Sunday, April 28, 2024
Homeರಾಜ್ಯನಿರುದ್ಯೋಗ ತಗ್ಗಿಸಲು ಪ್ರತಿ ವರ್ಷ ಬೃಹತ ಉದ್ಯೋಗ ಮೇಳ : ಸಿಎಂ ಸಿದ್ದರಾಮಯ್ಯ

ನಿರುದ್ಯೋಗ ತಗ್ಗಿಸಲು ಪ್ರತಿ ವರ್ಷ ಬೃಹತ ಉದ್ಯೋಗ ಮೇಳ : ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಫೆ.26- ರಾಜ್ಯದಲ್ಲಿ ನಿರುದ್ಯೋಗವನ್ನು ತಗ್ಗಿಸಲು ಇನ್ನು ಮುಂದೆ ಪ್ರತಿ ವರ್ಷ ಪ್ರಾದೇಶಿಕವಾರು ಬೃಹತ ಉದ್ಯೋಗ ಮೇಳವನ್ನು ಆಯೋಜಿಸುವುದಾಗಿ ತಿಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೊಸ ಜಿಟಿಟಿಸಿ ಕೇಂದ್ರಗಳನ್ನು ತೆರೆಯುವುದಾಗಿ ತಿಳಿಸಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಯುವ ಸಮೃದ್ಧಿ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, 580ಕ್ಕೂ ಹೆಚ್ಚು ಕಂಪನಿಗಳ ಉದ್ಯೋಗದಾತರು ಸಮ್ಮೇಳನದಲ್ಲಿ ಭಾಗವಹಿಸಿದ್ದು, ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗ ನೀಡಲು ಮುಂದೆ ಬಂದಿದ್ದಾರೆ. ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.

ಸರ್ಕಾರದ ವತಿಯಿಂದ ದೇಶದಲ್ಲಿ ಅತಿ ದೊಡ್ಡದಾದ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಇನ್ನು ಮುಂದೆ ಮೈಸೂರು, ಬೆಂಗಳೂರು, ಬೆಳಗಾವಿ, ಕಲಬುರಗಿ ಪ್ರಾದೇಶಿಕವಾರು ಉದ್ಯೋಗ ಮೇಳವನ್ನು ಪ್ರತಿ ವರ್ಷ ಆಯೋಜಿಸಲಾಗುವುದು. ಜೊತೆಗೆ ಮಾರುಕಟ್ಟೆ ಬೇಡಿಕೆ ಆಧಾರಿತವಾಗಿ ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸಲು ಕೌಶಲ್ಯ ತರಬೇತಿ ನೀಡಲಾಗುತ್ತದೆ.

ಈಗಾಗಲೇ ಐಟಿಐ, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಉದ್ಯೋಗಧಾರಿತ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ಸಾಕಷ್ಟು ಸರ್ಕಾರಿ ಟೋಲ್‍ರೂಮ್-ಟ್ರೈನಿಂಗ್ ಸೆಂಟರ್(ಜಿಟಿಟಿಸಿ)ಗಳನ್ನು ತೆರೆಯಲಾಗಿದೆ. ಮತ್ತಷ್ಟು ಕೇಂದ್ರಗಳನ್ನು ತೆರೆದು ಕೌಶಲ್ಯ ತರಬೇತಿಯನ್ನು ಹೆಚ್ಚಿಸುವುದಾಗಿ ಹೇಳಿದರು.
ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗುತ್ತಲೇ ಇದೆ. 2014ರಲ್ಲಿ ಶೇ.2.1ರಷ್ಟಿದ್ದ ನಿರುದ್ಯೋಗದ ಪ್ರಮಾಣ 2023ರ ವೇಳೆಗೆ ಶೇ.8.40ರಷ್ಟಾಗಿದೆ. ಲೋಕಸಭೆ ಚುನಾವಣೆ ವೇಳೆ ನರೇಂದ್ರಮೋದಿ ಅವರು ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಆದರೆ ಉದ್ಯೋಗ ಸೃಷ್ಟಿಸುವ ಬದಲಾಗಿ ಉದ್ಯೋಗ ನಷ್ಟವಾಗುತ್ತಿದೆ. ಭರವಸೆ ಈಡೇರಿಕೆಯಾಗಿದ್ದರೆ 20 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಅದು ಸಾಧ್ಯವಾಗಿಲ್ಲ ಎಂದು ದೂರಿದರು.

ಫೆ.29ಕ್ಕೆ ಬಿಜೆಪಿ ಮೊದಲ ಪಟ್ಟಿ: ರಾಜ್ಯದ 10 ಕ್ಷೇತ್ರ ಸೇರಿ 150 ಅಭ್ಯರ್ಥಿಗಳು ಫೈನಲ್

ನಿರುದ್ಯೋಗದ ಸಮಸ್ಯೆ ಹೆಚ್ಚಾದರೆ ದೇಶದ ಸಂಪತ್ತು ಸೃಷ್ಟಿಸಬೇಕಾದ ಯುವಜನ ನಿರರ್ಥಕವಾಗುತ್ತದೆ. ಇದು ಅಭಿವೃದ್ಧಿಗೆ ಘಾಸಿ ಮಾಡುತ್ತದೆ. ದೇಶದಲ್ಲಿ ನಿರುದ್ಯೋಗ ಸವಾಲಿನಂತೆ ಬೆಳೆದು ನಿಂತಿದ್ದು, ಅದನ್ನು ನಿವಾರಿಸಬೇಕಾದರೆ ಪ್ರಾಮಾಣಿಕ ಪ್ರಯತ್ನಗಳು ಅಗತ್ಯ. ರಾಜ್ಯ ಸರ್ಕಾರ ಪದವೀಧರ ನಿರುದ್ಯೋಗಿಗಳಿಗೆ ಮತ್ತು ಡಿಫ್ಲೋಮೊದಾರರಿಗೆ ನಿರುದ್ಯೋಗ ಭತ್ಯೆ ನೀಡುತ್ತಿದೆ. ಜೊತೆಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನೂ ನೀಡಲಾಗುತ್ತಿದೆ ಎಂದು ಹೇಳಿದರು.

ಉದ್ಯೋಗ ಮೇಳದಲ್ಲಿ 75 ಸಾವಿರ ಮಂದಿ ಈವರೆಗೂ ನೋಂದಣಿಯಾಗಿದ್ದಾರೆ. ಉದ್ಯೋಗ ಪಡೆಯುವವರಿಗೆ ಶುಭವಾಗಲಿ ಎಂದು ಮುಖ್ಯಮಂತ್ರಿ ಹಾರೈಸಿದರು. ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಸಚಿವ ಶರಣಪ್ರಕಾಶ್ ಪಾಟೀಲ್ ಮಾತನಾಡಿ, 75 ಸಾವಿರ ಮಂದಿ ನೋಂದಾಣಿಯಾಗಿರುವುದು ದೇಶದಲ್ಲೇ ಐತಿಹಾಸಿಕ ದಾಖಲೆ. ಎಸ್ಸೆಸ್ಸೆಲ್ಸಿಯಿಂದ ಸ್ನಾತಕೋತ್ತರದವರೆಗೂ ವಿವಿಧ ವಿದ್ಯಾರ್ಹತೆಗಳನ್ನು ಹೊಂದಿರುವವರು ಮೇಳದಲ್ಲಿ ಭಾಗವಹಿಸಿದ್ದಾರೆ. ಒಂದು ಲಕ್ಷ ಉದ್ಯೋಗಗಳ ನೇಮಕಾತಿಗೆ ಖಾಸಗಿ ಕಂಪನಿಗಳು ಮುಂದೆ ಬಂದಿವೆ ಎಂದು ತಿಳಿಸಿದರು.

ಪಂಚಖಾತ್ರಿಗಳಲ್ಲಿ ಒಂದಾಗಿರುವ ಯುವನಿ ಕಾರ್ಯಕ್ರಮ ಯುವ ಸಮುದಾಯದ ಬೆನ್ನಲೆಬುಗಿದೆ. 1.40 ಲಕ್ಷ ಪದವೀಧರರು ಹಾಗೂ ಡಿಫ್ಲೋಮೊದಾರರ ಬ್ಯಾಂಕ್ ಖಾತೆಗಳಿಗೆ ಯುವನಿಧಿ ಹಣ ಸಂದಾಯವಾಗುತ್ತಿದೆ. ಸರ್ಕಾರ ಯುವ ಸಮುದಾಯದ ಜೊತೆಗಿರಲಿದೆ ಎಂದು ಭರವಸೆ ನೀಡಿದರು. ಯುವನಿಧಿ ಅಡಿ ನೋಂದಣಿಯಾಗಿರುವವರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ. ಈ ಮೂಲಕ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಇಂದು ನೆಪಮಾತ್ರಕ್ಕೆ ಉದ್ಯೋಗ ಮೇಳ ನಡೆಯುತ್ತಿಲ್ಲ. ಎಲ್ಲರಿಗೂ ಉದ್ಯೋಗ ಕೊಡಿಸಲಾಗುತ್ತಿದೆ. ಉದ್ಯೋಗ ಸಿಗದೆ ಇದ್ದ ನೋಂದಾಯಿತರ ದತ್ತಾಂಶಗಳ ಮೇಲೆ ನಿಗಾ ಇಡಲಾಗುವುದು. ನಿರಂತರವಾಗಿ ಅವರ ಜೊತೆ ಸಂಪರ್ಕದಲ್ಲಿದ್ದು, ಅಗತ್ಯ ತರಬೇತಿ ಹಾಗೂ ಕೌಶಲ್ಯ ಅಭಿವೃದ್ದಿಗೆ ಆದ್ಯತೆ ನೀಡಲಾಗುವುದು.

ಬೈಕ್ ವೀಲ್ಹಿಂಗ್ ಹುಚ್ಚಾಟಕ್ಕೆ ಯುವಕ ಸಾವು..

ದೇಶದ ಎಲ್ಲಾ ರಾಜ್ಯಗಳಿಗಿಂತಲೂ ಮಾದರಿಯಾಗಿ ನಿರುದ್ಯೋಗ ನಿವಾರಣೆಗೆ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಭರವಸೆ ನೀಡಿದರು. ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಉದ್ಯೋಗ ಮೇಳ ನಡೆಯಲಿದ್ದು, ಯುವಕರ ಸಮಸ್ಯೆಗಳಿಗೆ ಸರ್ಕಾರದ ಯಂತ್ರ ಸ್ಪಂದಿಸಲಿದೆ. ಬಜೆಟ್‍ನಲ್ಲಿ ಶಿಕ್ಷಣಕ್ಕಿಂತಲೂ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವಂತೆ ಮನವಿ ನೀಡಲಾಗಿತ್ತು. ಮುಖ್ಯಮಂತ್ರಿಯವರು ಅದಕ್ಕೆ ಸ್ಪಂದಿಸಿದ್ದಾರೆ. ಭವಿಷ್ಯದಲ್ಲಿ ಯುವಜನರ ಸಮಗ್ರ ಅಭಿವೃದ್ಧಿಗೆ ಅಗತ್ಯ ಯೋಜನೆಗಳನ್ನು ರೂಪಿಸಲಾಗುವುದು ಎಂದು ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಹಾಗು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಯುವ ಸಮೃದ್ಧಿ ಲಾಂಛನವನ್ನು ಅನಾವರಣಗೊಳಿಸಲಾಯಿತು.

RELATED ARTICLES

Latest News