Homeರಾಜ್ಯತಾಂತ್ರಿಕ ಕ್ರಾಂತಿಯ ನೇತೃತ್ವ ವಹಿಸಲು ಕರ್ನಾಟಕ ಸರ್ಕಾರ ಬದ್ಧವಾಗಿದೆ : ಡಿಕೆಶಿ

ತಾಂತ್ರಿಕ ಕ್ರಾಂತಿಯ ನೇತೃತ್ವ ವಹಿಸಲು ಕರ್ನಾಟಕ ಸರ್ಕಾರ ಬದ್ಧವಾಗಿದೆ : ಡಿಕೆಶಿ

Karnataka government committed to leading technological revolution

ಬೆಂಗಳೂರು, ಆ.4- ನ್ಯಾನೋ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್‌ಗಳು, ಜೈವಿಕ ತಂತ್ರಜ್ಞಾನ ಮತ್ತು ಕ್ವಾಂಟಮ್‌ ತಂತ್ರಜ್ಞಾನ ಸೇರಿದಂತೆ ಡೀಪ್‌ ಟೆಕ್‌ಗಳ ಜಾಗತಿಕ ಕೇಂದ್ರವಾಗಿ ಬೆಂಗಳೂರನ್ನು ರೂಪಿಸುವ ಮೂಲಕ ಕರ್ನಾಟಕವು ಮುಂದಿನ ತಾಂತ್ರಿಕ ಕ್ರಾಂತಿಯ ನೇತೃತ್ವ ವಹಿಸುವಂತೆ ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ನ್ಯಾನೋ ತಂತ್ರಜ್ಞಾನ ವಿಷನ್‌ ಗ್ರೂಪ್‌ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿರುವ 14ನೇ ಬೆಂಗಳೂರು ಇಂಡಿಯಾ ನ್ಯಾನೋ ಸಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೆಂಗಳೂರು ಭಾರತವನ್ನು ಜಾಗತಿಕ ಐಟಿ ಭೂಪಟದಲ್ಲಿ ನಿಲ್ಲಿಸಿದೆ. ಈಗ ಭಾರತವನ್ನು ಜಾಗತಿಕ ಡೀಪ್‌-ಟೆಕ್‌ ಭೂಪಟದಲ್ಲಿ ನಿಲ್ಲಿಸುವ ಸಮಯ ಬಂದಿದೆ. ಸರ್ಕಾರ, ಶೈಕ್ಷಣಿಕ ಕ್ಷೇತ್ರ, ಉದ್ಯಮ ಮತ್ತು ಉದ್ಯಮಿಗಳ ನಡುವಿನ ಸಹಯೋಗದಿಂದ ಮಾತ್ರ ನಾವೀನ್ಯತೆ ಬೆಳೆಯಲು ಸಾಧ್ಯ. ಈ ಪಾಲುದಾರಿಕೆಯೇ ಕರ್ನಾಟಕದ ಬಹುದೊಡ್ಡ ಶಕ್ತಿ. ಭಾರತ ರತ್ನ ಪೊ. ಸಿ. ಎನ್‌. ಆರ್‌. ರಾವ್‌ ಅವರ ದೂರದೃಷ್ಟಿಯು ಸಂಶೋಧಕರ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇದೆ ಎಂದು ಹೇಳಿದರು.

ನ್ಯಾನೋ ತಂತ್ರಜ್ಞಾನವು ಇನ್ನು ಮುಂದೆ ಕೇವಲ ಸಂಶೋಧನಾ ಪ್ರಯೋಗಾಲಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದು ಆರೋಗ್ಯ ರಕ್ಷಣೆ, ಎಲೆಕ್ಟ್ರಾನಿಕ್‌್ಸ, ಇಂಧನ, ಕೃಷಿ, ಸಾರಿಗೆ, ಬಾಹ್ಯಾಕಾಶ, ರಕ್ಷಣೆ ಮತ್ತು ಸುಧಾರಿತ ಉತ್ಪಾದನಾ ಕ್ಷೇತ್ರಗಳನ್ನು ಪರಿವರ್ತಿಸುವ ಮೂಲಭೂತ ತಂತ್ರಜ್ಞಾನವಾಗಿದೆ ಎಂದು ಹೇಳಿದರು.

ಕೃತಕ ಬುದ್ಧಿಮತ್ತೆ, ನ್ಯಾನೋ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಕ್ವಾಂಟಮ್‌ ತಂತ್ರಜ್ಞಾನ, ಸೆಮಿಕಂಡಕ್ಟರ್‌ಗಳು ಮತ್ತು ಸುಧಾರಿತ ಸಾಮಗ್ರಿಗಳ ಸಮಿಲನದಿಂದ ಭವಿಷ್ಯವು ರೂಪುಗೊಳ್ಳಲಿದೆ. ಈ ತಾಂತ್ರಿಕ ಕ್ರಾಂತಿಯಲ್ಲಿ ಕರ್ನಾಟಕವು ಮುಂಚೂಣಿಯಲ್ಲಿರಲು ಬಯಸುತ್ತದೆ ಎಂದು ಹೇಳಿದರು.

ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿ, ಬಲಿಷ್ಠ ಸಂಶೋಧನಾ ಸಂಸ್ಥೆಗಳು, ಬೆಳೆಯುತ್ತಿರುವ ನವೋದ್ಯಮ ಪರಿಸರ ವ್ಯವಸ್ಥೆ ಮತ್ತು ಪ್ರಗತಿಪರ ನೀತಿಗಳಿಂದ ಕರ್ನಾಟಕವು ಈ ಪರಿವರ್ತನೆಗೆ ಮುನ್ನಡೆ ನೀಡಲು ಅತ್ಯುತ್ತಮ ಸ್ಥಾನದಲ್ಲಿದೆ. ಜಾಗತಿಕ ಮಟ್ಟದಲ್ಲಿ ಸ್ಪರ್ಧಾತಕವಾಗಿರುವ ಹಾಗೂ ಸಮಾಜಕ್ಕೆ ಉಪಯುಕ್ತವಾಗುವ ತಂತ್ರಜ್ಞಾನಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರವು ಉತ್ತೇಜನ ನೀಡುತ್ತಿದೆ ಎಂದರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಎನ್‌. ಮಂಜುಳಾ ಮಾತನಾಡಿ, ಈ ಬಾರಿಯ ಸಮಾವೇಶದ ನ್ಯಾನೊ ತಂತ್ರಜ್ಞಾನದ ಮುಂದಿನ ಗಡಿ: ಎಐ ಮತ್ತು ಅದರಾಚೆ ಪರಿಕಲ್ಪನೆ, ಸಮನ್ವಯ, ವಾಣಿಜ್ಯೀಕರಣ ಎಂಬ ಧ್ಯೇಯವು ವಿವಿಧ ಕ್ಷೇತ್ರಗಳ ಸಹಯೋಗವನ್ನು ಉತ್ತೇಜಿಸಿ, ಹೊಸ ಸಂಶೋಧನೆಗಳನ್ನು ವಾಣಿಜ್ಯ ಬಳಕೆಗೆ ತರುವ ನಮ ಬದ್ಧತೆಯನ್ನು ಸಮರ್ಥವಾಗಿ ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಭಾರತ ರತ್ನ ಪೊ. ಸಿ.ಎನ್‌.ಆರ್‌. ರಾವ್‌ ಅವರನ್ನು ವಿಜ್ಞಾನ ಕ್ಷೇತ್ರಕ್ಕೆ ಸಲ್ಲಿಸಿದ ಅಸಾಧಾರಣ ಕೊಡುಗೆ ಹಾಗೂ ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ನ್ಯಾನೊ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಪ್ರವರ್ತಕ ಪಾತ್ರ ನಿರ್ವಹಿಸಿರುವುದಕ್ಕೆ ವಿಶೇಷವಾಗಿ ಸನಾನಿಸಲಾಯಿತು.

ಬೆಂಗಳೂರು ಇಂಡಿಯಾ ನ್ಯಾನೊ ವಿಜ್ಞಾನ ಪ್ರಶಸ್ತಿಯನ್ನು ಬೆಂಗಳೂರಿನ ಸೆಂಟರ್‌ ಫಾರ್‌ ನ್ಯಾನೊ ಆ್ಯಂಡ್‌ ಸಾಫ್‌್ಟ ಮ್ಯಾಟರ್‌ ಸೈನ್ಸಸ್‌‍ ಸಂಸ್ಥೆಯ ನಿರ್ದೇಶಕ ಪೊ. ಬಿ.ಎಲ್‌.ವಿ. ಪ್ರಸಾದ್‌ ಅವರಿಗೆ ಪ್ರದಾನ ಮಾಡಲಾಯಿತು.

ಸಮಾವೇಶದ ಭಾಗವಾಗಿ ಅಂತರರಾಷ್ಟ್ರೀಯ ಪ್ರದರ್ಶನ ಕೂಡ ಆಯೋಜಿಸಲಾಗಿದ್ದು, ಕೈಗಾರಿಕೆಗಳು, ನವೋದ್ಯಮಗಳು, ಸಂಶೋಧನಾ ಪ್ರಯೋಗಾಲಯಗಳು, ಶೈಕ್ಷಣಿಕ ಸಂಸ್ಥೆಗಳು ಹಾಗೂ ತಂತ್ರಜ್ಞಾನ ಪೂರೈಕೆದಾರರು ನ್ಯಾನೊ ತಂತ್ರಜ್ಞಾನ ಕ್ಷೇತ್ರದ ಅತ್ಯಾಧುನಿಕ ಉತ್ಪನ್ನಗಳು, ತಂತ್ರಜ್ಞಾನಗಳು, ಸಂಶೋಧನೆಗಳು ಮತ್ತು ನವೋದ್ಯಮಗಳನ್ನು ಪ್ರದರ್ಶಿಸುತ್ತಿವೆ.

ಸಮಾವೇಶದಲ್ಲಿ 26 ಸಮೇಳನ ಅಧಿವೇಶನಗಳು, 80ಕ್ಕೂ ಹೆಚ್ಚು ವಿಷಯ ಪರಿಣತ ಭಾಷಣಕಾರರು, 800ಕ್ಕೂ ಅಧಿಕ ಪ್ರತಿನಿಧಿಗಳು, 10ಕ್ಕೂ ಹೆಚ್ಚು ದೇಶಗಳ 50 ಪ್ರದರ್ಶಕರು ಹಾಗೂ 4,000ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದು, ದೇಶದ ಅತಿದೊಡ್ಡ ನ್ಯಾನೊ ತಂತ್ರಜ್ಞಾನ ಸಮಾವೇಶಕ್ಕೆ ವಿಶೇಷ ಮೆರುಗು ನೀಡಿದ್ದಾರೆ.
ಸಮಾವೇಶದಲ್ಲಿ ನ್ಯಾನೊ ತಂತ್ರಜ್ಞಾನ ವಿಷನ್‌ ಗ್ರೂಪ್‌ ಅಧ್ಯಕ್ಷ ಪೊ. ನವಕಾಂತ ಭಟ್‌, 14ನೆ ಬೆಂಗಳೂರು ಇಂಡಿಯಾ ನ್ಯಾನೊ-ದ ಸಮೇಳನ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಪೊ. ಪಿ.ಎಸ್‌‍. ಅನಿಲ್‌ ಕುಮಾರ್‌ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಿರ್ದೇಶಕ ಭರತ್‌.ಎಸ್‌‍, ಇಂದುಮತಿ ರಾವ್‌, ಲ್ಯಾಮ್‌ ರಿಸರ್ಚ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಂಗೇಶ್‌ ರಾಘವನ್‌, ಸಿಎಂ ಆರ್ಥಿಕ ಸಲಹೆಗಾರರಾದ ಎಲ್‌.ಕೆ. ಅತೀಕ್‌ ಮುಂತಾದವರಿದ್ದರು.

RELATED ARTICLES
spot_img

Latest News