ನವದೆಹಲಿ, ಸೆ.5- ಆಗಸದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಏರ್ ಇಂಡಿಯಾ ವಿಮಾನವೊಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದ್ದು, ವಿಮಾನದಲ್ಲಿದ್ದ 24 ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಫುಕೆಟ್‌ನಿಂದ ನವದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು 36 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ಕೆಲವೇ ಸೆಕೆಂಡುಗಳ ಅಂತರದಲ್ಲಿ ಮೂರು ಹೈಡ್ರಾಲಿಕ್ ವ್ಯವಸ್ಥೆಗಳು ಸ್ಥಗಿತಗೊಂಡು ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಠಾತ್ ಏರುಪೇರಿನಿಂದಾಗಿ ಕ್ಯಾಬಿನ್‌ನಲ್ಲಿದ್ದ 24 ಪ್ರಯಾಣಿಕರು ಗಾಯಗೊಂಡಿದ್ದು, ಆಟೋಪೈಲಟ್ ಸಂಪರ್ಕ ಕಡಿತಗೊಂಡಿತ್ತು. ಬಳಿಕ ವಿಮಾನವನ್ನು ಸುರಕ್ಷಿತವಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು.
ಕೆಲವೇ ಸೆಕೆಂಡುಗಳಲ್ಲಿ ಏರುಪೇರು
ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ಬಿಡುಗಡೆ ಮಾಡಿರುವ ಪ್ರಾಥಮಿಕ ವರದಿಯಲ್ಲಿ ತಾಂತ್ರಿಕ ವೈಫಲ್ಯಕ್ಕೆ ನಿಖರ ಕಾರಣವನ್ನು ಇನ್ನೂ ತಿಳಿಸಲಾಗಿಲ್ಲ. ವಿಮಾನ ಕೋಲ್ಕತ್ತಾ ವಾಯು ಪ್ರದೇಶದ ಮೇಲೆ 36 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಮೊದಲು ಗ್ರೀನ್, ನಂತರ ಬ್ಲೂ ಹಾಗೂ ಯೆಲ್ಲೋ ಹೈಡ್ರಾಲಿಕ್ ವ್ಯವಸ್ಥೆಗಳು ನಿಷ್ಕ್ರಿಯಗೊಂಡಿದ್ದವು.
ತಕ್ಷಣ ಆಟೋಪೈಲಟ್ ಸಂಪರ್ಕ ಕಡಿತಗೊಂಡು ಎಚ್ಚರಿಕೆಯ ಸೈರನ್ ಮೊಳಗಿತು. ವಿಮಾನ ಕೆಲವೇ ಸೆಕೆಂಡುಗಳಲ್ಲಿ ಸುಮಾರು 372 ಅಡಿಗಳಷ್ಟು ಮೇಲಕ್ಕೆದ್ದು, ಬಳಿಕ ದಿಢೀರನೆ 292 ಅಡಿಗಳಷ್ಟು ಕೆಳಕ್ಕೆ ಕುಸಿದಿದೆ.
ಅದೃಷ್ಟವಶಾತ್ ಕೆಲವೇ ಕ್ಷಣಗಳಲ್ಲಿ ಬ್ಲೂ ಹೈಡ್ರಾಲಿಕ್ ವ್ಯವಸ್ಥೆ ಮತ್ತೆ ಕಾರ್ಯನಿರ್ವಹಿಸಲು ಆರಂಭಿಸಿತು. ಬಳಿಕ ಯೆಲ್ಲೋ ಮತ್ತು ಗ್ರೀನ್ ವ್ಯವಸ್ಥೆಗಳೂ ನಿಯಂತ್ರಣಕ್ಕೆ ಬಂದಿದ್ದು, ಪೈಲಟ್‌ಗಳು ವಿಮಾನವನ್ನು ಸುರಕ್ಷಿತವಾಗಿ ದೆಹಲಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕ್ಯಾಬಿನ್‌ಗೆ ಹಾನಿ
ವಿಮಾನದಲ್ಲಿನ ತೀವ್ರ ಏರುಪೇರಿನಿಂದ ಸೀಲಿಂಗ್ ಪ್ಯಾನೆಲ್‌ಗಳು ಮುರಿದುಬಿದ್ದಿವೆ. ಲಗೇಜ್ ಬಾಕ್ಸ್‌ಗಳು ತೆರೆದುಕೊಂಡಿದ್ದು, ತುರ್ತು ನಿರ್ಗಮನ ಬಾಗಿಲಿನ ಹ್ಯಾಂಡಲ್ ಹಾಗೂ ಶೌಚಾಲಯದ ಕಮೋಡ್ ಕೂಡ ಹಾನಿಗೊಳಗಾಗಿದೆ. ಘಟನೆಯಲ್ಲಿ 24 ಪ್ರಯಾಣಿಕರು ಗಾಯಗೊಂಡಿದ್ದಾರೆ.
ಪೈಲಟ್ ಮಾದಕ ದ್ರವ್ಯ ಸೇವನೆ ದೃಢ
ವಿಮಾನ ದೆಹಲಿಯಲ್ಲಿ ಇಳಿದ ಬಳಿಕ ಸಿಬ್ಬಂದಿಗೆ ನಡೆಸಿದ ಪರೀಕ್ಷೆಯಲ್ಲಿ ಮುಖ್ಯ ಪೈಲಟ್ ದೇಹದಲ್ಲಿ ನಿಷೇಧಿತ ಮನೋ-ಸಕ್ರಿಯ ಪದಾರ್ಥಗಳು ಇರುವುದು ಪತ್ತೆಯಾಗಿದೆ. ಸಹ-ಪೈಲಟ್‌ನ ಪರೀಕ್ಷೆ ನೆಗೆಟಿವ್ ಬಂದಿದೆ.
ವಾಯುಯಾನ ಸುರಕ್ಷತಾ ನಿಯಮಗಳ ಅಡಿಯಲ್ಲಿ ಏರ್ ಇಂಡಿಯಾ ಮುಖ್ಯ ಪೈಲಟ್ ವಿರುದ್ಧ ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸುವ ಕ್ರಮ ಕೈಗೊಂಡಿದೆ.
ಬ್ಲ್ಯಾಕ್‌ಬಾಕ್ಸ್ ವಶಕ್ಕೆ
ಘಟನೆಯ ನಿಖರ ಕಾರಣವೇನು ಹಾಗೂ ಪೈಲಟ್‌ನ ಸ್ಥಿತಿ ವಿಮಾನದ ನಿಯಂತ್ರಣದ ಮೇಲೆ ಯಾವುದೇ ಪರಿಣಾಮ ಬೀರಿತೇ ಎಂಬುದನ್ನು ಪರಿಶೀಲಿಸಲು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (ಸಿವಿಆರ್) ಮತ್ತು ಫ್ಲೈಟ್ ಡೇಟಾ ರೆಕಾರ್ಡರ್ (ಎಫ್‌ಡಿಆರ್)ಗಳನ್ನು ವಶಕ್ಕೆ ಪಡೆದು ವಿಶ್ಲೇಷಿಸಲಾಗುತ್ತಿದೆ.
