ನವದೆಹಲಿ, ಜು.25- ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಇತರೆ ಅಕ್ರಮಗಳ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ರಚಿಸಲಾದ ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದ ಜವಾಬ್ದಾರಿಯನ್ನು ವಿಶೇಷ ನ್ಯಾಯಾಧೀಶೆ ಅನು ಗ್ರೋವರ್ ಬಲಿಗಾ ಶನಿವಾರ ವಹಿಸಿಕೊಂಡಿದ್ದಾರೆ.
ಮೂಲಗಳ ಪ್ರಕಾರ, ದೆಹಲಿಯ ರೌಸ್ ಅವೆನ್ಯೂ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುವ ಈ ವಿಶೇಷ ನ್ಯಾಯಾಲಯವು ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯ ಮಾರ್ಗಗಳ ತಡೆ) ಕಾಯ್ದೆ-2024 ಹಾಗೂ ಅದಕ್ಕೆ ಸಂಬಂಧಿಸಿದ ಅಪರಾಧಗಳ ವಿಚಾರಣೆಯನ್ನು ನಡೆಸಲಿದೆ.
ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ 13 ಆರೋಪಿಗಳ ವಿರುದ್ಧದ ವಿಚಾರಣೆಯನ್ನೂ ಈ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಜುಲೈ 24ರಂದು ದೆಹಲಿ ಹೈಕೋರ್ಟ್ ಅಧಿಸೂಚನೆ ಹೊರಡಿಸಿ, ನ್ಯಾಯಾಂಗ ಅಧಿಕಾರಿ ಅನು ಗ್ರೋವರ್ ಬಲಿಗಾ ಅವರ ನ್ಯಾಯಾಲಯವನ್ನು ತಕ್ಷಣದಿಂದಲೇ ವಿಶೇಷವಾಗಿ ನಿಗದಿಪಡಿಸಿದ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯವಾಗಿ ಕಾರ್ಯನಿರ್ವಹಿಸಲು ಆದೇಶಿಸಿತ್ತು.
ಜುಲೈ 23ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ತ್ವರಿತ ವಿಚಾರಣೆಗೆ ದೇಶಾದ್ಯಂತ ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಈ ಅಧಿಸೂಚನೆ ಹೊರಡಿಸಲಾಗಿದೆ.
