Friday, November 22, 2024
Homeರಾಜಕೀಯ | Politicsಪುಲ್ವಾಮದಲ್ಲಿ ಸ್ಪೋಟಕ್ಕೆ ಈವರೆಗೂ ಉತ್ತರ ಸಿಕ್ಕಿಲ್ಲ : ಸಚಿವ ಗುಂಡೂರಾವ್

ಪುಲ್ವಾಮದಲ್ಲಿ ಸ್ಪೋಟಕ್ಕೆ ಈವರೆಗೂ ಉತ್ತರ ಸಿಕ್ಕಿಲ್ಲ : ಸಚಿವ ಗುಂಡೂರಾವ್

ಮಂಗಳೂರು,ಮಾ.2- ಬೆಂಗಳೂರಿನ ವಿಧಾನಸೌಧದಲ್ಲಿ ಪಾಕಿಸ್ತಾನ ಪರವಾದ ಘೋಷಣೆಗಳನ್ನು ಕೂಗಿದ್ದರೆ ತಪ್ಪಿತಸ್ಥರಿಗೆ ಯಾರೂ ಬೆಂಬಲ ನೀಡುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಗೆ ಸಂಬಂಧಪಟ್ಟಂತೆ ಈಗಾಗಲೇ ಪೂರ್ವಭಾವಿಯಾಗಿ ಕೆಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ. ಅಲ್ಲಿ ನೈಜವಾಗಿ ನಡೆದಿರುವುದೇನು ಎಂಬ ಮಾಹಿತಿ ಖಚಿತವಾಗುವ ಮುನ್ನವೇ ಮಾಧ್ಯಮಗಳಲ್ಲಿ ಏಕಮುಖವಾದ ವರದಿಗಳು ಪ್ರಕಟವಾಗಿವೆ.

ಒಂದು ವೇಳೆ ಎಫ್‍ಎಸ್‍ಎಲ್ ವರದಿಯಲ್ಲಿ ಬೇರೆಯ ರೀತಿ ಮಾಹಿತಿ ಬಂದರೆ ಅದನ್ನು ಇಷ್ಟೇ ಪ್ರಖರವಾಗಿ ಪ್ರಚಾರ ಮಾಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ. ಅದನ್ನು ಯಾರೂ ಸಹಿಸುವುದಿಲ್ಲ. ಶಂಕಾಸ್ಪದರನ್ನು ವಶಕ್ಕೆ ಪಡೆದು ಪೂರ್ವಭಾವಿಯಾಗಿ ವಿಚಾರಣೆ ನಡೆಸಲಾಗಿದೆ. ಎಫ್‍ಎಸ್‍ಎಲ್ ವರದಿ ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.

ನಿನ್ನೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದಿರುವ ಬಾಂಬ್ ಸ್ಪೋಟ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುತ್ತಿದೆ. ಈ ವಿಷಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಹಾಗೂ ಗೃಹಸಚಿವರು ಈಗಾಗಲೇ ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದ್ದಾರೆ. ಬಿಜೆಪಿಯವರು ಎಲ್ಲಾ ವಿಷಯದಲ್ಲೂ ರಾಜಕೀಯ ಮಾಡುತ್ತಾರೆ. ಅವರಿಗೆ ಅದನ್ನು ಬಿಟ್ಟು ಬೇರೆ ವಿಷಯಗಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಮೊದಲು ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಬಾಂಬ್‍ಸ್ಪೋಟ ಆಗಿ ಸಿಆರ್‍ಪಿಎಫ್ ಯೋಧರು ಹುತಾತ್ಮರಾಗಿದ್ದರು. ಬಿಗಿ ಭದ್ರತೆಯ ಪ್ರದೇಶದಲ್ಲಿ 150 ಕೆಜಿ ಆರ್‍ಡಿಎಕ್ಸ್ ಅನ್ನು ಹೇಗೆ ತೆಗೆದುಕೊಂಡು ಹೋಗಲಾಗಿತ್ತು ಎಂಬ ಪ್ರಶ್ನೆಗೆ ಈವರೆಗೂ ಉತ್ತರ ಸಿಕ್ಕಿಲ್ಲ. ಭದ್ರತೆಯಲ್ಲಿ ಲೋಪವಾಗಿತ್ತು ಎಂದು ಆಗಿನ ಲೆಫ್ಟಿನಂಟ್ ಜನರಲ್ ಸತ್ಯಪಾಲ್ ಮಲ್ಲಿಕ್ ಹೇಳಿಕೆ ನೀಡಿದ್ದರು. ಅದಕ್ಕೂ ಕೇಂದ್ರ ಸರ್ಕಾರದ ಬಳಿ ಸ್ಪಷ್ಟ ಉತ್ತರ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

RELATED ARTICLES

Latest News