Homeರಾಜ್ಯಹಲವು ಅನುಮಾನ ಹುಟ್ಟಿಸಿದೆ ಮಾಡಿಕೊಟ್ಟಿದೆ ಶಿವಾಜಿನಗರದಲ್ಲಿ ಅಧಿಕಾರಿಗಳ ಮೇಲಿನ ಹಲ್ಲೆ ಪ್ರಕರಣ

ಹಲವು ಅನುಮಾನ ಹುಟ್ಟಿಸಿದೆ ಮಾಡಿಕೊಟ್ಟಿದೆ ಶಿವಾಜಿನಗರದಲ್ಲಿ ಅಧಿಕಾರಿಗಳ ಮೇಲಿನ ಹಲ್ಲೆ ಪ್ರಕರಣ

ಬೆಂಗಳೂರು, ಜು.22- ಶಿವಾಜಿನಗರದಲ್ಲಿ ಫುಟ್‌ಪಾತ್‌ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಜಿಬಿಎ ಇಂಜಿನಿಯರ್‌ಗಳ ಮೇಲೆ ನಡೆದ ದಾಳಿ ಪ್ರಕರಣ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಶಿವಾಜಿನಗರದಲ್ಲಿ ನಡೆದ ಕಾರ್ಯಾಚರಣೆಯ ವೇಳೆ ಏಕಾಏಕಿ ಕೆಲವರು ಅಧಿಕಾರಿಗಳ ಮೇಲೆ ಪೆಪ್ಪರ್‌ ಸ್ಪ್ರೇ ಸಿಂಪಡಿಸಿ, ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಗರಾಡಳಿತದ ಕಾರ್ಯವೈಖರಿಯನ್ನೇ ಪ್ರಶ್ನಿಸುವಂತಾಗಿದೆ.

ಮಾಹಿತಿಗಳ ಪ್ರಕಾರ, ಪ್ರತಿ ಒತ್ತುವರಿ ತೆರವು ಕಾರ್ಯಾಚರಣೆಗೆ ಮುನ್ನ ಸಂಬಂಧಿತ ಸ್ಥಳೀಯ ಪೊಲೀಸ್‌‍ ಠಾಣೆಗೆ ಲಿಖಿತವಾಗಿ ಮಾಹಿತಿ ನೀಡುವುದು ಕಡ್ಡಾಯವಾಗಿದೆ. ಅಲ್ಲದೆ ಬೆಸ್ಕಾಂ ಸೇರಿದಂತೆ ಅಗತ್ಯ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಆದರೆ ಶಿವಾಜಿನಗರ ಕಾರ್ಯಾಚರಣೆಗೆ ಮುನ್ನ ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್‌‍ ಠಾಣೆಗೆ ಲಿಖಿತ ಮಾಹಿತಿ ನೀಡಲಾಗಿರಲಿಲ್ಲ ಎಂಬ ವಿಚಾರ ಇದೀಗ ಬಹಿರಂಗಗೊಂಡಿದೆ.

ಈ ವಿಷಯವನ್ನು ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್‌ ಕೂಡ ಒಪ್ಪಿಕೊಂಡಿದ್ದಾರೆ.ಇದರಿಂದ ಕಾರ್ಯಾಚರಣೆ ವೇಳೆ ಸಮರ್ಪಕ ಪೊಲೀಸ್‌‍ ಭದ್ರತೆ ಲಭ್ಯವಾಗದೆ ಪರಿಸ್ಥಿತಿ ನಿಯಂತ್ರಣ ತಪ್ಪಿ, ಅಧಿಕಾರಿಗಳ ಮೇಲೆಯೇ ಹಲ್ಲೆ ನಡೆಯುವಂತಾಗಿದೆ ಎಂಬ ಪ್ರಶ್ನೆ ಉದ್ಭವಿಸಿದೆ.

ಕಾರ್ಯಾಚರಣೆಗೆ ಮುನ್ನ ಸ್ಥಳೀಯ ಪೊಲೀಸ್‌‍ ಠಾಣೆಗೆ ಲಿಖಿತ ಮಾಹಿತಿ ನೀಡಬೇಕು.ಬೆಸ್ಕಾಂ ಸೇರಿದಂತೆ ಅಗತ್ಯ ಇಲಾಖೆ ಗಳಿಗೂ ಪೂರ್ವ ಮಾಹಿತಿ ನೀಡಬೇಕು.ಕಾರ್ಯಾಚರಣೆ ನಡೆಯುವ ಸ್ಥಳದಲ್ಲಿ ಬ್ಯಾರಿಕೇಡ್‌ ಅಳವಡಿಸಿ ಭದ್ರತೆ ಕಲ್ಪಿಸಬೇಕು.ಕೆಲಸ ಪ್ರಗತಿಯಲ್ಲಿದೆ ಅಥವಾ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು.ಸಂಚಾರ ದಟ್ಟಣೆ ಇರುವ ಪ್ರದೇಶಗಳಲ್ಲಿ ಸಂಚಾರಿ ಪೊಲೀಸರನ್ನು ನಿಯೋಜಿಸಬೇಕು.ಕ್ರೇನ್‌‍, ಜೆಸಿಬಿ ಸೇರಿದಂತೆ ಭಾರೀ ಯಂತ್ರೋಪಕರಣ ಬಳಸುವ ವೇಳೆ ವಾಹನಗಳಿಗೆ ಪರ್ಯಾಯ ಮಾರ್ಗ ವ್ಯವಸ್ಥೆ ಮಾಡಬೇಕು.

ಶಿವಾಜಿನಗರ ಘಟನೆಯು ಅಧಿಕಾರಿಗಳ ಸುರಕ್ಷತೆ ಹಾಗೂ ಕಾರ್ಯಾಚರಣೆ ವೇಳೆ ಕಟ್ಟುನಿಟ್ಟಾಗಿ ಪಾಲನೆಯ ಅಗತ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಅಧಿಕಾರಿಗಳ ಮೇಲಿನ ಹಲ್ಲೆ ಪ್ರಕರಣಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ, ಮುಂದಿನ ದಿನಗಳಲ್ಲಿ ಯಾವುದೇ ತೆರವು ಕಾರ್ಯಾಚರಣೆಯೂ ಕಾನೂನು ಅನುಸಾರವೇ ನಡೆಯುವಂತೆ ಜಿಬಿಎ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.

RELATED ARTICLES

Latest News