ಬೆಳಗಾವಿ,ಸೆ.19- ಗ್ರಾಮ ಪಂಚಾಯ್ತಿಗೆ ನುಗ್ಗಿ ಮಾಜಿ ಯೋಧ ಹಾಗೂ ಅವರ ಪುತ್ರಿಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಕೊಲೆಯಾದ ರುದ್ರಪ್ಪನ ಸಹೋದರ ಬಸಪ್ಪ ಕುಂದರಗಿ, ಸಂಗಪ್ಪ ಕುಂದರಗಿ,ಅವರ ಪುತ್ರ ಮಡಿವಾಳಪ್ಪ ಕುಂದರಗಿ ಬಂಧಿತ ಆರೋಪಿಗಳು.
ಕಿತ್ತೂರು ತಾಲೂಕಿನ ಅವರಾದಿಯಲ್ಲಿ ಮಾಜಿ ಯೋಧ ರುದ್ರಪ್ಪ ಕುಂದರಗಿ (67) ಹಾಗೂ ಅವರ ಪುತ್ರಿ ಶಶಿಕಲಾ ಕುಂದರಗಿ (26) ಅವರನ್ನು ದಾಯಾದಿಗಳೇ ಕೊಚ್ಚಿ ಕೊಂದಿದ್ದರು.
ಆಸ್ತಿ ಪಾಲು ವಿಚಾರವಾಗಿ ಸಹೋದರರ ನಡುವೆ ಕಲಹ ಏರ್ಪಟಿತ್ತು.
38 ಗುಂಟೆ ಜಮೀನನ್ನು ಮೂವರು ಸಹೋದರರಿಗೆ ಹಂಚಿಕೆ ಮಾಡುವಂತೆ ನ್ಯಾಯಾಲಯ ಆದೇಶಿಸಿತ್ತು. ಆದರೆ ರುದ್ರಪ್ಪ ಅವರು ತಮ ಪಾಲಿಗೆ ಬಂದ ಜಮೀನನ್ನು ಈಗಾಗಲೇ ಮಾರಾಟ ಮಾಡಿದ್ದರೂ, ಉಳಿದ ಜಮೀನಿನಲ್ಲೂ ಪಾಲು ನೀಡಬೇಕೆಂದು ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.
ಈ ಸಂಬಂಧ ಮತ್ತೊಬ್ಬ ಸಹೋದರ ಆಸ್ತಿ ಪಾಲುದಾರಿಕೆ ಅರ್ಜಿ ಸಲ್ಲಿಸಲು ಅವರಾದಿ ಗ್ರಾಮ ಪಂಚಾಯ್ತಿಗೆ ಬಂದಿದ್ದ ವೇಳೆ ಆರೋಪಿಗಳು ಅಲ್ಲಿಗೆ ನುಗ್ಗಿ ರುದ್ರಪ್ಪ ಹಾಗೂ ಶಶಿಕಲಾ ಮೇಲೆ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಯಲ್ಲಿ ಇಬ್ಬರೂ ಮೃತಪಟ್ಟಿದ್ದು, ರುದ್ರಪ್ಪ ಅವರ ಕಾರು ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
