Saturday, June 22, 2024
Homeರಾಜ್ಯರಾಜ್ಯಸಭಾ ಚುನಾವಣೆಗೆ ಮೂರು ಪಕ್ಷಗಳಲ್ಲೂ ತಂತ್ರ-ಪ್ರತಿತಂತ್ರ

ರಾಜ್ಯಸಭಾ ಚುನಾವಣೆಗೆ ಮೂರು ಪಕ್ಷಗಳಲ್ಲೂ ತಂತ್ರ-ಪ್ರತಿತಂತ್ರ

ಬೆಂಗಳೂರು,ಫೆ.25- ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕೂ ಸ್ಥಾನಗಳಿಗೆ ಫೆ.27 ರಂದು ನಡೆಯಲಿರುವ ದ್ವೈ ವಾರ್ಷಿಕ ಚುನಾವಣೆಯಲ್ಲಿ ಅಡ್ಡ ಮತದಾನಕ್ಕೆ ಅವಕಾಶವಾಗದಂತೆ ಕಟ್ಟೆಚ್ಚರ ವಹಿಸುವ ಮೂರೂ ರಾಜಕೀಯ ಪಕ್ಷಗಳು ವಿಪ್ ಜಾರಿ ಮಾಡುವ ಸಾಧ್ಯತೆ ಇದೆ. ಚುನಾವಣಾ ಕಣದಲ್ಲಿ ಕಾಂಗ್ರೆಸ್‍ನಿಂದ ಮೂವರು ಬಿಜೆಪಿ ಹಾಗೂ ಜೆಡಿಎಸ್‍ನಿಂದ ತಲಾ ಒಬ್ಬ ಅಭ್ಯರ್ಥಿಗಳು ಇದ್ದಾರೆ. ಮಂಗಳವಾರ ನಡೆಯಲಿರುವ ಮತದಾನದಲ್ಲಿ ಅಡ್ಡಮತದಾನವಾಗಬಾರದು ಎಂಬ ಕಾರಣಕ್ಕೆ ನಾನಾ ರೀತಿಯ ರಣತಂತ್ರಗಳನ್ನು ಅನುಸರಿಸಲಾಗುತ್ತಿದೆ.

ಆಡಳಿತಾರೂಢ ಕಾಂಗ್ರೆಸ್‍ನಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಕೇನ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಬಯಸಿದ್ದಾರೆ. ಕಾಂಗ್ರೆಸ್‍ನ ಜಿ.ಸಿ.ಚಂದ್ರಶೇಖರ್, ಸಯ್ಯದ್ ನಾಸಿರ್ ಹುಸೇನ್ ಮರು ಆಯ್ಕೆಗೆ ಕಣದಲ್ಲಿದ್ದಾರೆ. ಬಿಜೆಪಿಯಿಂದ ನಾರಾಯಣ ಸ ಬಾಂಡಗೆ, ಜೆಡಿಎಸ್‍ನಿಂದ ರಾಜ್ಯಸಭೆಯ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ.

ಕಾಂಗ್ರೆಸ್ 135 ಸ್ಥಾನಗಳನ್ನು ಹೊಂದಿದ್ದು, ಮೂವರು ಅಭ್ಯರ್ಥಿಗಳನ್ನು ಸುಲಭವಾಗಿ ಗೆಲ್ಲಿಸಿಕೊಳ್ಳುವ ಅವಕಾಶ ಹೊಂದಿದೆ. ಆದರೂ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಇಚ್ಛಿಸದ ನಾಯಕರು ಪಕ್ಷೇತರರಾದ ಜನಾರ್ಧನರೆಡ್ಡಿ, ದರ್ಶನ್ ಪುಟ್ಟಣ್ಣಯ್ಯ, ಲತಾ ಮಲ್ಲಿಕಾರ್ಜುನ, ಪುಟ್ಟಸ್ವಾಮಿಗೌಡ ಅವರನ್ನು ಸಂಪರ್ಕದಲ್ಲಿಟ್ಟುಕೊಂಡು ಕಾಂಗ್ರೆಸ್‍ಗೆ ಮತ ಹಾಕುವಂತೆ ಮನವೊಲಿಸುತ್ತಿದ್ದಾರೆ.

ಆನೆ ದಾಳಿಯಿಂದ ಜೀವ ಹಾನಿ: ಕರ್ನಾಟಕಕ್ಕೆ ಮೊದಲ ಸ್ಥಾನ

ಕಾಂಗ್ರೆಸ್‍ಗೆ ಈ ಹಿಂದೆ ವಿಧಾನಪರಿಷತ್ ಚುನಾವಣೆಗಳಲ್ಲಿ ಅಡ್ಡಮತದಾನದ ಬಿಸಿ ತಾಗಿದೆ. ಈ ಬಾರಿ ಹೈಕಮಾಂಡ್ ಅಜಯ್ ಮಕೇನ್ ಅವರನ್ನು ಗೆಲ್ಲಿಸಿಕೊಳ್ಳಲೇಬೇಕೆಂದು ಸೂಚನೆ ನೀಡಿದೆ. ಅದರ ಜೊತೆಗೆ ಯಾವುದೇ ಒಬ್ಬ ಅಭ್ಯರ್ಥಿಗೆ ಹಿನ್ನಡೆಯಾದರೂ ಅದು ರಾಜಕೀಯ ಸ್ಥಿತ್ಯಂತರಿಗಳಿಗೆ ಕಾರಣವಾಗಲಿದೆ.
ಈ ಹಿಂದೆ ಮಹಾರಾಷ್ಟ್ರದಲ್ಲಿ ರಾಜ್ಯಸಭೆ ಚುನಾವಣೆ ವೇಳೆಯಲ್ಲಿ ರಾಜಕೀಯ ವಿಪ್ಲವಗಳು ನಡೆದು ಕಾಂಗ್ರೆಸ್, ಶ್ರೀಸೇನೆ, ಎನ್‍ಸಿಪಿ ಸಂಯುಕ್ತದ ಮಹಾ ವಿಕಾಸ ಅಘಾಡಿ ಸರ್ಕಾರ ಪತನವಾಗಿತ್ತು. ಆ ಕಹಿ ಅನುಭವದ ಆಧಾರದ ಮೇಲೆ ಕಾಂಗ್ರೆಸ್ ನಾಯಕರು ಅಗತ್ಯಕ್ಕಿಂತಲೂ ಹೆಚ್ಚಿನ ಮುತುವರ್ಜಿ ವಹಿಸಿ ರೆಸಾರ್ಟ್ ರಾಜಕೀಯದ ಮೊರೆ ಹೋಗಿದ್ದಾರೆ.

ಯಾವುದೇ ಸಂದರ್ಭದಲ್ಲಿ ಸಣ್ಣ ಅವಕಾಶ ಸಿಕ್ಕರೂ ಸರ್ಕಾರಕ್ಕೆ ಮುಳುವಾಗುವಂತಹ ಬೆಳವಣಿಗೆಗಳಾಗುವ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ಪ್ರತಿಪಕ್ಷಗಳು ರಣತಂತ್ರ ರೂಪಿಸುವಲ್ಲಿ ನಿರತವಾಗಿವೆ. ಇದಕ್ಕೆ ಅವಕಾಶ ನೀಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರೂ ಅಖಾಡಕ್ಕೆ ಇಳಿದಿದ್ದಾರೆ.

ನಾಳೆ ವಿಧಾನಮಂಡಲ ಅಧಿವೇಶನದ ಬಳಿಕ ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದ್ದು, ಅದರಲ್ಲಿ ಯಾವ ಶಾಸಕರು, ಯಾರಿಗೆ ಮತ ಚಲಾಯಿಸಬೇಕು ಎಂಬ ಸೂಚನೆ ನೀಡಲಾಗುತ್ತದೆ. ಪ್ರಥಮ ಪ್ರಾಶಸ್ತ್ಯದ ಮತವನ್ನು ಯಾವ ಅಭ್ಯರ್ಥಿಗೆ ಹಾಕಬೇಕು ಹಾಗೂ ದ್ವಿತೀಯ ಪ್ರಾಶಸ್ತ್ಯ ಮತವನ್ನು ಯಾವ ಅಭ್ಯರ್ಥಿಗೆ ಹಾಕಬೇಕು ಎಂಬ ತರಬೇತಿ ನೀಡಲಾಗುತ್ತದೆ.

ಅದರಂತೆ ಮಂಗಳವಾರ ನಡೆಯುವ ಮತದಾನದಲ್ಲಿ ಆಡಳಿತಾರೂಢ ಶಾಸಕರು ಆಯಾ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಸೂಚಿಸಲಾಗುತ್ತದೆ. ಪ್ರತಿ ಅಭ್ಯರ್ಥಿಯ ಗೆಲುವಿಗೆ 45 ಶಾಸಕರ ಮತಗಳ ಅಗತ್ಯವಿದೆ. ಕಾಂಗ್ರೆಸ್ ತನ್ನ ಶಾಸಕರನ್ನು ತಲಾ ಒಬ್ಬ ಅಭ್ಯರ್ಥಿಗೆ 45 ರಂತೆ ಹಂಚಿಕೆ ಮಾಡಿ ಹೆಚ್ಚುವರಿಯಾಗಿರುವ ಪಕ್ಷೇತರ ಮತಗಳನ್ನು ಸೇರಿಸಿ 46 ಮತಗಳ ಗಡಿ ದಾಟಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ದೇಶದ ಅತೀ ಉದ್ದದ ಕೇಬಲ್ ಸೇತುವೆಯನ್ನು ಲೋಕಾರ್ಪಣೆ ಮಾಡಿದ ಮೋದಿ

ಪ್ರತಿಪಕ್ಷವಾದ ಬಿಜೆಪಿ ಕೂಡ ತನ್ನ ಅಭ್ಯರ್ಥಿ ನಾರಾಯಣ ಸ ಬಾಂಡಗೆ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ಚಲಾಯಿಸುವಂತೆ ಹಾಗೂ ಜೆಡಿಎಸ್ ಕೂಡ ತನ್ನ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ಚಲಾಯಿಸುವಂತೆ ಶಾಸಕರಿಗೆ ವಿಪ್ ನೀಡಲಿದೆ. ಬಿಜೆಪಿಯ ಹೆಚ್ಚುವರಿ ಮತಗಳನ್ನು ಹಾಗೂ ದ್ವಿತೀಯ ಪ್ರಾಶಸ್ತ್ಯದ ಮತವನ್ನು ಜೆಡಿಎಸ್ ಅಭ್ಯರ್ಥಿಗೆ ಹಾಕಲು ತೀರ್ಮಾನಿಸುವ ಸಂಭವವಿದೆ. ಹಾಗೆಯೇ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುವ ಜೆಡಿಎಸ್ ಮತ್ತು ಬಿಜೆಪಿಯ ಶಾಸಕರು ದ್ವಿತೀಯ ಪ್ರಾಶಸ್ತ್ಯದ ಮತವನ್ನು ಬಿಜೆಪಿಯ ಅಭ್ಯರ್ಥಿಗೆ ಹಾಕುವಂತೆ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.

ಎನ್‍ಡಿಎ ಮೈತ್ರಿಕೂಟವನ್ನು ಜೆಡಿಎಸ್ ಸೇರಿದ ನಂತರ ಉಭಯ ಪಕ್ಷಗಳು ಜಂಟಿಯಾಗಿ ಚುನಾವಣೆಯನ್ನು ಎದುರಿಸುತ್ತಿವೆ. ಹಾಗೆಯೇ ಹೋರಾಟವನ್ನು ಒಟ್ಟಾಗಿ ಮಾಡುತ್ತಿವೆ. ಆಯಾ ಪಕ್ಷಗಳ ಮುಖ್ಯ ಸಚೇತಕರು ಶಾಸಕರಿಗೆ ವಿಪ್ ನೀಡಲಿದ್ದು, ಒಂದು ವೇಳೆ ರಾಜ್ಯಸಭೆ ಚುನಾವಣೆಯಲ್ಲಿ ಸೂಚಿಸಿದ ಅಭ್ಯರ್ಥಿಗೆ ಮತ ಹಾಕದೇ ಉಲ್ಲಂಘನೆ ಮಾಡಿದರೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಲಾಗುತ್ತದೆ.

RELATED ARTICLES

Latest News