Homeರಾಜ್ಯದಾಖಲೆ ಕೊಡದ ಮನೆಗಳಿಗೆ ಗೃಹಜ್ಯೋತಿ ಯೋಜನೆಯ ಉಚಿತ ವಿದ್ಯುತ್‌ ಇಲ್ಲ

ದಾಖಲೆ ಕೊಡದ ಮನೆಗಳಿಗೆ ಗೃಹಜ್ಯೋತಿ ಯೋಜನೆಯ ಉಚಿತ ವಿದ್ಯುತ್‌ ಇಲ್ಲ

No free electricity under Grihajyothi scheme for undocumented households

ಬೆಂಗಳೂರು,ಆ.4- ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್‌ ಪಡೆಯುತ್ತಿರುವ ಗ್ರಾಹಕರಿಗೆ ಇಂಧನ ಇಲಾಖೆ ಶಾಕಿಂಗ್‌ ಸುದ್ದಿ ನೀಡಿದೆ.
ರಾಜ್ಯಾದ್ಯಂತ ನಡೆಯುತ್ತಿರುವ ಮನೆ-ಮನೆ ಸಮೀಕ್ಷೆಯಲ್ಲಿ ಅಗತ್ಯ ದಾಖಲೆಗಳು ಮತ್ತು ಮಾಹಿತಿಯನ್ನು ನೀಡದಿದ್ದರೆ ಫಲಾನುಭವಿಗಳು ಯೋಜನೆಯ ವ್ಯಾಪ್ತಿಯಿಂದ
ಹೊರಗುಳಿಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಯಾವುದೇ ಅರ್ಹ ಗ್ರಾಹಕರು ಯೋಜನೆಯ ಸೌಲಭ್ಯದಿಂದ ವಂಚಿತರಾಗದಂತೆ ವಿಶೇಷ ಶಿಬಿರಗಳನ್ನು ಆಯೋಜಿಸುವ ಪ್ರಸ್ತಾವನೆಯನ್ನೂ ಸರ್ಕಾರದ ಮುಂದಿಡಲಾಗಿದೆ.ಇಂಧನ ಇಲಾಖೆಯ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆಯಡಿ 1,65,32,652 ಗೃಹ ವಿದ್ಯುತ್‌ ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ ಆಗಸ್ಟ್‌ 2, 2026ರವರೆಗೆ 91,50,081 ಫಲಾನುಭವಿಗಳ ಮನೆಗಳಿಗೆ ಮೀಟರ್‌ ರೀಡರ್‌ಗಳು ಭೇಟಿ ನೀಡಿ ಸಮೀಕ್ಷೆ ಪೂರ್ಣಗೊಳಿಸಿದ್ದು, ಇನ್ನೂ 73,82,571 ಫಲಾನುಭವಿಗಳ ಮಾಹಿತಿ ಸಂಗ್ರಹವಾಗಿಲ್ಲ.

ಮನೆ-ಮನೆ ಸಮೀಕ್ಷೆಯ ಉದ್ದೇಶ ಯೋಜನೆಯ ಫಲಾನುಭವಿಗಳ ವಿವರಗಳನ್ನು ನವೀಕರಿಸುವುದು ಮತ್ತು ಯೋಜನೆಯ ಲಾಭ ಸರಿಯಾದ ಫಲಾನುಭವಿಗಳಿಗೆ ತಲುಪುತ್ತಿರುವುದನ್ನು ಖಚಿತಪಡಿಸಿಕೊಳ್ಳುವುದಾಗಿದೆ. ಸಮೀಕ್ಷೆ ವೇಳೆ ಗ್ರಾಹಕರು ಮನೆಯಲ್ಲಿ ಇಲ್ಲದಿದ್ದರೆ ಅಥವಾ ಮಾಹಿತಿ ನೀಡಲು ನಿರಾಕರಿಸಿದರೆ ಅವರು ಯೋಜನೆಯ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯನ್ನು ಇಲಾಖೆ ನೀಡಿದೆ.

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಾಜ್ಯದ ಎಲ್ಲಾ ಎಸ್ಕಾಂ ಕಚೇರಿಗಳಲ್ಲಿ ವಿಶೇಷ ಸಮೀಕ್ಷಾ ಶಿಬಿರಗಳನ್ನು ನಡೆಸಲು ಸರ್ಕಾರದ ಅನುಮತಿ ಕೋರಲಾಗಿದೆ. ಈ ಶಿಬಿರಗಳಲ್ಲಿ ಫಲಾನುಭವಿಗಳು ಸ್ವತಃ ಹಾಜರಾಗಿ ತಮ ದಾಖಲೆಗಳು ಮತ್ತು ಮಾಹಿತಿಯನ್ನು ಸಲ್ಲಿಸಬಹುದಾಗಿದೆ. ಅಲ್ಲದೆ ಮೊದಲ ಬಾರಿ ಮನೆಗೆ ಭೇಟಿ ನೀಡಿದಾಗ ಫಲಾನುಭವಿಗಳು ಸಿಗದಿದ್ದರೆ ಅಥವಾ ಮಾಹಿತಿ ನೀಡದಿದ್ದರೆ, ಮೀಟರ್‌ ರೀಡರ್‌ಗಳು ಮತ್ತೊಮೆ ಮನೆಗಳಿಗೆ ಭೇಟಿ ನೀಡುವಂತೆ ನಿರ್ದೇಶನ ನೀಡಲಾಗಿದೆ.

ಸಮೀಕ್ಷೆಗೆ ಅಡ್ಡಿ:
ಈ ನಡುವೆ ಬೆಸ್ಕಾಂ ವ್ಯಾಪ್ತಿಯ ವೈಟ್‌ಫೀಲ್ಡ್ , ಮಹದೇವಪುರ ಮತ್ತು ಸರ್ಜಾಪುರ ಸೇರಿದಂತೆ ಕೆಲವು ಪ್ರದೇಶಗಳ ದೊಡ್ಡ ಅಪಾರ್ಟ್‌ಮೆಂಟ್‌ಗಳಲ್ಲಿ ಮೀಟರ್‌ ರೀಡರ್‌ಗಳಿಗೆ ಪ್ರವೇಶ ನೀಡುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ.

ಕೆಲ ನಿವಾಸಿಗಳು ತಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಲು ಹಿಂದೇಟು ಹಾಕುತ್ತಿರುವುದರಿಂದ ಸಮೀಕ್ಷೆ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಈ ಬಗ್ಗೆ ಮೀಟರ್‌ ರೀಡರ್‌ಗಳು ಬೆಸ್ಕಾಂ ಮುಖ್ಯ ಕಚೇರಿಯ ಗಮನಕ್ಕೂ ತಂದಿದ್ದಾರೆಂದು ತಿಳಿದುಬಂದಿದೆ.

ಕೆಲವರು ತಮ ಮಾಹಿತಿಯನ್ನು ಹಂಚಿಕೊಳ್ಳಲು ಆಸಕ್ತಿ ತೋರದಿರುವುದು ನಿಜ. ಅಂಥ ಸಂದರ್ಭಗಳಲ್ಲಿ ಆ್ಯಪ್‌ನಲ್ಲಿ ಮಾಹಿತಿ ನೀಡಲು ನಿರಾಕರಿಸಿದ್ದಾರೆ ಎಂಬ ಆಯ್ಕೆಯಿದೆ ಮತ್ತು ಫಲಾನುಭವಿಯಿಂದ ಸಹಿಯನ್ನೂ ಪಡೆಯಲಾಗುತ್ತದೆ. ಇದುವರೆಗೆ ಯಾವುದೇ ಫಲಾನುಭವಿಯನ್ನು ಪಟ್ಟಿಯಿಂದ ಕೈಬಿಡಲಾಗಿಲ್ಲ. ಯೋಜನೆಯಿಂದ ಯಾರನ್ನಾದರೂ ಹೊರಗಿಡುವ ಕುರಿತು ಅಂತಿಮ ನಿರ್ಧಾರವನ್ನು ಸರ್ಕಾರವೇ ಕೈಗೊಳ್ಳಲಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ ಎನ್‌ ಅವರು, ಸ್ಪಷ್ಟಪಡಿಸಿದ್ದಾರೆ.

ಸಮೀಕ್ಷೆ ವೇಳೆ ಯಾವ ದಾಖಲೆಗಳು ಬೇಕು?
ಮನೆ-ಮನೆ ಸಮೀಕ್ಷೆ ವೇಳೆ ಫಲಾನುಭವಿಗಳು ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಆಧಾರ್‌ ಕಾರ್ಡ್‌
ಪಾಸ್‌‍ಪೋರ್ಟ್‌ ಗಾತ್ರದ ಭಾವಚಿತ್ರ
ಮತದಾರರ ಗುರುತಿನ ಚೀಟಿ
ಪ್ಯಾನ್‌ ಕಾರ್ಡ್‌
ಬಾಡಿಗೆ ಅಥವಾ ಲೀಸ್‌‍ ಒಪ್ಪಂದ ಪತ್ರ(ಅಗತ್ಯವಿದ್ದರೆ)
ಪಡಿತರ ಚೀಟಿ
ಜಾತಿ ಪ್ರಮಾಣಪತ್ರ (ಐಚ್ಛಿಕ)
ಬಿಪಿಎಲ್‌ ಅಥವಾ ಎಪಿಎಲ್‌ ಕಾರ್ಡ್‌ ವಿವರಗಳು
ಇದರ ಜೊತೆಗೆ ಫಲಾನುಭವಿಯ ವೃತ್ತಿ, ವಾಸಿಸುವ ಸ್ಥಳ ಸೇರಿದಂತೆ ಕೆಲವು ಮೂಲಭೂತ ಮಾಹಿತಿಯನ್ನೂ ಮೀಟರ್‌ ರೀಡರ್‌ಗಳು ದಾಖಲಿಸುತ್ತಿದ್ದಾರೆ.
ಇಲ್ಲಿವರೆಗೆ ಬೆಸ್ಕಾಂ ವ್ಯಾಪ್ತಿಯಲ್ಲಿ 37,28,114, ಸಿಇಎಸ್‌‍ಸಿ (ಮೈಸೂರು) ವ್ಯಾಪ್ತಿಯಲ್ಲಿ 11,09,782, ಗೆಸ್ಕಾಂ (ಕಲಬುರಗಿ) ವ್ಯಾಪ್ತಿಯಲ್ಲಿ 8,50,786, ಹೆಸ್ಕಾಂ (ಹುಬ್ಬಳ್ಳಿ-ಧಾರವಾಡ) ವ್ಯಾಪ್ತಿಯಲ್ಲಿ 22,03,401, ಮೆಸ್ಕಾಂ (ಮಂಗಳೂರು) ವ್ಯಾಪ್ತಿಯಲ್ಲಿ 12,31,289 ಹಾಗೂ ಹುಕ್ಕೇರಿ ಗ್ರಾಮೀಣ ವಿದ್ಯುತ್‌ ಸಹಕಾರ ಸಂಘದ ವ್ಯಾಪ್ತಿಯಲ್ಲಿ 26,709 ಫಲಾನುಭವಿಗಳ ಸಮೀಕ್ಷೆ ಪೂರ್ಣಗೊಂಡಿದೆ.

26,997 ಕೋಟಿಗೂ ಅಧಿಕ ವೆಚ್ಚ
ಆಗಸ್ಟ್‌ 2023ರಲ್ಲಿ ಆರಂಭವಾದ ಗೃಹಜ್ಯೋತಿ ಯೋಜನೆಗಾಗಿ ಮೇ 2026ರವರೆಗೆ ರಾಜ್ಯ ಸರ್ಕಾರ ಒಟ್ಟು ರೂ.26,997.54 ಕೋಟಿ ವೆಚ್ಚ ಮಾಡಿದೆ. ಇದರಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲೇ ಅತಿ ಹೆಚ್ಚು 12,577.61 ಕೋಟಿ ರೂ. ವೆಚ್ಚವಾಗಿದೆ.
ಈ ನಡುವೆ ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳು ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಸಹಕರಿಸಬೇಕು ಎಂದು ಇಂಧನ ಇಲಾಖೆ ಮನವಿ ಮಾಡಿದೆ.

RELATED ARTICLES
spot_img

Latest News