ಬೆಂಗಳೂರು, ಜು.31- ಹುಬ್ಬಳ್ಳಿ-ಧಾರವಾಡದಲ್ಲಿನ ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನ ಮಾಜಿ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ಮಾನ್ಯ ಮಾಡಿದ್ದು, ಮಧ್ಯಂತರ ಜಾಮೀನು ನೀಡಿದೆ.
ಹೈಕೋರ್ಟ್ ನ ನ್ಯಾಯಮೂರ್ತಿ ಎಂ. ನವಾಜ್ ಮತ್ತು ನ್ಯಾಯಮೂರ್ತಿ ಜಿ. ಬಸವರಾಜ ಅವರನ್ನೊಳಗೊಂಡ ವಿಭಾಗೀಯ ಪೀಠ ಜಾಮೀನು ಅರ್ಜಿಯ ವಿಚಾರಣೆ ನಡೆಸಿತ್ತು. ಐದು ಲಕ್ಷ ವೈಯಕ್ತಿಕ ಬಾಂಡ್ ಮತ್ತು ಭದ್ರತೆ ಜೊತೆ ಶಿಕ್ಷಾ ಬಂಧಿಯನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಹೈಕೋರ್ಟ ಅನುಮತಿಸಿದೆ. ಆದರೆ ವಿದೇಶಕ್ಕೆ ತೆರಳಬಾರದು ಎಂಬುದು ಸೇರಿದಂತೆ ಅನೇಕ ಷರತ್ತುಗಳನ್ನು ವಿಧಿಸಲಾಗಿದೆ.
ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ದೋಷಿ ಎಂದು ತೀರ್ಮಾನಿಸಿ ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿದ್ದ ತೀರ್ಪಿಗೂ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಶಿಕ್ಷೆಯನ್ನು ಅಮಾನತ್ತಿನಲ್ಲಿ ಇರಿಸಲಾಗಿದೆ.
ಈ ಮೊದಲು ವಿಚಾರಣಾ ನ್ಯಾಯಾಲಯದ ತೀರ್ಪಿನಿಂದ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನ ರದ್ದಾಗಿತ್ತು. ಹೈಕೋರ್ಟ್ ಜಾಮೀನು ನೀಡಿರುವುದರಿಂದ ಶಾಸಕ ಸ್ಥಾನಕ್ಕೆ ಮರು ಜೀವ ಬಂದಿದೆ. ಸಚಿವ ಸಂಪುಟ ವಿಸ್ತರಣೆಯ ಪ್ರಕ್ರಿಯೆಗಳು ಚಾಲ್ತಿಯಲ್ಲಿ ಇದ್ದಾಗಲೇ ಜಾಮೀನು ಸಿಕ್ಕಿರುವುದು ಭಾರೀ ರಾಜಕೀಯವಾಗಿ ಸಂಚಲನ ಮೂಡಿಸಿದೆ. ವಿನಯ್ ಕುಲಕರ್ಣಿ ಸೇರಿದಂತೆ ಇತರೇ ಹತ್ತು ಮಂದಿಗೆ ಶಿಕ್ಷೆ ಅಮಾನತ್ತಿನಲ್ಲಿರಿಸಿ ಜಾಮೀನು ನೀಡಲಾಗಿದೆ.
ಹಿನ್ನೆಲೆ:
2016ರ ಜೂನ್ 15ರಂದು ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೇಶ್ ಗೌಡ ಅವರನ್ನು ಧಾರವಾಡದ ಸಪ್ತಾಪುರದಲ್ಲಿರುವ ಅವರ ಜಿಮ್ ಸಮೀಪ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಘಟನೆ ರಾಜ್ಯದಲ್ಲಿ ಭಾರೀ ರಾಜಕೀಯ ಸಂಚಲನಕ್ಕೆ ಕಾರಣವಾಗಿತ್ತು.
ಆರಂಭದಲ್ಲಿ ಪ್ರಕರಣದ ತನಿಖೆಯನ್ನು ಧಾರವಾಡ ಗ್ರಾಮೀಣ ಪೊಲೀಸರು ನಡೆಸಿದರು. ಬಳಿಕ ರಾಜ್ಯ ಸರ್ಕಾರ ಪ್ರಕರಣವನ್ನು ಕೇಂದ್ರ ತನಿಖಾ ದಳ (ಸಿಬಿಐ)ಗೆ ವರ್ಗಾಯಿಸಲಾಗಿತ್ತು. ಸಿಬಿಐ ತನಿಖೆಯಲ್ಲಿ ಈ ಹತ್ಯೆ ಪೂರ್ವನಿಯೋಜಿತ ಪಿತೂರಿಯ ಭಾಗವಾಗಿದ್ದು, ಆಗಿನ ಕಾಂಗ್ರೆಸ್ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ ಹಲವರು ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಯಿತು.
ಸಿಬಿಐ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಭಾರತೀಯ ದಂಡ ಸಂಹಿತೆಯ 120-ಬಿ (ಅಪರಾಧಿಕ ಸಂಚು), 143, 147, 148 (ಅಕ್ರಮ ಕೂಟ ಮತ್ತು ಗಲಭೆ), 302 (ಕೊಲೆ), 109 (ಪ್ರಚೋದನೆ), 201 (ಸಾಕ್ಷ್ಯ ನಾಶ), 149 (ಸಾಮಾನ್ಯ ಉದ್ದೇಶದಡಿ ಅಪರಾಧ) ಸೇರಿದಂತೆ ಹಲವು ಕಲಂಗಳನ್ನು ಅನ್ವಯಿಸಲಾಗಿತ್ತು. ತನಿಖೆಯ ವೇಳೆ ಸಾಕ್ಷಿಗಳ ಹೇಳಿಕೆಗಳು, ಕರೆ ವಿವರಗಳು, ಹಣಕಾಸುವ್ಯವಹಾರಗಳ ಮಾಹಿತಿ ಹಾಗೂ ಇತರೆ ಸಂದರ್ಭೋಚಿತ ಸಾಕ್ಷ್ಯಗಳನ್ನು ಸಿಬಿಐ ನ್ಯಾಯಾಲಯದ ಮುಂದೆ ಮಂಡಿಸಿತ್ತು.
ಪ್ರಕರಣದಲ್ಲಿ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂಬ ಆಧಾರದ ಮೇಲೆ ವಿನಯ್ ಕುಲಕರ್ಣಿ ಅವರನ್ನು 2020ರ ನವೆಂಬರ್‌ನಲ್ಲಿ ಸಿಬಿಐ ಬಂಧಿಸಿತ್ತು. ಬಳಿಕ ಅವರಿಗೆ ಹಲವು ಷರತ್ತುಗಳೊಂದಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ್ದು, ಧಾರವಾಡ ಜಿಲ್ಲೆಗೆ ಪ್ರವೇಶಿಸದಂತೆ ಹಾಗೂ ಸಾಕ್ಷಿಗಳೊಂದಿಗೆ ಸಂಪರ್ಕಿಸದಂತೆ ನಿರ್ಬಂಧ ವಿಧಿಸಲಾಗಿತ್ತು.
ದೀರ್ಘಕಾಲ ವಿಚಾರಣೆ ನಡೆಸಿದ ಬಳಿಕ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಸಿಬಿಐ ನ್ಯಾಯಾಲಯ 2026ರ ಏಪ್ರಿಲ್‌ನಲ್ಲಿ ವಿನಯ್ ಕುಲಕರ್ಣಿ ಸೇರಿದಂತೆ ಹಲವು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿತು. ನಂತರ ಶಿಕ್ಷೆಯ ಪ್ರಮಾಣ ಪ್ರಕಟಿಸಿ ವಿನಯ್ ಕುಲಕರ್ಣಿ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿತು. ನ್ಯಾಯಾಲಯವು ಹತ್ಯೆ ಪೂರ್ವನಿಯೋಜಿತ ಸಂಚಿನ ಫಲಿತಾಂಶವಾಗಿದ್ದು, ಆರೋಪಿಗಳ ವಿರುದ್ಧದ ಸಂದರ್ಭೋಚಿತ ಸಾಕ್ಷ್ಯಗಳು ಪರಸ್ಪರ ಹೊಂದಾಣಿಕೆಯಾಗಿವೆ ಎಂದು ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿತು.
ಈ ತೀರ್ಪನ್ನು ಪ್ರಶ್ನಿಸಿ ವಿನಯ್ ಕುಲಕರ್ಣಿ ಕರ್ನಾಟಕ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಮೇಲನವಿ ಅಂತಿಮವಾಗಿ ಇತ್ಯರ್ಥವಾಗುವವರೆಗೆ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡುವಂತೆ ಅವರು ಮನವಿ ಮಾಡಿಕೊಂಡಿದ್ದರು. ಅರ್ಜಿಯ ವಿಚಾರಣೆ ವೇಳೆ ಸಿಬಿಐ, ವಿಶೇಷ ನ್ಯಾಯಾಲಯದ ತೀರ್ಪು ಸಮರ್ಪಕ ಸಾಕ್ಷ್ಯಾಧಾರಗಳ ಮೇಲೆ ಆಧಾರಿತವಾಗಿದ್ದು, ಶಿಕ್ಷೆ ಅಮಾನತುಗೊಳಿಸಬಾರದು ಎಂದು ವಾದಿಸಲಾಗಿತ್ತು.
ವಿಚಾರಣಾ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ಸಿಬಿಐ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ರಾಜು ಅವರು ಖುದ್ದು ಹೈಕೋರ್ಟ್‌ನಲ್ಲಿ ಜಾಮೀನಿಗೆ ವಿರೋಧ ವ್ಯಕ್ತ ಪಡಿಸಿ ವಾದ ಮಂಡಿಸಿದ್ದರು.ಇನ್ನೊಂದೆಡೆ, ಮೇಲ್ಮನವಿಯಲ್ಲಿ ಹಲವು ಕಾನೂನು ಅಂಶಗಳನ್ನು ಪರಿಶೀಲಿಸಬೇಕಿರುವುದರಿಂದ ಶಿಕ್ಷೆ ಅಮಾನತುಗೊಳಿಸಿ ಜಾಮೀನು ನೀಡಬೇಕು ಎಂದು ವಿನಯ್ ಕುಲಕರ್ಣಿ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು.
ನ್ಯಾಯಮೂರ್ತಿ ಎಂ. ನವಾಜ್ ಮತ್ತು ನ್ಯಾಯಮೂರ್ತಿ ಜಿ. ಬಸವರಾಜ ಅವರ ವಿಭಾಗೀಯ ಪೀಠವು ಎರಡೂ ಪಕ್ಷಗಳ ವಾದವನ್ನು ಆಲಿಸಿ , ಶಿಕ್ಷೆ ಅಮಾನತುಗೊಳಿಸಿ ಜಾಮೀನು ನೀಡಿದೆ. ಬಹುತೇಕ ನಾಳೆ ಆರೋಪಿಗಳು ಬಿಡುಗಡೆಯಾಗುವ ಸಾಧ್ಯತೆ ಇದೆ.
ಮತ್ತೊಂದೆಡೆ ಮಧ್ಯಂತರ ಜಾಮೀನನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಸಿಬಿಐ ತಯಾರಿ ನಡೆಸಿದೆ.
