ಹನೂರು, ಮಾ.2- ತಾಲ್ಲೂಕಿನ ಪ್ರಸಿದ್ಧ ಪುಣ್ಯ ಕ್ಷೇತ್ರ ಶ್ರೀ ಮಲೈ ಮಹದೇಶ್ವರಸ್ವಾಮಿ ಹುಂಡಿಯಲ್ಲಿ 28 ದಿನಗಳಲ್ಲಿ 1.82 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಾಲೂರು ಬೃಹನ್ಮಠಾಧ್ಯಕ್ಷರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಕಾರ್ಯದರ್ಶಿ ರಘು ಎ.ಈ.ಗಳ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.
28 ದಿನಗಳಲ್ಲಿ 1.82 ಕೋಟಿ ರೂ. ನಗದು, 41 ಗ್ರಾಂ. ಚಿನ್ನ ಹಾಗೂ 1.200 ಕೆಜಿ ಬೆಳ್ಳಿ ಸಂಗ್ರಹವಾಗಿದೆ.
ಅಲ್ಲದೆ, 2000ರೂ. ನೋಟುಗಳು 14 ಹಾಗೂ ಐದು ಪೌಂಡ್ಸ್ ಒಂದು ನೋಟು, ಐದು ಡಾಲರ್ಸ್‍ನ ಮೂರು ವಿದೇಶಿ ನೋಟುಗಳು ಸಂಗ್ರಹವಾಗಿವೆ. ಮಹದೇಶ್ವರ ಬೆಟ್ಟದ ಖಾಸಗಿ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಮತ್ತು ಮ.ಬೆಟ್ಟ ಪೊಲೀಸರ ಬಂದೋಬಸ್ತ್ ನಲ್ಲಿ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾದ ಹುಂಡಿ ಹಣ ಎಣಿಕೆ ಕಾರ್ಯ ತಡರಾತ್ರಿ 8ರ ವರೆಗೂ ನಡೆಯಿತು.
ಹುಂಡಿ ಎಣಿಕೆ ಪ್ರಕ್ರಿಯೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ರಘು ಎ.ಈ. ಉಪ ಕಾರ್ಯದರ್ಶಿ ಚಂದ್ರಶೇಖರ ಜಿ.ಎಲ್., ಹಣಕಾಸು ಲೆಕ್ಕ ಪತ್ರ ಸಲಹೆಗಾರ ನಾಗೇಶ್, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಬ್ಯಾಂಕ್ ಅಫ್ ಬರೋಡಾ ವ್ಯವಸ್ಥಾಪಕರು ಈ ಸಂದರ್ಭದಲ್ಲಿದ್ದರು.