ಬೆಂಗಳೂರು,ಫೆ.28- ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿ ಪರಾರಿಯಾಗಿರುವ ಆರೋಪಿಗಾಗಿ ನಗರ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆರೋಪಿಯ ಬಂಧನಕ್ಕೆ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಆ ತಂಡಗಳು ಈಗಾಲೇ ಕಾರ್ಯಾಚರಣೆ ಆರಂಭಿಸಿವೆ. ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಲಾಗಿದೆಯೆಂಬ ಆರೋಪಕ್ಕೆ ಸಂಬಂಧಿಸಿದ ವಿಡಿಯೋ ತುಣುಕುಗಳನ್ನು ಪೊಲೀಸರು ಸಂಗ್ರಹಿಸಿದ್ದು, ಹೆಚ್ಚಿನ ತನಿಖೆಗಾಗಿ ಅವುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಆ ವರದಿ ಬಂದ ನಂತರ ಯಾರು ಆ ಘೋಷಣೆಗಳನ್ನು ಕೂಗಿದ್ದಾರೆ ಎಂಬುವುದು ಸ್ಪಷ್ಟವಾಗಿ ತಿಳಿದು ಬರಲಿದೆ.
ರಾಜ್ಯಸಭೆ ಚುನಾವಣೆ ಫಲಿತಾಂಶದ ನಂತರ ವಿಧಾನಸೌಧದ ಆವರಣದಲ್ಲಿ ಸಂಭ್ರಮಾಚರಣೆ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ಕೈಗೊಳ್ಳಲಾಗಿದೆಯೆಂದು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಅವರು ಈ ಸಂಜೆಗೆ ತಿಳಿಸಿದ್ದಾರೆ.
ಪಾಕ್ ಪರ ಘೋಷಣೆ ಪ್ರಕರಣವನ್ನು NIAಗೆ ವಹಿಸಲು ಸುನಿಲ್‍ಕುಮಾರ್ ಒತ್ತಾಯ
ಘಟನೆ ನಡೆಯುತ್ತಿದ್ದಂತೆ ವಿಧಾನಸೌಧದ ಪೊಲೀಸ್ ಠಾಣೆಗೆ ತೆರಳಿದ ಡಿಸಿಪಿ ಶೇಖರ್ ಅವರು
ತಡರಾತ್ರಿಯವರೆಗೂ ಠಾಣೆಯಲ್ಲೇ ಉಳಿದುಕೊಂಡು ಕಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಜೊತೆಗೆ ಚರ್ಚಿಸಿ ಕೆಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಾಸಿರ್ ಹುಸೇನ್ ಅವರ ಜೊತೆ ಯಾರ್ಯಾರು ಎಲ್ಲಿಂದ ವಿಧಾನಸೌಧಕ್ಕೆ ಬಂದಿದ್ದರು ಎಂಬುವುದರ ಬಗ್ಗೆ ತನಿಖಾ ತಂಡವೊಂದು ಮಾಹಿತಿ ಸಂಗ್ರಹಿಸುತ್ತಿದೆ.
ಮತ್ತೊಂದು ತಂಡವು ತಂತ್ರಜ್ಞಾನ ವಿಶ್ಲೇಷಣೆ ಹಾಗೂ ವಿಡಿಯೋಗಳ ಪರಿಶೀಲನೆಗಳ ಕಾರ್ಯದಲ್ಲಿ ತೊಡಗಿದೆ.
ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಗೆಲುವಿನ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ವಿಧಾನಸೌಧ ಆವರಣದಲ್ಲಿ ಸಂಭ್ರಮಾಚರಣೆ ನಡೆಸುತ್ತಿದ್ದ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ರವಿಕುಮಾರ್ ಸಹ ಠಾಣೆಗೆ ದೂರು ನೀಡಿದ್ದಾರೆ.