ಬೆಂಗಳೂರು, ಜು. 25- ಸದಾ ಗಿಜಿಗುಡುತ್ತಿದ್ದ ಶಿವಾಜಿನಗರ ಸುತ್ತಮುತ್ತಲಿನ ಪಾದಚಾರಿ ಮಾರ್ಗಕ್ಕೆ ಹೊಸ ಮೆರಗು ನೀಡಲಾಗಿದೆ.ಕೆಲ ದಿನಗಳ ಹಿಂದೆ ಶಿವಾಜಿನಗರ ಬಸ್ ನಿಲ್ದಾಣದ ಬಳಿ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಜಿಬಿಎ ಅಧಿಕಾರಿಗಳ ಮೇಲೆ ಹಲ್ಲೆ ನಡೆದ ಘಟನೆ ನಗರದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ, ಒತ್ತುವರಿ ತೆರವಿಗೆ ಕೆಲ ಫುಟ್‌ಪಾತ್ ವ್ಯಾಪಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಘಟನೆಯ ಬಳಿಕ ಕೇಂದ್ರ ನಗರ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿ, ಶಿವಾಜಿನಗರ ಬಸ್ ನಿಲ್ದಾಣದ ಸುತ್ತಮುತ್ತಲಿನ ಎಲ್ಲಾ ಅಕ್ರಮ ಶೆಡ್‌ಗಳು ಮತ್ತು ಒತ್ತುವರಿಗಳನ್ನು ತೆರವುಗೊಳಿಸಿದರು.
ಈಗ ಅದೇ ಪ್ರದೇಶದ ಪಾದಚಾರಿ ಮಾರ್ಗಕ್ಕೆ ಸಂಪೂರ್ಣ ಹೊಸ ಮೆರುಗು ನೀಡಲಾಗಿದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯ ಶಿವಾಜಿನಗರ ಬಸ್ ನಿಲ್ದಾಣದ ಹತ್ತಿರದ ಪಾದಚಾರಿ ಮಾರ್ಗದಲ್ಲಿ ಒತ್ತುವರಿ ತೆರವಿನ ಬಳಿಕ ಸಂಗ್ರಹವಾಗಿದ್ದ ತ್ಯಾಜ್ಯವನ್ನು ಸಂಪೂರ್ಣವಾಗಿ ತೆರವುಗೊಳಿಸಿ ಸ್ವಚ್ಛಗೊಳಿಸಲಾಗಿದೆ.
ಬಳಿಕ ಗೋಡೆಗಳಿಗೆ ಹೊಸದಾಗಿ ಬಣ್ಣ ಬಳಿದು ಸಾರ್ವಜನಿಕ ಜಾಗವನ್ನು ಆಕರ್ಷಕವಾಗಿ ರೂಪಿಸಲಾಗಿದೆ.ಇದರ ಜೊತೆಗೆ, ಸಾರ್ವಜನಿಕರಲ್ಲಿ ಸ್ವಚ್ಛತೆ ಹಾಗೂ ಸಾರ್ವಜನಿಕ ಆಸ್ತಿಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಜಾಗೃತಿ ಫಲಕಗಳನ್ನೂ ಅಳವಡಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತ ಜಗದೀಶ್ ಜಿ, ಪಾದಚಾರಿಗಳಿಗೆ ಅನುಕೂಲವಾಗುವಂತೆ ಸ್ವಚ್ಛ, ಸುಂದರ ಮತ್ತು ಸುರಕ್ಷಿತ ನಗರ ನಿರ್ಮಾಣಕ್ಕೆ ಕೇಂದ್ರ ನಗರ ಪಾಲಿಕೆ ನಿರಂತರವಾಗಿ ಕೆಲಸ ಮಾಡುತ್ತಿದೆ. ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಣ ಮುಕ್ತಗೊಳಿಸಿ ಅವುಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಶಿವಾಜಿನಗರದ ಈ ಪಾದಚಾರಿ ಮಾರ್ಗದ ಸುಂದರೀಕರಣದಿಂದ ಸಾರ್ವಜನಿಕರು ಮತ್ತು ಪಾದಚಾರಿಗಳಿಗೆ ಅನುಕೂಲವಾಗಿದ್ದು, ನಗರದಲ್ಲಿ ಸಾರ್ವಜನಿಕ ಜಾಗಗಳ ಸಂರಕ್ಷಣೆ ಹಾಗೂ ಸ್ವಚ್ಛತೆಗೆ ಕೇಂದ್ರ ನಗರ ಪಾಲಿಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಮತ್ತೊಮ್ಮೆ ಸ್ಪಷ್ಟವಾಗಿದೆ.
