ಬೆಂಗಳೂರು, ಜು. 22- ದೇಶದ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿರುವ ನೀಟ್ ಪರೀಕ್ಷೆಯಲ್ಲಿನ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ವ್ಯವಸ್ಥೆಯ ವೈಲ್ಯವನ್ನು ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ಅವರ ನೇತೃತ್ವದಲ್ಲಿ ಇಂದು ಬಿಜೆಪಿ ರಾಜ್ಯ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್. ಮನೋಹರ್ ಅವರು, ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳು ದೇಶದ ಶಿಕ್ಷಣ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನೇ ಕುಸಿತಗೊಳಿಸಿವೆ. ಲಕ್ಷಾಂತರ ವಿದ್ಯಾರ್ಥಿಗಳ ಪರಿಶ್ರಮಕ್ಕೆ ಅನ್ಯಾಯವಾಗಿದ್ದು, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳಿಗೆ ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು ಕೇಂದ್ರ ಸರ್ಕಾರ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ ಇಲಾಖೆಯ ವೈಲ್ಯಕ್ಕೆ ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು. ನೀಟ್ ಅಕ್ರಮಗಳ ಕುರಿತು ಸಮಗ್ರ ಮತ್ತು ಪಾರದರ್ಶಕ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಶಿಕ್ಷಿಸಬೇಕು ಹಾಗೂ ದೇಶದ ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಬಿಜೆಪಿ ಕಚೇರಿಯತ್ತ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರನ್ನು ಪೊಲೀಸರು ಬ್ಯಾರಿಕೇಡ್‌ಗಳ ಮೂಲಕ ತಡೆದರು. ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಹಲವಾರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಪ್ರತಿಭಟನೆಯಲ್ಲಿ ರಾಜಾಜಿನಗರ ಬ್ಲಾಕ್ ಅಧ್ಯಕ್ಷರಾದ ನಾಗರಾಜ್, ಮುರುಳಿ, ಕೆ.ಟಿ ನವೀನ್ ಚಂದ್ರಶೇಖರ್ , ರೋಹಿತ್ ಕೆ.ಟಿ ನವೀನ್ , ಪ್ರಕಾಶ್, ಆದಿತ್ಯ ಪುಟ್ಟರಾಜು, ಕುಶಾಲ್ ಹರವೇಗೌಡ, ಮಾಧವಹನೂರು, ಕಿಶೋರ್,ಪ್ರವೀಣ್ ರಾವ್ ಒಬಳೇಶ್ , ಪವನ್ , ಉಮಾ, ವೀಣಾ ಮಂಜುನಾಥ್ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
