ಬೆಂಗಳೂರು,ಮಾ.2- ಸಾರಿಗೆ ಇಲಾಖೆಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಕಟ್ಟಡಗಳು ಮತ್ತು ವಾಹನ ಚಾಲನಾ ಪರೀಕ್ಷಾ ಪಥಗಳ ನಿರ್ಮಾಣ ಕಾಮಗಾರಿಗಳಿಗೆ ಸಂಬಂಧಿಸಿದಂತೆ 20 ಕೋಟಿ ರೂ.ಗಳ ಪರಿಷ್ಕøತ ಕ್ರಿಯಾ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ.
2023-24 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಆರ್‍ಟಿಓ ಕಟ್ಟಡಗಳು ಮತ್ತು ವಾಹನ ಚಾಲನೆ ಪರೀಕ್ಷಾ ದಾರಿಗಳು 386 ನಿರ್ಮಾಣದ ಅಡಿಯಲ್ಲಿ ಸಾರಿಗೆ ಇಲಾಖೆಗೆ 20 ಕೋಟಿ ರೂ. ಅನುದಾನ ಒದಗಿಸಲಾಗಿದೆ.
ವಿಜಯಪುರ, ಕೊಪ್ಪಳ, ಶಿರಸಿ, ಬೀದರ್, ಕಲಬುರಗಿ, ದಾಂಡೇಲಿ, ಭಾಲ್ಕಿ, ಚಿಂತಾಮಣಿ, ಬೆಳಗಾವಿ, ಯಾದಗಿರಿ, ಚಂಚಾಪುರ, ಕೆಜಿಎಫ್, ಮಧುಗಿರಿ, ಗೋಕಾಕ್, ರಾಣೆಬೆನ್ನೂರು ಆರ್‍ಟಿಓ ಕಚೇರಿಗಳ ಒಳವಿನ್ಯಾಸ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಗೆ ಅನುಮೋದನೆ ನೀಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
ಕ್ರಿಯಾಯೋಜನೆ ಅನ್ವಯ ಮಾತ್ರ ಅನುಮೋದಿತ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು. ಕರ್ನಾಟಕ ಪಾರದರ್ಶಕ ಕಾಯ್ದೆಯನ್ವಯ ಕಡ್ಡಾಯ ಕಾಮಗಾರಿಗಳನ್ನು ಕೈಗೊಳ್ಳಬೇಕು. ಬಿಡುಗಡೆಯಾದ ಅನುದಾನವನ್ನು ಸಕ್ಷಮ ಪ್ರಾಧಿಕಾರದ ಅನುಮೋದನೆ ಇಲ್ಲದೆ ಬೇರೆ ಕಾಮಗಾರಿಗೆ ಬಳಸುವಂತಿಲ್ಲ. ಅನುದಾನವನ್ನು ಕಾಮಗಾರಿಗಳ ಟೆಂಡರ್ ಮೊತ್ತಕ್ಕೆ ಅನುಗುಣವಾಗಿ ಬಿಡುಗಡೆ ಮಾಡುವ ಷರತ್ತನ್ನು ವಿಧಿಸಲಾಗಿದೆ.