸ್ಕಲೋನಿ ಹಾಗೂ ಇತರ ಆಟಗಾರರು ಮಧ್ಯಪ್ರವೇಶಿಸಿದರು.ಈ ಪ್ರಕರಣದ ತನಿಖೆಗೆ ಯಾವುದೇ ಕಾಲಮಿತಿಯನ್ನು ಫಿಫಾ ತಿಳಿಸಿಲ್ಲ. ಅಲ್ಲದೆ, ಪಂದ್ಯದ ವೇಳೆ ಕೆಂಪು ಕಾರ್ಡ್‌ ಪಡೆಯದ ಪರೆಡೆಸ್‌‍ ಅವರ ಹೆಸರನ್ನು ಅಧಿಕೃತ ಹೇಳಿಕೆಯಲ್ಲಿ ಉಲ್ಲೇಖಿಸದಿದ್ದರೂ, ತನಿಖೆಯ ಬಳಿಕ ಅಮಾನತು ಶಿಕ್ಷೆ ಎದುರಿಸುವ ಸಾಧ್ಯತೆ ಇದೆ.

RELATED ARTICLES

Latest News