ಬೆಂಗಳೂರು,ಫೆ.27- ಮಹತ್ವದ ಬೆಳವಣಿಗೆಯಲ್ಲಿ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಇಂದು ಸಂಜೆಯೇ ರಾಜೀನಾಮೆ ನೀಡಿ ಕಾಂಗ್ರೆಸ್‍ಗೆ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ ಬಲವಾಗಿ ಹಬ್ಬಿದೆ. ಸಂಜೆ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರನ್ನು ಭೇಟಿ ಮಾಡಲಿರುವ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ಉಭಯ ಶಾಸಕರು ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಮಯಾವಕಾಶವನ್ನು ಕೇಳಿದ್ದಾರೆ. ಫಲಿತಾಂಶ ಪ್ರಕಟಗೊಂಡ ನಂತರ ತಮ್ಮನ್ನು ಭೇಟಿಯಾಗಬಹುದು ಎಂದು ಹೇಳಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸಭಾಧ್ಯಕ್ಷರು ಅಂಗೀಕರಿಸಿದ ನಂತರ ಅಧಿಕೃತವಾಗಿ ಕಾಂಗ್ರೆಸ್‍ಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜೊತೆ ಮಾತುಕತೆ ನಡೆಸಿರುವ ಇಬ್ಬರೂ ಶಾಸಕರು ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್‍ನ ಪ್ರಾಥಮಿಕ ಸದಸ್ಯತ್ವ ಪಡೆದು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.
ಮೂಲಗಳ ಪ್ರಕಾರ ಯಶವಂತಪುರ ಕ್ಷೇತ್ರದ ಶಾಸಕರಾಗಿರುವ ಎಸ್.ಟಿ.ಸೋಮಶೇಖರ್, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದುಬಂದಿದೆ. ಈ ಕ್ಷೇತ್ರಕ್ಕೆ ಕಾಂಗ್ರೆಸ್‍ನಿಂದ ಪ್ರಬಲ ಅಭ್ಯರ್ಥಿಗಳು ಸಿಗದಿರುವ ಹಿನ್ನೆಲೆಯಲ್ಲಿ ಎಸ್.ಟಿ.ಸೋಮಶೇಖರ್‍ರವರನ್ನೇ ಅಭ್ಯರ್ಥಿ ಮಾಡಲು ಪಕ್ಷದ ವಲಯದಲ್ಲಿ ಚಿಂತನ ಮಂಥನ ನಡೆದಿದೆ.
ಮಹಾರಾಷ್ಟ್ರ ಕಾಂಗ್ರೆಸ್‍ಗೆ ಮತ್ತೊಂದು ಶಾಕ್ : ಕಾರ್ಯಾಧ್ಯಕ್ಷ ಬಸವರಾಜ ಪಾಟೀಲ್ ರಾಜೀನಾಮೆ
ಉತ್ತರಕನ್ನಡ ಜಿಲ್ಲೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಶಿವರಾಂ ಹೆಬ್ಬಾರ್ ಕೂಡ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. ಇಲ್ಲಿ ಕೂಡ ಕಾಂಗ್ರೆಸ್‍ಗೆ ಪ್ರಬಲ ಅಭ್ಯರ್ಥಿಗಳು ಇಲ್ಲದಿರುವ ಕಾರಣ ಕಾಂಗ್ರೆಸ್ ಅವರನ್ನೇ ಹುರಿಯಾಳನ್ನಾಗಿಸುವ ಚಿಂತನೆಯಲ್ಲಿದೆ. ಹೆಬ್ಬಾರ್ ಕೂಡ ಈಗಾಗಲೇ ಕಾಂಗ್ರೆಸ್ ನಾಯಕರ ಜೊತೆ ಮಾತುಕತೆ ನಡೆಸಿದ್ದು, ಉತ್ತರ ಕನ್ನಡ ಜಿಲ್ಲೆಯಿಂದ ತಮ್ಮನ್ನು ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಮಾಡಿದರೆ ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ತಮ್ಮ ಪುತ್ರನಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ.
ಕೇರಳದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿ
ಇದಕ್ಕೆ ಬಹುತೇಕ ಕೆಪಿಸಿಸಿ ನಾಯಕರು ಸಮ್ಮತಿ ನೀಡಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.
ಈ ಹಿಂದೆ ಕಾಂಗ್ರೆಸ್‍ನಲ್ಲಿದ್ದ ಶಿವರಾಂ ಹೆಬ್ಬಾರ್ ಮತ್ತು ಎಸ್.ಟಿ.ಸೋಮಶೇಖರ್ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ರಾಜ್ಯಸಭಾ ಚುನಾವಣೆಯಲ್ಲಿ ಶಾಸಕರಿಗೆ ವ್ಹಿಪ್ ಅನ್ವಯವಾಗುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿರುವುದರಿಂದ ಈ ಇಬ್ಬರೂ ರಾಜೀನಾಮೆ ನೀಡಲಿದ್ದಾರೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ.