ಬೆಂಗಳೂರು, ಸೆ.5- ರಾಜ್ಯಾದ್ಯಂತ ತಲ್ಲಣ ಮೂಡಿಸಿರುವ ಕೆಪಿಎಸ್ಸಿ (ಕರ್ನಾಟಕ ಲೋಕಸೇವಾ ಆಯೋಗ) ಹಗರಣದ ತನಿಖೆಯ ಬೆನ್ನಲ್ಲೇ ಪ್ರಕರಣದ ಪ್ರಮುಖ ಆರೋಪಿ ಹಾಗೂ ತುಮಕೂರು ವಿಶ್ವವಿದ್ಯಾಲಯದ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯ ಬಸವರಾಜ ಕನ್ನಾಳೆ ಅವರ ಸಂಪರ್ಕ ವಿಶ್ವವಿದ್ಯಾಲಯದ ವ್ಯವಹಾರಗಳಿಗೂ ವಿಸ್ತರಿಸಿರುವ ಆರೋಪಗಳು ಕೇಳಿಬಂದಿವೆ.
ಕನ್ನಾಳೆ ಅವರು ತುಮಕೂರು ವಿಶ್ವವಿದ್ಯಾಲಯದಲ್ಲೂ ಕೋಟ್ಯಂತರ ರೂಪಾಯಿ ಮೌಲ್ಯದ ಖರೀದಿ ಮತ್ತು ಕಾಮಗಾರಿಗಳಿಗೆ ಸಂಬಂಧಿಸಿದ ಅಕ್ರಮಗಳಲ್ಲಿ ಭಾಗಿಯಾಗಿದ್ದರು ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
2025ರಲ್ಲಿ ಸಿಂಡಿಕೇಟ್ ಸದಸ್ಯರಾಗಿ ನೇಮಕ
2025ರ ಆಗಸ್ಟ್ನಲ್ಲಿ ಬಸವರಾಜ ಕನ್ನಾಳೆ ಅವರನ್ನು ತುಮಕೂರು ವಿಶ್ವವಿದ್ಯಾಲಯದ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು ಎನ್ನಲಾಗಿದೆ. ಬಂಧನದ ಬಳಿಕವೂ ಅವರ ಸಿಂಡಿಕೇಟ್ ಸದಸ್ಯತ್ವದ ಕುರಿತು ತಕ್ಷಣ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದಿರುವುದು ಚರ್ಚೆಗೆ ಕಾರಣವಾಗಿದೆ. ಈ ಕುರಿತು ರಾಜಭವನ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬ ಕುತೂಹಲವೂ ಮೂಡಿದೆ.
ಸಿಂಡಿಕೇಟ್ ಸದಸ್ಯರಾಗಿದ್ದ ಅವಧಿಯಲ್ಲಿ ವಿಶ್ವವಿದ್ಯಾಲಯದ ಖರೀದಿ ಮತ್ತು ಕಾಮಗಾರಿಗಳಿಗೆ ಸಂಬಂಧಿಸಿದ ಉಪಸಮಿತಿಯಲ್ಲೂ ಕನ್ನಾಳೆ ಸ್ಥಾನ ಪಡೆದಿದ್ದರು ಎನ್ನಲಾಗಿದೆ. ಹೀಗಾಗಿ ಅವರು ಸದಸ್ಯರಾಗಿದ್ದ ಅವಧಿಯಲ್ಲಿ ನಡೆದ ಟೆಂಡರ್ಗಳು, ಕಾಮಗಾರಿಗಳು, ಖರೀದಿ ಆದೇಶಗಳು, ಪಾವತಿಗಳು ಹಾಗೂ ಸಿಂಡಿಕೇಟ್ ಮತ್ತು ಉಪಸಮಿತಿ ಸಭೆಗಳ ನಡಾವಳಿಗಳನ್ನು ಪರಿಶೀಲಿಸಬೇಕೆಂಬ ಆಗ್ರಹ ಕೇಳಿಬಂದಿದೆ.
ವಿಶ್ವವಿದ್ಯಾಲಯದ ಖರೀದಿ ಮತ್ತು ಕಾಮಗಾರಿ ಸಂಬಂಧಿತ ನಿರ್ಧಾರಗಳಲ್ಲಿ ಕನ್ನಾಳೆ ಪ್ರಭಾವ ಬೀರಿದ್ದರು ಎಂಬ ಆರೋಪಗಳೂ ಕೇಳಿಬಂದಿವೆ. ಕೆಲವು ಟೆಂಡರ್ಗಳನ್ನು ನಿರ್ದಿಷ್ಟ ವ್ಯಕ್ತಿಗಳಿಗೆ ಅನುಕೂಲವಾಗುವಂತೆ ಮಾಡಿಸುವಲ್ಲಿ ಮಧ್ಯಸ್ಥಿಕೆ ವಹಿಸಿದ್ದರು ಎಂಬ ಆರೋಪಗಳೂ ಇವೆ.
ಈ ಆರೋಪಗಳ ಸತ್ಯಾಸತ್ಯತೆ ಪತ್ತೆಹಚ್ಚಲು ಟೆಂಡರ್ ದಾಖಲೆಗಳು, ತಾಂತ್ರಿಕ ಮತ್ತು ಹಣಕಾಸು ಬಿಡ್ಗಳು, ಕಾರ್ಯಾದೇಶಗಳು, ಬಿಲ್ಗಳು, ಪಾವತಿ ವಿವರಗಳು ಹಾಗೂ ಸಭೆಗಳ ನಡಾವಳಿಗಳ ಪರಿಶೀಲನೆ ಮಹತ್ವ ಪಡೆದುಕೊಂಡಿದೆ.
ಕುಲಪತಿ ಹುದ್ದೆಗೆ ಲಾಬಿ?
ಇದರ ನಡುವೆ ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸಿರುವ ಕೆಲವು ಹಿರಿಯ ಪ್ರಾಧ್ಯಾಪಕರೊಂದಿಗೆ ಕನ್ನಾಳೆ ಸಂಪರ್ಕದಲ್ಲಿದ್ದರು ಹಾಗೂ ನೇಮಕಾತಿಯಲ್ಲಿ ಪ್ರಭಾವ ಬೀರುವುದಾಗಿ ಹೇಳಿಕೊಂಡಿದ್ದರು ಎಂಬ ಆರೋಪಗಳು ವಿಶ್ವವಿದ್ಯಾಲಯದ ವಲಯದಲ್ಲಿ ಕೇಳಿಬರುತ್ತಿವೆ.
ಅನಂತಪುರಂ ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯ ನೇಮಕಾತಿಯಲ್ಲೂ ಕನ್ನಾಳೆ ಮಧ್ಯಸ್ಥಿಕೆ ವಹಿಸಿದ್ದರು ಅಥವಾ ಹಣಕಾಸಿನ ವ್ಯವಹಾರ ನಡೆದಿತ್ತು ಎಂಬ ವದಂತಿಗಳು ಹರಿದಾಡುತ್ತಿವೆ. ಆದರೆ ಈ ಆರೋಪಗಳಿಗೆ ಸಂಬಂಧಿಸಿದಂತೆ ಅಧಿಕೃತವಾಗಿ ಯಾವುದೇ ದೃಢೀಕರಣ ಹೊರಬಿದ್ದಿಲ್ಲ.
ಎಬಿವಿಪಿ ಪ್ರತಿಭಟನೆ
ಕನ್ನಾಳೆ ಬಂಧನದ ಹಿನ್ನೆಲೆಯಲ್ಲಿ ಅವರ ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯತ್ವ ರದ್ದುಪಡಿಸಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಆಗ್ರಹಿಸಿದೆ.
ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರು, ಮುಂಬರುವ ಸಿಂಡಿಕೇಟ್ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಂಡು ರಾಜ್ಯಪಾಲರಿಗೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ವಿವಿ ಆಡಳಿತದ ಸ್ಪಷ್ಟನೆ
ಕನ್ನಾಳೆ ವಿರುದ್ಧದ ಆರೋಪಗಳ ನಡುವೆ ತುಮಕೂರು ವಿಶ್ವವಿದ್ಯಾಲಯದ ಆಡಳಿತವು ತನ್ನ ಮಟ್ಟದಲ್ಲಿ ಯಾವುದೇ ಅಕ್ರಮ ಪತ್ತೆಯಾಗಿಲ್ಲ ಎಂಬ ನಿಲುವು ಹೊಂದಿದೆ ಎಂದು ವರದಿಯಾಗಿದೆ.
ಇತ್ತ, ಕೆಪಿಎಸ್ಸಿ ಪ್ರಕರಣದ ತನಿಖೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಕನ್ನಾಳೆ ಅವರ ದೂರವಾಣಿ ಕರೆಗಳ ವಿವರಗಳನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದು, ಅವರ ಸಂಪರ್ಕದಲ್ಲಿದ್ದ ಪ್ರಾಧ್ಯಾಪಕರು ಹಾಗೂ ಇತರರ ವಿಚಾರಣೆಯೂ ನಡೆಯುತ್ತಿದೆ ಎನ್ನಲಾಗಿದೆ.
ಮತ್ತೊಂದೆಡೆ, ತುಮಕೂರು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಬಸವರಾಜ ಕನ್ನಾಳೆ ಅವರಿಗೆ ಕ್ಲೀನ್ಚಿಟ್ ನೀಡಲು ಮುಂದಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಈ ಸಂಬಂಧ ಸಿಬಿಐ, ಸಿಐಡಿ ಹಾಗೂ ರಾಜ್ಯ ಗೃಹ ಇಲಾಖೆಗೆ ವಿಶ್ವವಿದ್ಯಾಲಯದ ವತಿಯಿಂದ ಸ್ಪಷ್ಟೀಕರಣ ಪತ್ರ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೆಪಿಎಸ್ಸಿ ಪ್ರಕರಣದಲ್ಲಿ ಕನ್ನಾಳೆ ವಿರುದ್ಧದ ತನಿಖೆ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಆಸ್ತಿ, ಹಣಕಾಸು ವ್ಯವಹಾರಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಸಂಪರ್ಕಗಳ ಬಗ್ಗೆಯೂ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಕನ್ನಾಳೆ ಸುಮಾರು ₹5 ಕೋಟಿ ಮೌಲ್ಯದ ಕೃಷಿ ಭೂಮಿ ಖರೀದಿಸಿದ್ದಾರೆ ಎಂಬ ಮಾಹಿತಿಯೂ ತನಿಖಾ ಮೂಲಗಳಿಂದ ಹೊರಬಿದ್ದಿದೆ ಎಂದು ವರದಿಯಾಗಿದೆ.
