Homeರಾಜ್ಯನಿಗದಿತ ಅವಧಿಯೊಳಗೆ ಎಸ್‌‍ಐಆರ್‌ ಪೂರ್ಣಗೊಳಿಸಲು ಬಿಎಲ್‌ಒಗಳಿಗೆ ಸೂಚನೆ

ನಿಗದಿತ ಅವಧಿಯೊಳಗೆ ಎಸ್‌‍ಐಆರ್‌ ಪೂರ್ಣಗೊಳಿಸಲು ಬಿಎಲ್‌ಒಗಳಿಗೆ ಸೂಚನೆ

ಬೆಂಗಳೂರು, ಜು.29- ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವನ್ನು ಲೋಪದೋಷವಿಲ್ಲದೆ, ಪಾರದರ್ಶಕವಾಗಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಕಚೇರಿಯಲ್ಲಿ ನಡೆದ ಎಸ್‌‍ಐಆರ್‌ ಕಾರ್ಯದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮತದಾರರ ನೋಂದಣಿ ಮಾಡುವ ಅಧಿಕಾರ ಇಆರ್‌ಒಗಳಿಗೆ ಮಾತ್ರ ಇದ್ದು, ಅವರು ಅತ್ಯಂತ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.

ಎಸ್‌‍ಐಆರ್‌ ಕಾರ್ಯವನ್ನು ತಂಡಗಳಾಗಿ ಸಮನ್ವಯದಿಂದ ನಡೆಸಿದರೆ ನಿಗದಿತ ಅವಧಿಯೊಳಗೆ ಗುಣಮಟ್ಟದೊಂದಿಗೆ ಪೂರ್ಣಗೊಳಿಸಬಹುದು ಎಂದು ಅವರು ಹೇಳಿದರು. ಗೈರುಹಾಜರು, ಸ್ಥಳಾಂತರಗೊಂಡ, ಮೃತ ಹಾಗೂ ಡುಪ್ಲಿಕೇಟ್‌ ಮತದಾರರ ಪ್ರಕರಣಗಳನ್ನು ಅತ್ಯಂತ ನಿಖರವಾಗಿ ಪರಿಶೀಲಿಸುವಂತೆ ಸೂಚಿಸಿದರು.

ಮೃತ ಮತದಾರರ ಹೆಸರು ತೆಗೆದುಹಾಕುವ ವೇಳೆ ಮರಣ ಪ್ರಮಾಣಪತ್ರ ಕಡ್ಡಾಯವಾಗಿದ್ದು, ಅದು ಲಭ್ಯವಿಲ್ಲದಿದ್ದರೆ ನೆರೆಹೊರೆಯವರು ಅಥವಾ ಃಐಂಗಳ ಸಹಿಯೊಂದಿಗೆ ಮಹಜರ್‌ ಸಿದ್ಧಪಡಿಸಬೇಕು ಎಂದು ತಿಳಿಸಿದರು.ಬಿಎಲ್‌ಒಗಳೇ ಎಸ್‌‍ಐಆರ್‌ ಕಾರ್ಯದ ಯಶಸ್ಸಿನ ಪ್ರಮುಖ ಕೊಂಡಿಯಾಗಿದ್ದು, ಮೇಲಾಧಿಕಾರಿಗಳು ಅವರೊಂದಿಗೆ ಸಂಯಮದಿಂದ ನಡೆದುಕೊಳ್ಳಬೇಕು ಎಂದು ಸೂಚಿಸಿದ ಮುಖ್ಯ ಚುನಾವಣಾಧಿಕಾರಿ, ಬಾಕಿ ಇರುವ ಸಂಭಾವನೆಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಡಿಜಿಟೈಸ್‌‍ ಮಾಡುವ ಮೊದಲು ಅರ್ಜಿಯಲ್ಲಿ ಮತದಾರರು ಹಾಗೂ ಬಿಎಲ್‌ಒ ಇಬ್ಬರ ಸಹಿ ಇರುವುದನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಸಹಿ ಇಲ್ಲದ ಅರ್ಜಿಗಳನ್ನು ಡಿಜಿಟೈಸ್‌‍ ಮಾಡಬಾರದು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ಮಾತನಾಡಿದ ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್‌ ಜಿ, ಮನೆ-ಮನೆ ಭೇಟಿ ನೀಡುವ ಮೊದಲು ಮತದಾರರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮತದಾರರು ಗಣತಿ ನಮೂನೆಯನ್ನು ಮುಂಚಿತವಾಗಿ ಭರ್ತಿ ಮಾಡಿಕೊಂಡಿದ್ದರೆ ಪರಿಶೀಲನೆ ಕಾರ್ಯ ಮತ್ತಷ್ಟು ಸುಗಮವಾಗಲಿದೆ ಎಂದು ಹೇಳಿದರು.

ಸಭೆಯಲ್ಲಿ ಜಂಟಿ ಮುಖ್ಯ ಚುನಾವಣಾಧಿಕಾರಿ ರಾಘವೇಂದ್ರ ವಿ, ಕಂದಾಯ ಅಪರ ಆಯುಕ್ತ ರಂಗನಾಥ್‌.ಕೆ, ಜಂಟಿ ಆಯುಕ್ತ ಹೇಮಂತ್‌ ಶರಣ್‌ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

Latest News