ಬೆಂಗಳೂರು,ಫೆ.25- ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ಬಿಜೆಪಿ-ಜೆಡಿಎಸ್ ಕನಸು ಈಡೇರುವುದಿಲ್ಲ, ಆಪರೇಷನ್ ಕಮಲ ನಡೆಸಿದರೂ ಯಾರೂ ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವನ್ನು ಪತನ ಮಾಡಲು ಮತ್ತು ಹೊಸ ಸರ್ಕಾರ ರಚಿಸಲು ಬಿಜೆಪಿ-ಜೆಡಿಎಸ್‍ಗೆ 50 ಶಾಸಕರು ಬೇಕು. ನಮ್ಮ ಪಕ್ಷದಿಂದ ಅಷ್ಟು ಶಾಸಕರು ಆಪರೇಷನ್ ಕಮಲಕ್ಕೆ ಸಿಲುಕಿ ಪಕ್ಷಾಂತರ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸರ್ಕಾರ ಪತನವಾಗಲಿದೆ ಎಂಬ ಭ್ರಮೆಯಲ್ಲಿಯೇ ಇರಲಿ. ರಾಜ್ಯದ ಜನ ಅವರ ಪಕ್ಷವನ್ನು ಸೋಲಿಸಿ ಕಾಂಗ್ರೆಸ್ 135 ಸ್ಥಾನ ಗೆಲ್ಲಿಸಿದ್ದಾರೆ. ಇದನ್ನು ಮರೆತು ಪದೇ ಪದೇ ಸರ್ಕಾರ ಪತನಗೊಳ್ಳುತ್ತದೆ ಎಂಬ ಭಾವನೆ ಬಿತ್ತಲು ಯತ್ನಿಸುತ್ತಿದ್ದಾರೆ. ಅದು ಯಶಸ್ವಿಯಾಗುವುದಿಲ್ಲ ಎಂದರು.
ಶೋಭಾ ಕರಂದ್ಲಾಜೆಯವರು ವಾಪಸ್ ಹೋಗಬೇಕೆಂದು ಅವರ ಕ್ಷೇತ್ರದಲ್ಲಿಯೇ ಜನ ಪ್ರತಿಭಟನೆ ಮಾಡುತ್ತಿದ್ದಾರೆ.
ಅವರ ಪಕ್ಷದವರೇ ವಿರೋಧ ಮಾಡುತ್ತಿದ್ದಾರೆ. ಅವರು ನಮ್ಮ ಸರ್ಕಾರವನ್ನು ಪತನಗೊಳಿಸುವ ಮಾತನಾಡುತ್ತಿರುವುದು ಹಾಸ್ಯಾಸ್ಪದ. ಮೊದಲು ಶೋಭಕ್ಕ ತಮ್ಮ ಟಿಕೆಟ್ ಅನ್ನು ಗಟ್ಟಿ ಮಾಡಿಕೊಳ್ಳಲಿ, ಅನಂತರ ಸರ್ಕಾರ ರಚಿಸಲು 50 ಮಂದಿ ಶಾಸಕರನ್ನು ಎಲ್ಲಿಂದ ಕರೆತರುತ್ತಾರೆ ಎಂದು ಹೇಳಲಿ ಎಂದರು.
ದೇಶದ ಅತೀ ಉದ್ದದ ಕೇಬಲ್ ಸೇತುವೆಯನ್ನು ಲೋಕಾರ್ಪಣೆ ಮಾಡಿದ ಮೋದಿ
ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನಕ್ಕೆ ಅವಕಾಶವಿಲ್ಲ. ಮತದಾನ ಮಾಡುವವರು ಅದನ್ನು ಮತಗಟ್ಟೆಯಲ್ಲಿರುವ ಏಜೆಂಟ್‍ಗೆ ತೋರಿಸಿ ಹಾಕಬೇಕಿದೆ. ಹೀಗಾಗಿ ಅಡ್ಡಮತದಾನ ಮಾಡುವ ಸಾಧ್ಯತೆ ಇಲ್ಲ. ನಾವು ಒಟ್ಟಾಗಿ ಇರಬೇಕು ಎಂಬ ಕಾರಣಕ್ಕಾಗಿ ಖಾಸಗಿ ಹೋಟೆಲ್‍ನಲ್ಲಿ ಶಾಸಕಾಂಗ ಸಭೆ ನಡೆಸುತ್ತಿದ್ದೇವೆ. ಇದು ಅಡ್ಡಮತದಾನದ ಭಯಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷ ತನ್ನ ಮೂರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಜೊತೆಗೆ ನಮ್ಮ ಹೆಚ್ಚುವರಿ ಮತಗಳೂ ಇವೆ. ವಿರೋಧಪಕ್ಷಗಳಿಂದಲೂ ಒಂದೆರಡು ಮತಗಳು ಹೆಚ್ಚುವರಿಯಾಗಿ ಬರುವ ನಿರೀಕ್ಷೆಗಳಿವೆ ಎಂದರು.
ವಿದೇಶಿ ಹಡಗನ್ನು ಜಪ್ತಿ ಮಾಡುವಂತೆ ಒರಿಸ್ಸಾ ಹೈಕೋರ್ಟ್ ಆದೇಶ
ಈ ಬಾರಿ ಅಡ್ಡ ಮತದಾನ ಮಾಡಿದರೆ ಶಾಸಕ ಸ್ಥಾನದಿಂದ ಅನರ್ಹಗೊಳ್ಳುತ್ತಾರೆ. ಆ ಬಳಿಕ ಮತ್ತೊಮ್ಮೆ ಉಪಚುನಾವಣೆಗೆ ಹೋಗಬೇಕು. ಅಂತಹ ತಾಕತ್ತು ಯಾರಿಗಿದೆ? ಸದ್ಯದ ಪರಿಸ್ಥಿತಿಯಲ್ಲಿ ಯಾರೂ ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ. ಜೆಡಿಎಸ್-ಬಿಜೆಪಿಯವರು ಎಷ್ಟೇ ಪ್ರಯತ್ನ ಮಾಡಿದರೂ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತದಾರರಿಂದ ಅಡ್ಡಮತದಾನ ಮಾಡಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷವನ್ನು ಸಿ.ಟಿ.ರವಿ ಕ್ರಿಮಿನಲ್ ಪಕ್ಷ ಎಂದು ಕರೆದಿದ್ದಾರೆ. ಇಂತಹ ಹೇಳಿಕೆಗಳಿಂದಾಗಿಯೇ ಜನ ಅವರನ್ನು ಸೋಲಿಸಿ ಮನೆಗೆ ಕಳುಹಿಸಿದ್ದಾರೆ. ಆದರೂ ಇನ್ನೂ ಬುದ್ಧಿ ಕಲಿತಿಲ್ಲ ಎಂದರು.