ಹುಬ್ಬಳ್ಳಿ-:ಎರಡು ದಿನಗಳ ಕರ್ನಾಟಕ ಪ್ರವಾಸದ ಅಂಗವಾಗಿ ಹುಬ್ಬಳ್ಳಿಗೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆರೋಗ್ಯದಲ್ಲಿ ಶನಿವಾರ ದಿಢೀರ್ ಏರುಪೇರು ಕಂಡುಬಂದಿದೆ.ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದ ವೇಳೆ ಅಸ್ವಸ್ಥಗೊಂಡ ಸಚಿವರಿಗೆ ಅವರ ವೈದ್ಯಕೀಯ ತಂಡದ ಡಾ. ಅರುಣ್ ಪ್ರತಾಪ್ ನೇತೃತ್ವದ ವೈದ್ಯರ ತಂಡ ಹೋಟೆಲ್‌ನಲ್ಲೇ ತುರ್ತು ಚಿಕಿತ್ಸೆ ನೀಡಿದೆ. ಆರೋಗ್ಯದಲ್ಲಿ ವ್ಯತ್ಯಾಸವಾದ ಹಿನ್ನೆಲೆಯಲ್ಲಿ ವೈದ್ಯರು ಅಮಿತ್ ಶಾ ಅವರಿಗೆ ಕನಿಷ್ಠ 2 ಗಂಟೆಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಹೋಟೆಲ್ ಸುತ್ತಮುತ್ತ ಭದ್ರತೆ ಹೆಚ್ಚಿಸಲಾಗಿದ್ದು, ಧಾರವಾಡ ಜಿಲ್ಲಾಧಿಕಾರಿ, ಜಿಪಂ ಸಿಇಒ ಭುವನೇಶ ಪಾಟೀಲ್ ಹಾಗೂ ಐಜಿಪಿ ಲಾಬುರಾಮ್ ಅವರು ಹೋಟೆಲ್‌ಗೆ ಭೇಟಿ ನೀಡಿ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸಿದ್ದಾರೆ.
ಅಮಿತ್ ಶಾ ಅವರು ಶುಕ್ರವಾರ ತಡರಾತ್ರಿ ವಿಶೇಷ ವಿಮಾನದ ಮೂಲಕ ದೆಹಲಿಯಿಂದ ಹುಬ್ಬಳ್ಳಿಗೆ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದರಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಮತ್ತು ಶಾಸಕ ಮಹೇಶ್ ಟೆಂಗಿನಕಾಯಿ ಸೇರಿದಂತೆ ಹಲವು ಬಿಜೆಪಿ ಗಣ್ಯರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದರು.
ಪೂರ್ವನಿಗದಿತ ವೇಳಾಪಟ್ಟಿಯಂತೆ, ಶನಿವಾರ ಬೆಳಿಗ್ಗೆ ಹುಬ್ಬಳ್ಳಿಯ ಗಬ್ಬೂರು ಬಳಿ ಸುಮಾರು 50 ಎಕರೆ ಪ್ರದೇಶದಲ್ಲಿ 700 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ‘ಕೆಎಲ್‌ಇ ಜಗದ್ಗುರು ಗಂಗಾಧರ ಮಹಾಸ್ವಾಮಿಗಳ ಮೂರುಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯ’ ಹಾಗೂ 1,200 ಹಾಸಿಗೆಗಳ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಅಮಿತ್ ಶಾ ಉದ್ಘಾಟಿಸಬೇಕಿತ್ತು.
ಆದರೆ ಸಚಿವರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾದ ಕಾರಣ, ಈ ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನೇತೃತ್ವದಲ್ಲಿ ಮುಂದುವರಿಸಲಾಯಿತು.ಮುಂದಿನ ಪಯಣ:ವೈದ್ಯರ ಸಲಹೆಯಂತೆ ಅಗತ್ಯ ವಿಶ್ರಾಂತಿ ಪಡೆದ ಬಳಿಕ, ಅಮಿತ್ ಶಾ ಅವರು ತಮ್ಮ ಹುಬ್ಬಳ್ಳಿ ಪ್ರವಾಸದ ಉಳಿದ ಭಾಗವನ್ನು ರದ್ದುಗೊಳಿಸಿ ನೇರವಾಗಿ ದೆಹಲಿಗೆ ಹಿಂತಿರುಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
700 ಕೋಟಿ ವೆಚ್ಚದ ವೈದ್ಯಕೀಯ ಕ್ಯಾಂಪಸ್
ಕೆಎಲ್‌ಇಯ ನೂತನ ವೈದ್ಯಕೀಯ ಕ್ಯಾಂಪಸ್ ಸುಮಾರು 50 ಎಕರೆ ಪ್ರದೇಶದಲ್ಲಿ, ಅಂದಾಜು ₹700 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಸುಮಾರು 1,200 ಹಾಸಿಗೆಗಳ ಆಸ್ಪತ್ರೆ ಇದರ ಪ್ರಮುಖ ಭಾಗವಾಗಿದೆ. ಉತ್ತರ ಕರ್ನಾಟಕದಲ್ಲಿ ವೈದ್ಯಕೀಯ ಶಿಕ್ಷಣ, ಚಿಕಿತ್ಸೆ, ಸಂಶೋಧನೆ ಮತ್ತು ತುರ್ತು ಆರೋಗ್ಯ ಸೇವೆಗಳ ಮೂಲಸೌಕರ್ಯವನ್ನು ವಿಸ್ತರಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ.
ಕೆಎಲ್‌ಇಯ ಮಾಹಿತಿಯಂತೆ, ಆಸ್ಪತ್ರೆಯಲ್ಲಿ ವಿವಿಧ ಬಹು-ವಿಶೇಷತೆ ಮತ್ತು ಸೂಪರ್-ಸ್ಪೆಷಾಲಿಟಿ ಸೇವೆಗಳು ಲಭ್ಯವಿದ್ದು, ಬಡವರಿಗೆ ಉಚಿತ ಅಥವಾ ಸಬ್ಸಿಡಿ ಚಿಕಿತ್ಸೆಗೆ 300 ಹಾಸಿಗೆಗಳನ್ನು ಮೀಸಲಿಡಲಾಗಿದೆ ಎಂದು ಸಂಸ್ಥೆಯ ಚಾನ್ಸಲರ್ ಪ್ರಭಾಕರ ಕೋರೆ ತಿಳಿಸಿದ್ದಾರೆ. ಆಸ್ಪತ್ರೆಯ ಸೇವೆಗಳು ಜನವರಿ 1, 2025ರಿಂದ ಆರಂಭವಾಗಿದ್ದವು.
