Homeರಾಜ್ಯಬೆಳ್ಳಂಬೆಳಗ್ಗೆ ಸಂಭವಿಸಿದ 2 ಪ್ರತ್ಯೇಕ ಅಪಘಾತಗಳಲ್ಲಿ ತಂದೆ-ಮಗಳು ಸೇರಿ ನಾಲ್ವರ ದುರ್ಮರಣ

ಬೆಳ್ಳಂಬೆಳಗ್ಗೆ ಸಂಭವಿಸಿದ 2 ಪ್ರತ್ಯೇಕ ಅಪಘಾತಗಳಲ್ಲಿ ತಂದೆ-ಮಗಳು ಸೇರಿ ನಾಲ್ವರ ದುರ್ಮರಣ

ಬೆಂಗಳೂರು,ಜು.21-ರಾಜ್ಯದಲ್ಲಿ ಇಂದು ಬೆಳ್ಳಂ ಬೆಳಗ್ಗೆ ಸಂಭವಿಸಿದ ಎರಡು ಪ್ರತ್ಯೇಕ ಭೀಕರ ಅಪಘಾತದಲ್ಲಿ ತಂದೆ-ಮಗಳು ಸೇರಿ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಒಂದು ಅಪಘಾತದಲ್ಲಿ ಬೊಲೆರೋ-ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬುಲೇರೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮತ್ತೊಂದು ಅಪಘಾತದಲ್ಲಿ ವಿಜಯಪುರದಲ್ಲಿ ತಂದೆ-ಮಗಳು ಅಪಘಾತಕ್ಕೆ ಬಲಿಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹುಳುವಿನಾಳ್‌ ಗೇಟ್‌ ಬಳಿ ಇಂದು ಬೆಳಗ್ಗೆ 6.30 ರ ಸುಮಾರಿನಲ್ಲಿ ಮೈಸೂರು ಕಡೆಯಿಂದ ಬರುತ್ತಿದ್ದ ಲಾರಿ ಎದುರುಗಡೆ ಬರುತ್ತಿದ್ದ ಬುಲೆರೋಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.

ಡಿಕ್ಕಿ ರಭಸಕ್ಕೆ ಬುಲೇರೋ ವಾಹನ ಚಾಲಕ ಪ್ರಭು ಹಾಗೂ ಪ್ರಯಾಣಿಕ ಹನುಮಂತ ಹೂಗಾರ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ತಂದೆ-ಮಗಳ ದುರಂತ ಅಂತ್ಯ:
ಟ್ರ್ಯಾಕ್ಟರ್‌ ನಲ್ಲಿ ಕಬ್ಬು ಕಟಾವಿಗೆ ವಿಜಯಪುರದ ಇಂಡಿಯಿಂದ ಕೂಲಿ ಕಾರ್ಮಿಕರು ತಮ ಕುಟುಂಬದೊಂದಿಗೆ ಇಂದು ಬೆಳಗಿನ ಜಾವ 6 ಗಂಟೆ ಸುಮಾರಿನಲ್ಲಿ ಮಂಡ್ಯಕ್ಕೆ ತೆರಳುತ್ತಿದ್ದಾಗ ನಿಡಗುಂದಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಮುದ್ದೇಬಿಹಾಳ ಕ್ರಾಸ್‌‍ ಬಳಿ ಹಿಂಬದಿಯಿಂದ ಅತೀ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ತಂದೆಯೊಂದಿಗೆ ಮೂರು ವರ್ಷದ ಕಂದಮ ಸಾವನ್ನಪ್ಪಿದ್ದು, ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಈ ಅಪಘಾತದಲ್ಲಿ ತಂದೆ ಗೌರೀಶ್‌ ಲೋಧಿ (25) ಮಗಳು ಪ್ರಿಯಾಂಕಾ (3) ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.ಸುದ್ದಿ ತಿಳಿದು ಸ್ಥಳಕ್ಕೆ ನಿಡಗುಂದಿ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನ ನಿಡಗುಂದಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇಬ್ಬರ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES
spot_img

Latest News