ಬೆಂಗಳೂರು,ಫೆ.25- ಕೇಂದ್ರದ ಪ್ರಭಾವಿ ಸಚಿವರಾಗಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದ ಬಿಜೆಪಿ ಭದ್ರಕೋಟೆಯ ಕ್ಷೇತ್ರಗಳಿಂದ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಸಾಧ್ಯತೆ ದಟ್ಟವಾಗಿದೆ.
ರಾಜ್ಯಸಭಾ ಸದಸ್ಯರಾಗಿ ಕೇಂದ್ರ ಸಚಿವರಾಗಿರುವ ಈ ಇಬ್ಬರೂ ಸಚಿವರನ್ನು ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಸಿ, ನೇರ ಚುನಾವಣೆ ಮೂಲಕವೇ ಲೋಕಸಭೆಗೆ ಆಯ್ಕೆ ಮಾಡುವ ಬಗ್ಗೆ ಬಿಜೆಪಿ ಹೈಕಮಾಂಡ್ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿದೆ. ಈ ಸಂಬಂಧ ಸಮೀಕ್ಷೆ ನಡೆಸಿ ಆಂತರಿಕ ವರದಿ ಪಡೆಯಲಾಗುತ್ತಿದೆ ಎಂದು ತಿಳಿದುಬಂದಿದೆ. ರಾಜ್ಯದ 28ಕ್ಕೆ 28 ಕ್ಷೇತ್ರಗಳನ್ನೂ ಗೆಲ್ಲಲೇಬೇಕೆಂಬ ಗುರಿ ಇಟ್ಟುಕೊಂಡಿರುವ ಬಿಜೆಪಿ, ಉತ್ತಮ ರಾಜತಾಂತ್ರಿಕರೂ ಆಗಿರುವ ಜೈಶಂಕರ್ ಮತ್ತು ನಿರ್ಮಲಾ ಸೀತಾರಾಮನ್ ಅವರಿಗೆ ರಾಜ್ಯದಿಂದ ಟಿಕೆಟ್ ನೀಡಿ ಲೋಕಸಭೆ ಚುನಾವಣೆಗೆ ರಂಗು ನೀಡಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ.
ಕರ್ನಾಟಕ ಸಿಜೆ ಆಗಿ ನ್ಯಾ.ಅಂಜಾರಿಯಾ ಪ್ರಮಾಣ ಸ್ವೀಕಾರ
ಕರಾವಳಿ ಕ್ಷೇತ್ರದಿಂದ ಸ್ಪರ್ಧೆ?:
ನಿರ್ಮಲಾ ಸೀತಾರಾಮನ್ ಅವರನ್ನು ಪಕ್ಷದ ಭದ್ರಕೋಟೆಯಾಗಿರುವ ಕರಾವಳಿಯ ಕ್ಷೇತ್ರಗಳಿಂದ ಕಣಕ್ಕಿಳಿಸಿದರೆ ಹೇಗೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ದಕ್ಷಿಣಕನ್ನಡ, ಉಡುಪಿ-ಚಿಕ್ಕಮಗಳೂರು, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ ಅಥವಾ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳಿಂದ ಜೈಶಂಕರ್ ಮತ್ತು ನಿರ್ಮಲಾ ಸೀತಾರಾಮನ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ನಿರ್ಮಲಾ ಸೀತಾರಾಮನ್ ಈಗಾಗಲೇ ಕರಾವಳಿ ಭಾಗದ ಉಡುಪಿ ಜೊತೆ ನಿಕಟ ಸಂಪರ್ಕ ಹೊಂದಿದವರಾಗಿದ್ದಾರೆ. ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗುವ ಮೂಲಕ ಬೆಂಗಳೂರಿನೊಂದಿಗೂ ನಂಟು ಹೊಂದಿದ್ದಾರೆ. ಜೈಶಂಕರ್ ಅವರು ರಾಷ್ಟ್ರೀಯ ಮಿಲಿಟರಿ ಶಾಲೆಯಲ್ಲಿ ಅಭ್ಯಸಿಸುವ ಮೂಲಕ ಬೆಂಗಳೂರಿನ ಜೊತೆ ಸಂಪರ್ಕ ಹೊಂದಿದ್ದಾರೆ. ಬೆಂಗಳೂರಿನ ಮೂರು ಲೋಕಸಭೆ ಕ್ಷೇತ್ರಗಳಲ್ಲಿ ಯಾವುದಾದರೂ ಒಂದು ಕಡೆಯಿಂದ ಅವರನ್ನು ಚುನಾವಣೆಗೆ ನಿಲ್ಲಿಸುವ ಕುರಿತು ಪಕ್ಷದ ವೇದಿಕೆಯಲ್ಲಿ ಸಮಾಲೋಚನೆ ನಡೆಯುತ್ತಿದೆ ಎಂದು ಹೇಳಲಾಗಿದೆ.
ಬೇಸಿಗೆಗೂ ಮುನ್ನವೇ ಜಲಕ್ಷಾಮದ ಭೀತಿ : ಎಲ್ಲೆಡೆ ಭುಗಿಲೇಳುತ್ತಿರುವ ನೀರಿನ ಹಾಹಾಕಾರ
ರಾಜ್ಯಸಭಾ ಸದಸ್ಯರಾಗಿ ಕೇಂದ್ರ ಸಚಿವರಾಗಿರುವವರನ್ನು ಲೋಕಸಭೆಗೆ ಆಯ್ಕೆ ಮಾಡುವ ಉದ್ದೇಶ ಬಿಜೆಪಿ ಹೈಕಮಾಂಡ್‍ಗಿದೆ. ಈ ಕಾರಣದಿಂದಲೇ ಕೇಂದ್ರ ಸಚಿವರಾದ ಉದ್ಯಮಿ ಆರ್.ಸಿ.ಚಂದ್ರಶೇಖರ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮರು ಆಯ್ಕೆ ಮಾಡದೇ, ಲೋಕಸಭೆಗೆ ಸ್ರ್ಪಧಿಸಲು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. ಆರ್.ಸಿ.ಚಂದ್ರಶೇಖರ್ ಅವರು ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಕೇರಳದ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆಗಿಳಿಯುವ ಬಗ್ಗೆ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ಜೈಶಂಕರ್ ಮತ್ತು ನಿರ್ಮಲಾ ಸೀತಾರಾಮನ್ ಅವರು ರಾಜ್ಯದಿಂದಲೇ ಸ್ರ್ಪಸುವುದು ಅಂತಿಮವಾದರೆ ಬಿಜೆಪಿ ಭದ್ರಕೋಟೆಗಳಿಂದ ಗೆದ್ದು ಹಾಲಿ ಸಂಸದರಾಗಿರುವ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್, ನಳೀನ್‍ಕುಮಾರ್ ಕಟೀಲ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಮಾಜಿ ಸಿಎಂ ಸದಾನಂದ ಗೌಡ ಅವರ ಸ್ಪರ್ಧೆಗೆ ಕುತ್ತು ಬರುವ ಸಂಭವವಿದೆ ಎನ್ನಲಾಗಿದೆ.