ನವದೆಹಲಿ, ಆ.1- ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ್ದ ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾಳೆ ಎನ್ನಲಾದ 15 ವರ್ಷದ ಬಾಲಕಿ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆಯಾಚನೆ ಮಾಡಿದ್ದು, ತಾನು ಇತರರ ಪ್ರಭಾವಕ್ಕೆ ಒಳಗಾಗಿ ಆ ರೀತಿ ಮಾತನಾಡಿದ್ದಾಗಿ ಹೇಳಿದ್ದಾಳೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ವಿಡಿಯೋದಲ್ಲಿ, ವೈರಲ್ ಆದ ವಿಡಿಯೋವನ್ನು ತಾನು ಪೋಸ್ಟ್ ಮಾಡಿಲ್ಲ. ನಡೆದ ಘಟನೆಯಿಂದ ತೀವ್ರ ಮುಜುಗರ ಮತ್ತು ಪಶ್ಚಾತ್ತಾಪ ಅನುಭವಿಸುತ್ತಿದ್ದೇನೆ ಎಂದು ಆಕೆ ಹೇಳಿದ್ದಾಳೆ. ಆದರೆ, ಈ ಕ್ಷಮಾಪಣೆ ವಿಡಿಯೋದ ನೈಜತೆಯನ್ನು ಸ್ವತಂತ್ರವಾಗಿ ದೃಢೀಕರಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದೆ.
ಜುಲೈನಲ್ಲಿ ಸ್ನೇಹಿತರೊಂದಿಗೆ ಕನ್ನಾಟ್ ಪ್ಲೇಸ್ಗೆ ತೆರಳಿದ್ದ ವೇಳೆ ಪ್ರಧಾನಿ ವಿರುದ್ಧ ಅವಹೇಳನಕಾರಿ ಭಾಷೆ ಬಳಸುತ್ತಿದ್ದ ಕೆಲವರನ್ನು ಭೇಟಿಯಾಗಿದ್ದಳು. ಅವರ ಪ್ರೇರಣೆಯಿಂದ ತಾನೂ ಅದೇ ಪದಗಳನ್ನು ಪುನರಾವರ್ತಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ.
ನಾನು ಈಗ ಯಾರ ಮುಖವನ್ನೂ ನೋಡಲು ಸಾಧ್ಯವಾಗುತ್ತಿಲ್ಲ. ದೇಶದ ಎಲ್ಲರಲ್ಲೂ ಕ್ಷಮೆ ಕೋರುತ್ತೇನೆ. ನನಗೆ ಕೇವಲ 15 ವರ್ಷ. ಇದು ನನ್ನ ಮೊದಲ ಹಾಗೂ ಕೊನೆಯ ತಪ್ಪು. ಇಂತಹ ಕೃತ್ಯವನ್ನು ಮತ್ತೆ ಎಂದಿಗೂ ಮಾಡುವುದಿಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದಾಳೆ.
ಈ ಕ್ಷಮಾಪಣೆ ವಿಡಿಯೋ ಬಾಲಕಿ ವಿರುದ್ಧ ಪೊಲೀಸ್ ದೂರು ದಾಖಲಾಗಿದ ನಂತರ ಹೊರಬಂದಿದೆ. ಜುಲೈ 29ರಂದು ನೋಯ್ಡಾದಲ್ಲಿ ದಾಖಲಾಗಿದ್ದ ಜೀರೋ ಎಫ್ಐಆರ್ನ್ನು ಘಟನೆ ನಡೆದಿರುವ ಸ್ಥಳ ದೆಹಲಿಯಾಗಿರುವುದರಿಂದ ದೆಹಲಿ ಪೊಲೀಸರಿಗೆ ವರ್ಗಾಯಿಸಲಾಗಿದೆ. ಪ್ರಕರಣದ ವಿವರಗಳನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ, ಪ್ರಧಾನಿ ನರೇಂದ್ರ ಮೋದಿ ಅವರು ರಾತ್ರಿ ಬಿಡುಗಡೆ ಮಾಡಿದ ವಿಡಿಯೋ ಸಂದೇಶದಲ್ಲಿ, ಜಂತರ್ ಮಂತರ್ ಪ್ರತಿಭಟನೆಯ ವೇಳೆ ತಮ ವಿರುದ್ಧ ಮಾತ್ರವಲ್ಲದೆ ತಮ ದಿವಂಗತ ತಾಯಿಯ ವಿರುದ್ಧವೂ ಅಶ್ಲೀಲ ನಿಂದನೆ ಮಾಡಿರುವುದು ನೋವು ತಂದಿದೆ ಎಂದು ಹೇಳಿದ್ದಾರೆ. ದಾರಿ ತಪ್ಪಿದ ಮಕ್ಕಳನ್ನು ಕ್ಷಮಿಸಿ, ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ಸಾಮಾಜಿಕ ಜಾಲತಾಣ ಗೆ ವಿವಾದಾತ್ಮಕ ವಿಷಯವನ್ನು ತೆಗೆದುಹಾಕುವಂತೆ ನೋಟಿಸ್ ನೀಡಿದ್ದು, ತನಿಖೆಯ ಭಾಗವಾಗಿ ಸಂಬಂಧಿತ ಡಿಜಿಟಲ್ ದಾಖಲೆಗಳನ್ನು ಸಂರಕ್ಷಿಸುವಂತೆ ಸೂಚಿಸಿದ್ದಾರೆ.
