ಪ್ರೇಕ್ಷಕರಿಗೆ ಸದಾ ಹೊಸತನದ ಹಾಗೂ ನಿರಂತರ ಮನರಂಜನೆ ನೀಡುತ್ತಾ ಬಂದಿರುವ ಕಲರ್ಸ್ ಕನ್ನಡ ವಾಹಿನಿಯು ತನ್ನ ವಾರಾಂತ್ಯದ ಸಿನಿಮಾ ಮನರಂಜನೆಯನ್ನು ಮತ್ತಷ್ಟು ರಂಗೇರಿಸುತ್ತಿದೆ. ಇದೀಗ ನಟ ಜೈದ್ ಖಾನ್ ನಾಯಕನಾಗಿ ನಟಿಸಿರುವ ರೋಮ್ಯಾಂಟಿಕ್, ಮ್ಯೂಸಿಕಲ್ ಹಾಗೂ ಬ್ಲಾಕ್ ಬಸ್ಟರ್ ಸಿನಿಮಾ ಕಲ್ಟ್ ಇದೇ ಮೊದಲ ಬಾರಿಗೆ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಬರ್ತಿದೆ. ಜುಲೈ 26 ರಂದು ಭಾನುವಾರ ಮಧ್ಯಾಹ್ನ 3 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
‘ಮಾಧವ’ನ ಪಾತ್ರದಲ್ಲಿ ಅಭಿನಯಿಸಿರುವ ಜೈದ್ ಖಾನ್ ಪ್ರೀತಿಯಲ್ಲಿ ಸೋತು ಭಗ್ನ ಪ್ರೇಮಿಯಾಗಿ ಅನುಭವಿಸುವ ಯಾತನೆ ಭಾವನಾತ್ಮಕತೆಯಿಂದ ಕೂಡಿದೆ. ಜೆನ್-ಝೀ ಯುವಕರ ಇಷ್ಟ, ಅವರ ಪ್ರೀತಿಯ ರೀತಿ, ವಿರಹದ ಕಥಾಹಂದರವನ್ನು ಸಿನಿಮಾ ಹೊಂದಿದೆ. ಪ್ರೀತಿಯ ಬಲೆಯಲ್ಲಿ ಬಿದ್ದ ನಾಯಕ ಓದು ಬಿಟ್ಟು, ಕುಡಿತದ ದಾಸನಾಗುವುದು.
ಪ್ರೀತಿಸಿದ ಹುಡುಗಿ ದೂರವಾದಾಗ ನಾಯಕನ ಬಾಳಲ್ಲಿ ಇತಿಹಾಸಿನಿ (ರಚಿತಾ) ಎಂಟ್ರಿ ಕೊಟ್ಟ ಬಳಿಕ ಆತನ ಜೀವನದಲ್ಲಾಗುವ ಬದಲಾವಣೆ. ನಾಯಕ ಕೊನೆಗೆ ಯಾರ ಜೊತೆಯಾಗುತ್ತಾನೆ ಎಂಬ ಕುತೂಹಲ ಹುಟ್ಟಿಸುತ್ತಾ ಸಾಗುವ ಸಿನಿಮಾವೇ ʻಕಲ್ಟ್ʼ. ನಾಯಕ ತನ್ನಿಂದ ದೂರವಾದ ಗೀತಾಳ ಜೊತೆ ಸೇರುತ್ತಾನಾ? ಅಷ್ಟಕ್ಕೂ ಗೀತಾ ದೂರವಾಗೋದು ಏಕೆ? ಇತಿಹಾಸಿನಿ ಮತ್ತು ಮ್ಯಾಡಿ ಒಂದಾಗುತ್ತಾರಾ ಎಂಬುದಕ್ಕೆ ಚಿತ್ರವನ್ನು ನೋಡಲೇಬೇಕು.
ಅನಿಲ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ನಟ ಜೈದ್ ಖಾನ್, ನಟಿಯರಾದ ರಚಿತಾ ರಾಮ್ ಮತ್ತು ಮಲೈಕಾ ವಾಸುಪಾಲ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರಷ್ಟೇ ಅಲ್ಲದೆ, ರಂಗಾಯಣ ರಘು, ಅಚ್ಯುತ್ ಕುಮಾರ್ ಮುಂತಾದ ದಿಗ್ಗಜ ನಟರ ತಾರಾಗಣ ಚಿತ್ರದಲ್ಲಿದೆ. ಕಿಶನ್ ಬಿಳಗಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಮ್ಯೂಸಿಕ್ ಪ್ರೇಕ್ಷಕರಿಗೆ ಮುದ ನೀಡಲಿದೆ.
