Homeಇದೀಗ ಬಂದ ಸುದ್ದಿಧೂಳೆಬ್ಬಿಸುತ್ತಿರುವ ರಸ್ತೆಗಳು, ಕಾಮಗಾರಿ ಕಿರಿಕಿರಿಯಿಂದ ಬೆಂಗಳೂರಿಗರಿಗೆ ನಿತ್ಯ ನರಕಯಾತನೆ

ಧೂಳೆಬ್ಬಿಸುತ್ತಿರುವ ರಸ್ತೆಗಳು, ಕಾಮಗಾರಿ ಕಿರಿಕಿರಿಯಿಂದ ಬೆಂಗಳೂರಿಗರಿಗೆ ನಿತ್ಯ ನರಕಯಾತನೆ

ಬೆಂಗಳೂರು,ಸೆ.19- ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ರಸ್ತೆ ಕಾಮಗಾರಿ ಹಾಗೂ ಹದಗೆಟ್ಟ ಮೇಲೈಯಿಂದ ವಾಹನ ಸವಾರರು ಮತ್ತು ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಚಾಮರಾಜಪೇಟೆ, ಜೆ.ಸಿ.ರೋಡ್‌, ವಾಟಾಳ್‌ ನಾಗರಾಜ್‌ ರಸ್ತೆ, ಮೈಸೂರು ರಸ್ತೆ, ರೇಸ್‌‍ ಕೋರ್ಸ್‌ ರಸ್ತೆ ಸೇರಿದಂತೆ ನಗರದ ಪ್ರಮುಖ ಮಾರ್ಗಗಳ ಪಕ್ಕದಲ್ಲಿ ಧೂಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ.

ಕಳೆದ ಮೂರು ದಿನಗಳಿಂದ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿದ್ದ ಧೂಳಿನ ಪ್ರಮಾಣ ಕೆಲವೆಡೆ ಕಡಿಮೆಯಾಗಿದೆ. ಆದರೆ ವಾಹನಗಳ ಸಂಚಾರ ಹೆಚ್ಚಿರುವ ಪ್ರದೇಶಗಳಲ್ಲಿ ಧೂಳು ಮತ್ತೆ ಮೇಲೇಳುತ್ತಿದ್ದು, ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಕಿರಿಕಿರಿ ಅನುಭವಿಸುತ್ತಿದ್ದಾರೆ. ಧೂಳಿನಿಂದಾಗಿ ಕಣ್ಣು ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುವ ಆತಂಕವೂ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.

ರಸ್ತೆ ಡಾಂಬರೀಕರಣದ ನೆಪದಲ್ಲಿ ರಸ್ತೆಗಳನ್ನು ಜೆಸಿಬಿಯಿಂದ ಕೆರೆಯುತ್ತಿರುವುದರಿಂದ ರಸ್ತೆಯ ಅಕ್ಕಪಕ್ಕದಲ್ಲಿರುವ ಅಂಗಡಿ ಮಾಲೀಕರಿಗೂ ಧೂಳು ಸಮಸ್ಯೆಯಾಗಿ ಪರಿಣಮಿಸಿದೆ. ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಮತ್ತು ರಸ್ತೆ ನಿರ್ವಹಣೆಯಲ್ಲಿ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದರ ನಡುವೆ ಮಳೆಯಿಂದಾಗಿ ನಗರದ ಹಲವು ರಸ್ತೆಗಳು ಗುಂಡಿಗಳಾಗಿ ಮಾರ್ಪಟ್ಟಿರುವುದು ಮತ್ತೊಂದು ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ಮುಂಗಾರು ಮಳೆ ಹೆಚ್ಚಾಗುವ ಸಾಧ್ಯತೆಯಿರುವುದರಿಂದ ರಸ್ತೆ ಗುಂಡಿಗಳನ್ನು ಶೀಘ್ರವಾಗಿ ಮುಚ್ಚಿ, ಸಂಚಾರಕ್ಕೆ ಸುರಕ್ಷಿತ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

RELATED ARTICLES
spot_img

Latest News