ಬೆಂಗಳೂರು,ಆ.4- ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ ಶಾಸಕರ ಅಸಮಾಧಾನ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವುದು ವಿಳಂಬವಾಗಲಿದೆ.ತರಾತುರಿಯಲ್ಲಿ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡದೇ ಅಸಮಾಧಾನಿತರನ್ನು ಸಮಾಧಾನಪಡಿಸಿದ ಬಳಿಕ ಖಾತೆ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ.
ಏಕೆಂದರೆ ಕಳೆದ ಬಾರಿ ಖಾತೆ ಹಂಚಿಕೆಯ ನಂತರ ಸಚಿವರು ತಮಗೆ ಹಂಚಿಕೆಯಾದ ಖಾತೆಯ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದರಿಂದ ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರ ಉಂಟಾಗಿತ್ತು. ಈ ಬಾರಿ ಆ ರೀತಿ ಆಗುವುದು ಬೇಡ, ಎಲ್ಲರಿಗೂ ಸಮಾಧಾನವಾಗುವ ರೀತಿಯಲ್ಲಿ ಖಾತೆ ಹಂಚಿಕೆ ಮಾಡುವ ಉದ್ದೇಶವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೊಂದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ನಿನ್ನೆ ಪ್ರಮಾಣವಚನ ಸ್ವೀಕರಿಸಿದ ನೂತನ ಸಚಿವರು ಸೇರಿದಂತೆ ಎಲ್ಲಾ ಸಚಿವರಿಗೆ ಜಿಲ್ಲಾವಾರು ಜವಾಬ್ದಾರಿಯನ್ನು ಮುಖ್ಯಮಂತ್ರಿ ವಹಿಸಿದ್ದು, ಆಯಾ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿನ ನೆರೆ-ಬರ ಪರಿಸ್ಥಿತಿಯ ಬಗ್ಗೆ ಅಧ್ಯಯನ ನಡೆಸಿ ವಾಸ್ತವ ಸ್ಥಿತಿಯನ್ನಾಧರಿಸಿ ವರದಿಯನ್ನು ಕಂದಾಯ ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ನೀಡುವಂತೆ ತಿಳಿಸಿದ್ದಾರೆ.
ಸಚಿವರು ಆಯಾ ಜಿಲ್ಲೆಯಲ್ಲಿ ತಕ್ಷಣವೇ ಪ್ರವಾಸ ಕೈಗೊಂಡು ಪರಿಸ್ಥಿತಿಯನ್ನು ಪರಿಶೀಲಿಸಲು ನಿರ್ದೇಶನ ನೀಡಿದ್ದಾರೆ. ಇದರಿಂದಲೂ ಖಾತೆ ಹಂಚಿಕೆ ವಿಳಂಬವಾಗುವ ಸಾಧ್ಯತೆಗಳಿವೆ.
ಡಿಕೆಶಿಯವರ ಸಂಪುಟ ಸೇರ್ಪಡೆಯಾಗಲಿರುವ ಪಟ್ಟಿ ನಿನ್ನೆ ಬಹಿರಂಗಗೊಳ್ಳುತ್ತಿದ್ದಂತೆ ಅವಕಾಶ ವಂಚಿತರು ತಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಲ್ಲದೆ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಶಾಸಕ ಸ್ಥಾನಕ್ಕೆ ನಿನ್ನೆಯೇ ರಾಜೀನಾಮೆ ಸಲ್ಲಿಸಿದ್ದಾರೆ.
ಇನ್ನೂ ಕೆಲವು ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಅಲ್ಲದೆ ಅವಕಾಶ ವಂಚಿತ ಶಾಸಕರ ಬೆಂಬಲಿಗರು, ಆಪ್ತರು ನಿನ್ನೆಯಿಂದ ಬೀದಿಗಿಳಿದು ಪ್ರತಿಭಟಿಸಿ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸದ್ಯಕ್ಕೆ ಖಾತೆ ಹಂಚಿಕೆ ಮಾಡದೇ ಮುಂದೂಡುವ ವಿಳಂಬ ತಂತ್ರವನ್ನು ಮುಖ್ಯಮಂತ್ರಿ ಡಿಕೆಶಿಯವರು ಅನುಸರಿಸುತ್ತಿದ್ದಾರೆ. ಪರಿಸ್ಥಿತಿ ತಿಳಿಯಾದ ನಂತರ ಖಾತೆ ಹಂಚಿಕೆ ಮಾಡಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.
