ಮಂಗಳೂರು, ಸೆ.19- ಸಚಿವ ಸಂಪುಟಸಭೆಯ ಹಿನ್ನೆಲೆಯಲ್ಲಿ ಮಂಗಳೂರು ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಮುಂಜಾನೆ ಮೀನು ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೇ ಮೀನುಗಾರರ ಜೊತೆ ಸಮಾಲೋಚನೆ ನಡೆಸಿದರು. ಮುಖ್ಯಮಂತ್ರಿಯವರ ದಿಢೀರ್ ಭೇಟಿ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಅಧಿಕಾರಿಗಳು ಮೀನು ಮಾರುಕಟ್ಟೆಯ ಚಟುವಟಿಕೆಗಳನ್ನು ಸ್ಥಗಿತ ಗೊಳಿಸಿದ್ದರು. ಮುಖ್ಯಮಂತ್ರಿಯವರು ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳೀಯರ ಜೊತೆ ಚರ್ಚೆ ನಡೆಸಿದ ಬಳಿಕ ಅರಬ್ಬೀ ಸಮುದ್ರದಲ್ಲಿ ಪ್ರಯಾಣಿಸಿ ಮೀನುಗಾರರ ಕಷ್ಟ-ನಷ್ಟಗಳನ್ನು ಆಲಿಸಿದರು. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ತಾವು ಕಾಂಗ್ರೆಸ್ ಅಧ್ಯಕ್ಷನಾಗಿದ್ದಾಗ ಮೀನುಗಾರರು ಮತ್ತು ಮಾರಾಟಗಾರರ ಜೊತೆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದೆ. ಮೀನುಗಾರರ ಸಂಘದವರು ಈಗ ತಮನ್ನು ಭೇಟಿ ಮಾಡಿ ಹಲವು ಬೇಡಿಕೆಗಳನ್ನು ಮಂಡಿಸಿದ್ದಾರೆ. ಹೀಗಾಗಿಯೇ ಇಂದು ಬೆಳಗ್ಗೆ ಖುದ್ದಾಗಿ ಸಮಸ್ಯೆ ತಿಳಿದುಕೊಳ್ಳಲು ಬೆಳಗ್ಗೆ 5 ಗಂಟೆಗೆ ಆಗಮಿಸಿದ್ದೇನೆ ಎಂದರು.
ನಾನು ಇಲ್ಲಿಗೆ ಭೇಟಿ ನೀಡುವ ವೇಳೆಯಲ್ಲಿ ಮಾರುಕಟ್ಟೆಯ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ. ಇದು ತಮಗೆ ಸಮಾಧಾನ ತಂದಿಲ್ಲ. ಚಟುವಟಿಕೆ ನಿಲ್ಲಿಸಲು ಅಧಿಕಾರಿಗಳು ಅಥವಾ ಪೊಲೀಸರು ಕಾರಣ ಇರಬಹುದು. ಈ ಬಗ್ಗೆ ತನಿಖೆ ಮಾಡಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಒಂದು ವೇಳೆ ಅಧಿಕಾರಿಗಳ ಪಾತ್ರ ಇದ್ದರೆ, ಈ ದಿನವೇ ಅಮಾನತುಗೊಳಿಸಲು ಆದೇಶಿಸುತ್ತೇನೆ ಎಂದರು.
ಮೀನುಗಾರಿಕೆಯ ವ್ಯವಹಾರ ಬಹು ಮುಖ್ಯವಾಗಿದೆ. ದೇಶ ವಿದೇಶಗಳಿಂದಲೂ ಜನ ಬರುತ್ತಾರೆ. ಒಂದು ಗಂಟೆ ವ್ಯವಹಾರ ನಿಂತರೆ ಸಾಕಷ್ಟು ನಷ್ಟವಾಗುತ್ತದೆ ಮತ್ತು ಜನರಿಗೂ ತೊಂದರೆಯಾಗುತ್ತದೆ. ಮುಖ್ಯಮಂತ್ರಿಯವರ ಭದ್ರತೆ ಎಂಬ ಕಾರಣಕ್ಕೆ ವ್ಯವಹಾರ ನಿಲ್ಲಿಸಿರುವುದು ಸರಿಯಲ್ಲ ಎಂದರು.
ಈ ಭಾಗದಲ್ಲಿ ಕೆಲವರು ಅನಧಿಕೃತವಾಗಿ ಗೋಡೆ ಕಟ್ಟಿ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ, ಅನುಮತಿ ಇಲ್ಲದೆ ಕಾಂಪೌಂಡ್ ಹಾಕಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಯಾರು ಎಷ್ಟೇ ದೊಡ್ಡವರಾಗಿದ್ದರೂ ಮುಲಾಜು ಇಲ್ಲದೆ ಕ್ರಮ ಕೈಗೊಂಡು, ಒತ್ತುವರಿ ತೆರವು ಮಾಡಿ ಸರ್ಕಾರಿ ಆಸ್ತಿಗಳನ್ನು ವಶಕ್ಕೆ ತೆಗೆದುಕೊಳ್ಳಬೇಕು. ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಖಾಸಗಿ ಆಸ್ತಿಗಳಾಗಿದ್ದರೆ ಅವುಗಳ ಸ್ವಾಧೀನಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.
ಸಣ್ಣ ಸಣ್ಣ ಮೀನುಗಾರರ ಬೋಟ್‌ಗಳನ್ನು ನಿಲ್ಲಿಸಲು ಜಾಗದ ಸಮಸ್ಯೆ ಇದೆ. ಅದರ ಪರಿಹಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚೆ ನಡೆಸಲಾಗುವುದು ಎಂದರು.ಮೀನುಗಾರರದು ದೊಡ್ಡ ಸಮುದಾಯ. ಈ ಸಮುದಾಯದ ಆರ್ಥಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕಿದೆ. ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಮೀನುಗಾರಿಕೆ ವಿಶ್ವವಿದ್ಯಾನಿಲಯ ಸ್ಥಾಪನೆ, ಬಂದರು ಚಟುವಟಿಕೆಗಳಿಗೆ ಬೆಂಬಲ ನೀಡುವುದು, ಮೀನುಗಾರಿಕೆ ಕಸುಬು ಹಾಗೂ ಅದರ ಶಿಕ್ಷಣಕ್ಕೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಮಂಗಳೂರು ಮತ್ತು ಕಾರವಾರದಲ್ಲಿ ಸಮುದ್ರ ಪಕ್ಕದಲ್ಲಿರುವ ಮೀನುಗಾರರಿಗೆ ಅಗತ್ಯ ಇರುವ ಎಲ್ಲಾ ರೀತಿಯ ಸಹಾಯ ಮಾಡಲು ನಿರ್ಧರಿಸಿದ್ದೇನೆ. ಮೀನುಗಾರರು ತಮ ಸಮಸ್ಯೆಗಳ ಬಗ್ಗೆ ಈ ಕ್ಷಣದಲ್ಲಿ ನನ್ನ ಬಳಿ ಹೇಳಲು ಹಿಂಜರಿಯುತ್ತಿರಬಹುದು. ಅದಕ್ಕೆ ಭಯದ ವಾತಾವರಣ ಅಥವಾ ಮಾಫಿಯಾ ಕಡಿವಾಣ ಇರಬಹುದು. ವಾಸ್ತವ ತಿಳಿದುಕೊಳ್ಳಲು ಅಧಿಕಾರಿಗಳಿಂದ ಗುಪ್ತ ವರದಿ ಪಡೆಯುತ್ತೇನೆ. ನ್ಯಾಯಯುತ ವ್ಯವಹಾರ ನಡೆಸಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದರು.
ಕೆಲವು ಕಡೆ ಹೂಳು ತೆಗೆಯದೆ ಬೋಟ್‌ಗಳು ಮುಳುಗಡೆಯಾಗುತ್ತಿವೆ. ಹೂಳು ತೆಗೆದು ಅದನ್ನು ಸಮುದ್ರಕ್ಕೆ ಹಾಕಬೇಕು ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನೂ ಕೆಲವರು ಸಮುದ್ರದ ಪಕ್ಕದಲ್ಲೇ ಹೆಚ್ಚುವರಿ ಜಮೀನನ್ನು ಮೀಸಲಿಟ್ಟು, ಹೂಳಿನ ಮಣ್ಣನ್ನು ಸುರಿಯಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನು ಪರಿಶೀಲನೆ ಮಾಡುವುದಾಗಿ ಹೇಳಿದರು.
ಕೇಂದ್ರ ಸರ್ಕಾರದ ಸಾಗರಮಾಲ ಯೋಜನೆಯಡಿ 25 ರಿಂದ 30 ಕೋಟಿ ರೂ.ಗಳು ಬಳಕೆ ಆಗದೆ, ವಾಪಸ್ ಹೋಗಿರುವ ಬಗ್ಗೆ ವರದಿ ಪಡೆಯುತ್ತೇನೆ. ಈಗಿನ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವೇ ಹೂಳು ತೆಗೆಯಲು ಕ್ರಮ ವಹಿಸುವ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದರು. ಮೀನುಗಾರರಿಗೆ ಆಸ್ಪತ್ರೆ, ಶೌಚಾಲಯ ಸೇರಿದಂತೆ ಇತರ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
