Homeರಾಜ್ಯಪಕ್ಷದಲ್ಲಿ ನಮ್ಮ ನೋವು ಕೇಳುವವರೇ ಇಲ್ಲ : ಹಿರಿಯ ಶಾಸಕ ಗೋಪಾಲಕೃಷ್ಣ ಅಸಮಾಧಾನ

ಪಕ್ಷದಲ್ಲಿ ನಮ್ಮ ನೋವು ಕೇಳುವವರೇ ಇಲ್ಲ : ಹಿರಿಯ ಶಾಸಕ ಗೋಪಾಲಕೃಷ್ಣ ಅಸಮಾಧಾನ

No one in the party listens to our pain: Senior MLA Gopalakrishna

ಬೆಂಗಳೂರು, ಆ.4- ಪಕ್ಷದಲ್ಲಿ ತಮ್ಮಂತಹ ಹಿರಿಯ ನಾಯಕರ ನೋವು-ನಲಿವುಗಳನ್ನು ಕೇಳುವವರೇ ಇಲ್ಲದ ಸ್ಥಿತಿ ನಿರ್ಮಾಣವಾಗಿದ್ದು, ಕಾಂಗ್ರೆಸ್‌‍ನಲ್ಲಿ ಅಪ್ಪ-ಅಮ ಇಲ್ಲದ ಅನಾಥ ವಾತಾವರಣ ಉಂಟಾಗಿದೆ ಎಂದು ಹಿರಿಯ ಶಾಸಕ ಎಂ.ವೈ. ಗೋಪಾಲಕೃಷ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.

ಕಾಂಗ್ರೆಸ್‌‍ನ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಸಚಿವ ಸ್ಥಾನದಿಂದ ವಂಚಿತನಾಗಿದ್ದೇನೆ. ಈ ಬಾರಿ ಹೊಸಬರಿಗೆ ಅವಕಾಶ ನೀಡುತ್ತೇವೆ ಎಂದು ಹೇಳಿದ್ದರಿಂದ, ಈ ಹಿಂದೆ ಸಚಿವರಾಗಿದ್ದ ಕೆಲವರನ್ನು ಕೈಬಿಟ್ಟು ನಮಗೆ ಅವಕಾಶ ನೀಡಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ ಅದು ಆಗಲಿಲ್ಲ. ಸಂಪುಟ ವಿಸ್ತರಣೆ ಪ್ರಕ್ರಿಯೆಯೂ ಸಮರ್ಪಕವಾಗಿ ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮ ಕಷ್ಟ-ಸುಖಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು? ಅಪ್ಪ-ಅಮ ಅಂತೂ ಇಲ್ಲ. ಅಣ್ಣ-ತಮಂದಿರ ಬಳಿ ಹೇಳಿದರೆ ಅವರೂ ನೋವು ಪಡುತ್ತಾರೆ. ಕ್ಷೇತ್ರದ ಜನರ ಮುಂದೆ ಕೂಡ ನೋವನ್ನು ಹೇಳಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ನಮಗೆ ದೇವರೇ ಗತಿ ಎಂದು ಭಾವುಕರಾದರು.

ನಮಗೂ ವಯಸ್ಸಾಗುತ್ತಿದೆ. ಈ ಸಂದರ್ಭದಲ್ಲಿ ಸಚಿವ ಸ್ಥಾನ ಸಿಗಬಹುದು ಎಂದು ನಿರೀಕ್ಷಿಸಿದ್ದೆ. ಪಕ್ಷಕ್ಕೆ ಯಾವುದೇ ದ್ರೋಹ ಮಾಡದೆ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. 1994ರಲ್ಲಿ ಕಾಂಗ್ರೆಸ್‌‍ ಅಧಿಕಾರದಲ್ಲಿಲ್ಲದಿದ್ದಾಗಲೂ ಟಿಕೆಟ್‌ ಪಡೆದು ಗೆದ್ದು ಬಂದಿದ್ದೆ. ಆಗಿನ ಮುಖ್ಯಮಂತ್ರಿ ಧರ್ಮಸಿಂಗ್‌ ಅವರು ನನ್ನನ್ನು ವಿಧಾನಸಭೆಯ ಉಪಸಭಾಧ್ಯಕ್ಷರನ್ನಾಗಿ ಮಾಡಿದ್ದರು. ಕೂಡ್ಲಗಿ, ಬಳ್ಳಾರಿ ಗ್ರಾಮಾಂತರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗೆದ್ದು ಪಕ್ಷಕ್ಕಾಗಿ ದುಡಿದಿದ್ದೇನೆ. ನನ್ನ ಅನುಭವ, ಕಷ್ಟ ಮತ್ತು ನಿಷ್ಠೆಯನ್ನು ಪರಿಗಣಿಸುತ್ತಾರೆ ಎಂದುಕೊಂಡಿದ್ದೆ. ಆದರೆ ನಿರಾಶೆಯಾಗಿದೆ ಎಂದರು. ನಾನು ಸಚಿವನಾಗಿಲ್ಲ ಎಂಬ ನೋವಿಗಿಂತಲೂ ನನ್ನ ಕ್ಷೇತ್ರದ ಜನರು ಹಾಗೂ ಕಾರ್ಯಕರ್ತರು ಬೇಸರಗೊಂಡಿರುವುದು ಹೆಚ್ಚು ನೋವುಂಟು ಮಾಡುತ್ತಿದೆ ಎಂದು ಹೇಳಿದರು.

ಸಂಪುಟ ವಿಸ್ತರಣೆ ಕುರಿತು ಪ್ರಶ್ನಿಸಿದ ಅವರು, ಈ ಬಾರಿ ಯಾವುದೇ ಸ್ಪಷ್ಟ ಮಾನದಂಡಗಳನ್ನು ಪಾಲಿಸಿದಂತೆ ಕಾಣುತ್ತಿಲ್ಲ. ಮೊದಲ ಪಟ್ಟಿಯಲ್ಲಿ ಮಹಿಳಾ ಸಚಿವರ ಹೆಸರಿದ್ದು, ಬಳಿಕ ಮಂಕಾಳ ವೈದ್ಯ ಅವರನ್ನು ಸೇರಿಸಲಾಗಿದೆ. ಯಾವ ಮಾನದಂಡದ ಆಧಾರದ ಮೇಲೆ ಈ ಬದಲಾವಣೆಗಳು ನಡೆದವು ಎಂಬುದು ಅರ್ಥವಾಗುತ್ತಿಲ್ಲ ಎಂದು ಟೀಕಿಸಿದರು.

ಹಿರಿಯರಿಂದ ಪಕ್ಷ ಸಂಘಟನೆ ಆಗುವುದಿಲ್ಲ ಎಂಬ ಅಭಿಪ್ರಾಯ ಸರಿಯಲ್ಲ. ತಾತ-ಮುತ್ತಾತಂದಿರು ಆಸ್ತಿ ಮಾಡದೇ ಇದ್ದರೆ, ನಾವು ಇಂದು ಈ ಮಟ್ಟಕ್ಕೆ ಬರುತ್ತಿರಲಿಲ್ಲ. ಪಕ್ಷದಲ್ಲಿ ಅನುಭವಕ್ಕೂ ಗೌರವ ಇರಬೇಕು ಎಂದು ಹೇಳಿದರು.

ಮುಖ್ಯಮಂತ್ರಿ ಬದಲಾವಣೆ ಮಾತ್ರ ಮಾಡಿದ್ದರೆ ಸಾಕಾಗುತ್ತಿತ್ತು. ಆದರೆ ಸಂಪುಟ ವಿಸ್ತರಣೆ ವಿಚಾರದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಎಂ.ವೈ. ಗೋಪಾಲಕೃಷ್ಣ, ಮನಸ್ಸಿಗೆ ನೋವಾಗಿರುವ ಕೆಲವರು ರಾಜೀನಾಮೆ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ನಾನು ತಕ್ಷಣ ಅಂತಹ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಮೊದಲು ಕ್ಷೇತ್ರದ ಜನರ ಬಳಿ ಹೋಗಿ ಅವರ ಅಭಿಪ್ರಾಯ ಕೇಳುತ್ತೇನೆ. ಜನರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದರು. ಸರ್ಕಾರವನ್ನು ಅಸ್ಥಿರಗೊಳಿಸುವುದು, ಮುಜುಗರಕ್ಕೆ ಸಿಲುಕಿಸುವುದು ಅಥವಾ ಯಾವುದೇ ರೀತಿಯಲ್ಲಿ ಸಂಕಷ್ಟಕ್ಕೆ ತಳ್ಳುವ ಕೆಲಸವನ್ನು ನಾನು ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

RELATED ARTICLES
spot_img

Latest News