Friday, November 22, 2024
Homeರಾಜ್ಯಕ್ಷೇತ್ರ ಹೊಂದಾಣಿಕೆ ಅಂತಿಮ: ಅಭ್ಯರ್ಥಿ ಆಯ್ಕೆಗೆ ಜೆಡಿಎಸ್ ಕಸರತ್ತು

ಕ್ಷೇತ್ರ ಹೊಂದಾಣಿಕೆ ಅಂತಿಮ: ಅಭ್ಯರ್ಥಿ ಆಯ್ಕೆಗೆ ಜೆಡಿಎಸ್ ಕಸರತ್ತು

ಬೆಂಗಳೂರು,ಫೆ.25-ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ನಡುವೆ ಕ್ಷೇತ್ರ ಹಂಚಿಕೆ ಬಹುತೇಕ ಅಂತಿಮಗೊಂಡಿದ್ದು, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಚುನಾವಣಾ ಪೂರ್ವ ಸಮೀಕ್ಷೆಯನ್ನು ಬಿಜೆಪಿ ನಡೆಸಿದ್ದು, ಸಮೀಕ್ಷಾ ವರದಿ ಆಧರಿಸಿ ಗೆಲ್ಲುವ ವರ್ಚಸ್ಸುಳ್ಳ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲು ಉಭಯ ಪಕ್ಷಗಳ ನಾಯಕರು ತೀರ್ಮಾನಿಸಿದ್ದಾರೆ. ಹೀಗಾಗಿ ಕ್ಷೇತ್ರ ಹಂಚಿಕೆಯಲ್ಲಿ ಅದಲು ಬದಲಾದರೂ ಹೊಂದಾಣಿಕೆ ಮಾಡಿಕೊಂಡು ಚುನಾವಣೆಯನ್ನು ಎದುರಿಸಲು ನಿರ್ಧರಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಗರಿಷ್ಠ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕೆಂಬ ಗುರಿಯನ್ನು ಬಿಜೆಪಿ ಮತ್ತು ಜೆಡಿಎಸ್ ಹೊಂದಿವೆ. ಆ ನಿಟ್ಟಿನಲ್ಲಿ ಈಗಿನಿಂದಲೇ ಚುನಾವಣಾ ಸಿದ್ಧತೆಯನ್ನು ನಡೆಸಲು ಮುಂದಾಗುತ್ತಿವೆ. ರಾಜ್ಯ ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆ ಚುನಾವಣಾ ಸಿದ್ಧತೆಯಲ್ಲಿ ಜೆಡಿಎಸ್ ಸಕ್ರಿಯವಾಗಲಿದೆ. ರಾಜ್ಯಸರ್ಕಾರದ ವಿರುದ್ಧ ಬಿಜೆಪಿಯೊಂದಿಗೆ ಸೇರಿ ಜಂಟಿ ಹೋರಾಟ ಮಾಡಲು ನಿರ್ಧರಿಸಲಾಗಿದೆ.

ಇತ್ತೀಚೆಗೆ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾರನ್ನು ಭೇಟಿ ಮಾಡಿ ಲೋಕಸಭಾ ಚುನಾವಣೆ ಕ್ಷೇತ್ರ ಹಂಚಿಕೆಯನ್ನು ಬಹುತೇಕ ಅಂತಿಮಗೊಳಿಸಿದ್ದಾರೆ. ಕೋಲಾರ, ಹಾಸನ, ಮಂಡ್ಯ ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟುಕೊಡಲು ಸಮ್ಮತಿಸಿದ್ದಾರೆ. ಜೊತೆಗೆ ಕಲ್ಯಾಣ ಕರ್ನಾಟಕ ಹಾಗೂ ಹಳೆ ಮೈಸೂರು ಭಾಗದಲ್ಲಿ ಯಾವುದಾದರೂ ಒಂದು ಕ್ಷೇತ್ರವನ್ನು ಜೆಡಿಎಸ್‍ಗೆ ನೀಡುವ ಬಗ್ಗೆ ಮಾತುಕತೆ ನಡೆಸಲಾಗಿದೆ. ಮಾರ್ಚ್ ಮೊದಲ ವಾರದಲ್ಲಿ ಇನ್ನೊಂದು ಕ್ಷೇತ್ರ ಯಾವುದು ಎಂಬುದು ಸ್ಪಷ್ಟವಾಗಲಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ವಿದೇಶಿ ಹಡಗನ್ನು ಜಪ್ತಿ ಮಾಡುವಂತೆ ಒರಿಸ್ಸಾ ಹೈಕೋರ್ಟ್ ಆದೇಶ

ಪಕ್ಷದ ವತಿಯಿಂದ ಕಣಕ್ಕಿಳಿಸಲಿರುವ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಜೆಡಿಎಸ್ ನಾಯಕರು ಸಭೆ ನಡೆಸಿ ಶೀಘ್ರದಲ್ಲೇ ಅಂತಿಮಗೊಳಿಸಲಿದ್ದಾರೆ. ಆಯಾ ಕ್ಷೇತ್ರದ ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಸಮರ್ಥ ಅಭ್ಯರ್ಥಿ ಆಯ್ಕೆ ಮಾಡಲು ನಿರ್ಧರಿಸಿದ್ದಾರೆ. ಹಾಸನ ಕ್ಷೇತ್ರದಲ್ಲಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣನವರೇ ಅಭ್ಯರ್ಥಿ ಎಂದು ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಕಟಿಸಿದ್ದಾರೆ. ಮಂಡ್ಯದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಹೆಸರು ಮುಂಚೂಣಿಯಲ್ಲಿದೆ. ಅಲ್ಲದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರೇ ಈ ಕ್ಷೇತ್ರದಿಂದ ಸ್ರ್ಪಧಿಸಬೇಕು ಎಂಬ ಒತ್ತಡವಿದೆ.

ಕೋಲಾರ ಮೀಸಲು ಕ್ಷೇತ್ರವಾಗಿರುವುದರಿಂದ ಅಭ್ಯರ್ಥಿ ಯಾರೆಂಬುದು ಇನ್ನೂ ಖಚಿತವಾಗಿಲ್ಲ. ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಕುಮಾರಸ್ವಾಮಿಯವರು ಮಾಡಲಿದ್ದಾರೆ.
ಒಟ್ಟಾರೆ ಲೋಕಸಭಾ ಚುನಾವಣೆಯನ್ನು ಬಿಜೆಪಿ-ಜೆಡಿಎಸ್ ಜಂಟಿಯಾಗಿ ಎದುರಿಸುವುದು, ಜೆಡಿಎಸ್ ಅಭ್ಯರ್ಥಿಗಳಿರುವ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲ ಪಡೆಯುವುದು, ಬಿಜೆಪಿ ಅಭ್ಯರ್ಥಿಗಳಿರುವ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲ ನೀಡುವ ಬಗ್ಗೆ ಕಾರ್ಯಕರ್ತರನ್ನು ಹುರಿದುಂಬಿಸುವ ಕಾರ್ಯದಲ್ಲಿ ಕುಮಾರಸ್ವಾಮಿ ಮಗ್ನರಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

RELATED ARTICLES

Latest News