ಬೆಂಗಳೂರು, ಆ.1- ಬಿಡಿಎ ಅಥವಾ ಪಾಲಿಕೆ ವತಿಯಿಂದ ಮಂಜೂರಾದ ನಿವೇಶದಲ್ಲಿ ಮನೆ ನಿರ್ಮಿಸದೆ ಐದು ವರ್ಷಗಳಿಗಿಂತ ಹೆಚ್ಚು ಕಾಲ ಖಾಲಿ ಬಿಟ್ಟಿದ್ದರೆ, ದುಪ್ಪಟ್ಟು ಆಸ್ತಿ ತೆರಿಗೆ ವಿಧಿಸುವುದು ಅಥವಾ ನಿವೇಶನವನ್ನೇ ಹಿಂಪಡೆಯುವಂತಹ ಕಠಿಣ ಕ್ರಮ ಜರುಗಿಸಲು ಚಿಂತನೆ ನಡೆಸಿರುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನಕ್ಕೆ ಶನಿವಾರ ಬೆಂಗಳೂರಿನಲ್ಲಿ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ನಾಗರಿಕರಲ್ಲಿ ನಾಗರಿಕ ಪ್ರಜ್ಞೆ ಬೆಳೆಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.
ಖಾಲಿ ನಿವೇಶನಗಳಲ್ಲಿ ಗಿಡ ಬೆಳೆದು ತಾಜ್ಯ ತುಂಬಿಕೊಂಡು ಅನೈರ್ಮಲ್ಯ ಹೆಚ್ಚಾಗುತ್ತಿದೆ. ಬಿಡಿಎ ಅಥವಾ ಪಾಲಿಕೆಯಿಂದ ನೀಡಲಾಗಿದ್ದ ನಿವೇಶನಗಳಲ್ಲಿ ಮನೆ ನಿರ್ಮಾಣಕ್ಕೆ ಬೇಕಾದ ದಾಖಲೆಗಳು ಹಾಗೂ ಬ್ಯಾಂಕ್ ಸಾಲ ಸೌಲಭ್ಯಗಳು ಲಭ್ಯ ಇವೆ. ಆದರೂ ಕೆಲವರು ನಿವೇಶನ ಖಾಲಿ ಬಿಟ್ಟಿದ್ದಾರೆ. ಬಹುಶಃ ದೊಡ್ಡ ಮನೆ ಕಟ್ಟುವ ಆಲೋಚನೆ ಇರಬಹುದು. ಅದಕ್ಕಾಗಿ ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಿಕೊಳ್ಳಿ, ಸದ್ಯಕ್ಕೆ ನಿವೇಶನ ಖಾಲಿ ಬಿಡದೆ ಮನೆ ನಿರ್ಮಿಸಿಕೊಳ್ಳಿ ಎಂದು ಹೇಳಿದರು.
ಬೆಂಗಳೂರು ಸರ್ಕಾರದ ಆಸ್ತಿ ಅಲ್ಲ, ಜನರ ಸ್ವತ್ತು. ನಗರದ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ನಗರದ ರಸ್ತೆ ಬದಿಗಳು, ಖಾಲಿ ಜಾಗಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ವಾಹನಗಳ ಮೂಲಕ ಕಟ್ಟಡ ತ್ಯಾಜ್ಯವನ್ನು ಅಕ್ರಮವಾಗಿ ಸುರಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದರು.
ಇನ್ನು ಮುಂದೆ ನಿಗದಿತ ಸ್ಥಳಗಳಲ್ಲೇ ಕಟ್ಟಡ ತ್ಯಾಜ್ಯ ವಿಲೇವಾರಿ ಮಾಡಬೇಕು. ನಿಯಮ ಉಲ್ಲಂಘಿಸಿ ತ್ಯಾಜ್ಯ ಸುರಿಯುವ ವಾಹನಗಳನ್ನು ಜಪ್ತಿ ಮಾಡುವಂತೆ ಪೊಲೀಸರಿಗೆ ಸೂಚನೆ ನೀಡಲಾಗುವುದು ಎಂದರು.ನಗರದ ಪರಿಸರ ಸಂರಕ್ಷಣೆ, ಹಸಿರು ವಾತಾವರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯಾಗಿ ತಾವು ಅಧಿಕಾರ ಸ್ವೀಕರಿಸಿದ ಶತದಿನೋತ್ಸವ ಆಚರಣೆ ವೇಳೆಯಲ್ಲಿ ಮಹತ್ವದ ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ತಿಳಿಸಿದರು.
ಶಿವಾಜಿನಗರದಲ್ಲಿ ಪಾಲಿಕೆ ಅಧಿಕಾರಿಗಳ ಮೇಲೆ ನಡೆದ ಹಲ್ಲೆ ಪ್ರಕರಣ ಪ್ರಸ್ತಾಪಿಸಿದ ಅವರು, ಇದು ಅಧಿಕಾರಿಗಳ ಮೇಲಷ್ಟೇ ನಡೆದ ದಾಳಿಯಲ್ಲ, ಸರ್ಕಾರದ ಮೇಲಿನ ದಾಳಿ ಎಂದೇ ಭಾವಿಸಲಾಗುತ್ತದೆ. ಇಂತಹ ಗೂಂಡಾಗಿರಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಅಧಿಕಾರಿಗಳು ಧೈರ್ಯವಾಗಿ ತಮ ಕರ್ತವ್ಯ ನಿರ್ವಹಿಸಬೇಕು, ಬೆಂಗಳೂರು ಅಭಿವೃದ್ಧಿ ಕುರಿತು ಅನೇಕ ಟೀಕೆಗಳು ಕೇಳಿಬರುತ್ತಿವೆ. ಆದರೆ ಕೆಲಸ ಮಾಡಿದರೆ ಅವು ಸಾಯುತ್ತವೆ ಎಂದರು.ಫುಟ್ಪಾತ್ ವ್ಯಾಪಾರಿಗಳು ಜೀವನ ನಡೆಸಬೇಕು. ಆದರೆ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗದಂತೆ ಅವರ ವ್ಯಾಪಾರಕ್ಕೆ ಪ್ರತ್ಯೇಕ ಸ್ಥಳಗಳನ್ನು ಗುರುತಿಸಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಈ ಅಭಿಯಾನವನ್ನು ರಾಜ್ಯದ ಎಲ್ಲಾ ಶಾಸಕರು ತಮ ಕ್ಷೇತ್ರಗಳಲ್ಲೂ ಅನುಷ್ಠಾನಗೊಳಿಸಬೇಕು. ಬೆಂಗಳೂರಿನಲ್ಲಿ ಆರಂಭವಾಗಿರುವ ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನ ದೇಶಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಗ್ರೆಟರ್ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ, ಮುಂದಿನ 50 ವರ್ಷಗಳ ಬೆಂಗಳೂರಿನ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ವಿವಿಧ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.
ಮುಖ್ಯಮಂತ್ರಿ ಅವರ ಸೂಚನೆಯಂತೆ ಆಗಸ್ಟ್ ತಿಂಗಳನ್ನು ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನವಾಗಿ ಆಚರಿಸಲಾಗುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯ ವೇಳೆಗೆ ಸ್ವಚ್ಛ ಬೆಂಗಳೂರಿನ ನಿರ್ಮಾಣ ನಮ ಗುರಿಯಾಗಿದೆ. ಸಾರ್ವಜನಿಕ ಸ್ಥಳಗಳು, ರಸ್ತೆಗಳು ಸೇರಿದಂತೆ ಎಲ್ಲೆಂದರಲ್ಲಿ ಕಟ್ಟಡ ನಿರ್ಮಾಣದ ತಾಜ್ಯಗಳನ್ನು ಸುರಿಯಲಾಗಿದೆ. ರಸ್ತೆ ಬದಿಯಲ್ಲಿ ಪೈಪ್ಗಳು, ಕಲ್ಲುಗಳು, ಸಿಮೆಂಟ್ ಬ್ಲಾಕ್ಗಳು ಹಾಗೂ ಇತರ ನಿರ್ಮಾಣ ತ್ಯಾಜ್ಯವನ್ನು ಬಿಟ್ಟು ಹೋಗುತ್ತಿರುವುದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ. ಸಂಚಾರಕ್ಕೆ ಅಡ್ಡಿಯಾಗಿ, ಬೆಂಗಳೂರಿನ ಸೌಂದರ್ಯಕ್ಕೂ ಧಕ್ಕೆಯಾಗಿದೆ ಎಂದು ಹೇಳಿದರು.
ಬೆಂಗಳೂರು ನಗರದಲ್ಲಿ ಸುಮಾರು 1,600ಕ್ಕೂ ಹೆಚ್ಚು ಸ್ಥಳಗಳಲ್ಲಿ ಕಟ್ಟಡ ತ್ಯಾಜ್ಯ ರಾಶಿಗಳನ್ನು ಗುರುತಿಸಲಾಗಿದೆ. ನಗರದಲ್ಲಿ ಸುಮಾರು 22 ಸಾವಿರ ಟನ್ಗಳಷ್ಟು ನಿರ್ಮಾಣ ತ್ಯಾಜ್ಯ ಇರಬಹುದೆಂಬ ಅಂದಾಜಿದೆ. ಆದರೆ ಅದರ ಪ್ರಮಾಣ ಇನ್ನೂ ಹೆಚ್ಚಿದ್ದು ಸರಿ ಸುಮಾರು 2 ರಿಂದ ಮೂರು ಲಕ್ಷ ಟನ್ ಗಳಾಗಬಹುದು ಎಂದರು.
ವಿವಿಧ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಇದೆ ಎಂಬ ಆರೋಪಗಳಿದ್ದರೂ, ಈ ಅಭಿಯಾನದಲ್ಲಿ ಜಿಬಿಎ, ಬಿಡಿಎ, ಬಿಡಬ್ಲ್ಯುಎಸ್ಎಸ್ಬಿ, ಬಿಎಂಆರ್ಸಿಎಲ್, ಕೆ-ರೈಡ್ ಸೇರಿದಂತೆ ಎಲ್ಲಾ ಇಲಾಖೆಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿರುವ ಕಟ್ಟಡ ತ್ಯಾಜ್ಯವನ್ನು ಜಿಬಿಎ ತೆರವುಗೊಳಿಸಲಿದೆ. ಆದರೆ ಖಾಸಗಿ ನಿವೇಶನಗಳಲ್ಲಿರುವ ಕಸ ಹಾಗೂ ಕಟ್ಟಡ ತ್ಯಾಜ್ಯವನ್ನು ಆಯಾ ಮಾಲೀಕರೇ ತೆರವುಗೊಳಿಸಬೇಕು. ಈ ಬಗ್ಗೆ ಈಗಾಗಲೇ ಜುಲೈ 15ರಂದು ಮನವಿ ಮಾಡಿ, ಆಗಸ್ಟ್ 15ರವರೆಗೆ ಗಡುವು ನೀಡಲಾಗಿದೆ. ಅದರ ಬಳಿಕವೂ ಸ್ವಚ್ಛಗೊಳಿಸದಿದ್ದರೆ ಪಾಲಿಕೆಯೇ ತ್ಯಾಜ್ಯ ತೆರವುಗೊಳಿಸಿ ಅದರ ವೆಚ್ಚವನ್ನು ಸಂಬಂಧಿಸಿದ ನಿವೇಶನ ಮಾಲೀಕರಿಂದ ವಸೂಲಿ ಮಾಡಲಾಗುವುದು ಎಂದು ಸಚಿವರು ಎಚ್ಚರಿಸಿದರು.
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಗರಕ್ಕೆ ಪ್ರವೇಶಿಸುವ ಹೆಬ್ಬಾಳ ಮೇಲ್ಸೇತುವೆ ಸಮೀಪ ರಸ್ತೆ ಬದಿಯಲ್ಲಿ ಕಟ್ಟಡ ತ್ಯಾಜ್ಯ ರಾಶಿಗಳು ಕಂಡುಬರುತ್ತಿವೆ. ಇದರಿಂದ ಬೆಂಗಳೂರಿಗೆ ಆಗಮಿಸುವವರಿಗೆ ಸ್ವಚ್ಛತೆ ಬಗ್ಗೆ ನಕಾರಾತಕ ಅಭಿಪ್ರಾಯ ಬರುತ್ತದೆ. ಇಂತಹ ಪ್ರದೇಶಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಉದ್ದೇಶದಿಂದಲೇ ಈ ಅಭಿಯಾನ ಆರಂಭಿಸಲಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಭಾಗವಾಗಿ ಎಸ್ಟೀಮ್ ಮಾಲ್ ಸಮೀಪ ರಸ್ತೆ ಬದಿಯಲ್ಲಿ ರಾಶಿಯಾಗಿದ್ದ ಕಟ್ಟಡ ತ್ಯಾಜ್ಯವನ್ನು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಅವರು ಗುದ್ದಲಿಯಿಂದ ತೆಗೆದು ಬಾಣಲಿಯಲ್ಲಿ ತುಂಬಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅದನ್ನು ಹೊತ್ತು ಲಾರಿಗೆ ಹಾಕುವ ಮೂಲಕ ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವ ಕೆ.ಜೆ. ಜಾರ್ಜ್,ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್, ಪುಲಿಕೇಶಿನಗರ ಶಾಸಕ ಎ.ಸಿ. ಶ್ರೀನಿವಾಸ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
