ಬೆಂಗಳೂರು,ಫೆ.26- ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ದತೆ ನಡೆಸಿರುವ ಬಿಜೆಪಿ ಕೇಂದ್ರದಲ್ಲಿ ಮೂರನೇ ಬಾರಿಗೆ ಅಧಿಕಾರ ಹಿಡಿಯುವ ಅಧಮ್ಯ ವಿಶ್ವಾಸದಲ್ಲಿದ್ದು, ಇದೇ ತಿಂಗಳ 29ರಂದು ಪ್ರಕಟಗೊಳ್ಳಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ರಾಜ್ಯದ 10ಕ್ಕೂ ಹೆಚ್ಚು ಹಾಲಿ ಸಂಸದರಿಗೆ ಟಿಕೆಟ್ ಘೋಷಣೆ ಮಾಡಲಿದೆ.
ಇದೇ ತಿಂಗಳ 29ರಂದು ನವದೆಹಲಿಯಲ್ಲಿ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಅಂದು ಪಕ್ಷವು ಸುಮಾರು 150ಕ್ಕೂ ಹೆಚ್ಚು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮೊದಲ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರಮೋದಿ, ಕೇಂದ್ರ ಸಚಿವರಾದ ಅಮಿತ್ ಷಾ, ರಾಜನಾಥ್ ಸಿಂಗ್, ಸ್ಮೃತಿ ಇರಾನಿ, ಅನುರಾಗ್ ಠಾಕೂರ್ ಸೇರಿದಂತೆ ಅಂದಾಜು 150ಕ್ಕೂ ಹೆಚ್ಚು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಹಾಲಿ 10ಕ್ಕೂ ಹೆಚ್ಚು ಸಂಸದರಿಗೆ ಟಿಕೆಟ್ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ಖಚಿತಪಡಿಸಿವೆ.
ಶಿವಮೊಗ್ಗ-ಬಿ.ವೈ.ರಾಘವೇಂದ್ರ, ಮೈಸೂರು-ಕೊಡುಗು- ಪ್ರತಾಪ್ ಸಿಂಹ, ಚಿತ್ರದುರ್ಗ- ಎ.ನಾರಾಯಣಸ್ವಾಮಿ, ಡಾ.ಉಮೇಶ್ ಜಾಧವ್-ಕಲಬುರಗಿ, ಪ್ರಹ್ಲಾದ್ ಜೋಷಿ-ಧಾರವಾಡ, ಬಿ.ಶ್ರೀರಾಮುಲು -ಬಳ್ಳಾರಿ, ಅಮರೇಶ್ ನಾಯಕ್-ರಾಯಚೂರು, ಉತ್ತರಕನ್ನಡ-ಅನಂತಕುಮಾರ್ ಹೆಗಡೆ, ದಕ್ಷಿಣ ಕನ್ನಡ -ನಳೀನ್‍ಕುಮಾರ್ ಕಟೀಲ್, ಉಡುಪಿ-ಚಿಕ್ಕಮಗಳೂರು-ಶೋಭಾ ಕರಂದ್ಲಾಜೆ, ಚಿಕ್ಕೋಡಿ-ಅಣ್ಣಾ ಸಾಹೇಬ್ ಜೊಲ್ಲೆ ಅವರುಗಳಿಗೆ ಟಿಕೆಟ್ ಮೊದಲ ಪಟ್ಟಿಯಲ್ಲೇ ಘೋಷಣೆಯಾಗುವ ಸಂಭವವಿದೆ.
ಬೈಕ್ ವೀಲ್ಹಿಂಗ್ ಹುಚ್ಚಾಟಕ್ಕೆ ಯುವಕ ಸಾವು..
ತೀವ್ರ ಜಿದ್ದಾಜಿದ್ದಿನಿಂದ ಕೂಡಿರುವ ಬೆಂಗಳೂರು ದಕ್ಷಿಣ, ಬೆಂಗಳೂರು ಸೆಂಟ್ರಲ್, ಬೆಂಗಳೂರು ಉತ್ತರ, ಚಾಮರಾಜನಗರ, ತುಮಕೂರು, ದಾವಣಗೆರೆ, ಕೊಪ್ಪಳ, ಹಾವೇರಿ, ಬೆಳಗಾವಿ, ಬೀದರ್, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಟಿಕೆಟ್ ಘೋಷಣೆಯಾಗುವ ಸಂಭವವಿದೆ.
ಜೆಡಿಎಸ್‍ಗೆ ಯಾವ ಯಾವ ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎಂಬುದರ ನಂತರ ಉಳಿದ ಕ್ಷೇತ್ರಗಳಿಗೆ ರಾಜ್ಯ ನಾಯಕರೊಂದಿಗೆ ಚರ್ಚಿಸಿ ಬಿಜೆಪಿ ವರಿಷ್ಠರು ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. 29ರಂದು ನಡೆಯಲಿರುವ ಚುನಾವಣಾ ಸಮಿತಿ ಸಭೆಯಲ್ಲಿ ರಾಜ್ಯದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರುಗಳು ಭಾಗವಹಿಸಲಿದ್ದಾರೆ.