ಬೆಂಗಳೂರು,ಆ.5- ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ಸಚಿವ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ ಬಹುತೇಕ ಪೂರ್ಣ ಹಂತಕ್ಕೆ ಬಂದಿದ್ದು, ಇಂದು ಅಥವಾ ನಾಳೆ ಪ್ರಕಟಗೊಳ್ಳುವ ಸಾಧ್ಯತೆಯಿದೆ. ನೂತನ ಹಾಗೂ ಹಾಲಿ ಸಚಿವರ ಖಾತೆ ಹಂಚಿಕೆ ವೇಳೆ ಹಿರಿಯರಿಗೆ ಪ್ರಮುಖ ಖಾತೆಗಳು ನೀಡಲಾಗುತ್ತಿದೆ. ಪ್ರಮುಖವಾಗಿ ಜಲ ಸಂಪನೂಲ ಖಾತೆ ಬೇಡ ಎಂದು ಈಗಾಗಲೆ ಹೇಳಿರುವ ರಾಮಲಿಂಗರೆಡ್ಡಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿರುವ ಕೆಎಚ್ ಮುನಿಯಪ್ಪ ಅವರ ಖಾತೆಗಳು ಬಹುತೇಕ ಬದಲಾವಣೆ ನಿಶ್ಚಿತವಾಗಿದೆ.
ಈಗಾಗಲೆ ಆಹಾರ ಸಚಿವರಾಗಿರುವ ಕೆಎಚ್ ಮುನಿಯಪ್ಪ ಅವರಿಗೆ ಸಮಾಜ ಕಲ್ಯಾಣ ಖಾತೆ ರಾಮಲಿಂಗಾರೆಡ್ಡಿ ಅವರಿಗೆ ಮುಜರಾಯಿ ಹಾಗೂ ಪೌರಾಡಳಿತ ಖಾತೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆಯೇ ಇಬ್ಬರು ನಾಯಕರು ತಮಗೆ ಬೇರೆ ಖಾತೆಯ ಜವಾಬ್ದಾರಿ ನೀಡುವಂತೆ ಮನವಿ ಮಾಡಿದ್ದರು. ಆದರೆ ಪೂರ್ಣಪ್ರಮಾಣದ ಸಚಿವ ಸಂಪುಟ ಬಂದಾಗ ಖಾತೆಗಳ ಬದಲಾವಣೆ ಮಾಡುವ ಬಗ್ಗೆ ವರಿಷ್ಠರು ಭರವಸೆ ನೀಡಿದ್ದರು.
ಈಗಾಗಲೇ ಕೆಎಚ್ ಮುನಿಯಪ್ಪ ಅವರಿಗೆ ಸಮಾಜ ಕಲ್ಯಾಣ ಖಾತೆ ನೀಡುವ ಮೂಲಕ ಅವರ ಕೇಂದ್ರ ಹಾಗೂ ರಾಜ್ಯದ ಆಡಳಿತದಲ್ಲಿ ಅನುಭವ ಸದುಪಯೋಗಪಡಿಸಿಕೊಂಡು ಹೊಸ ಯೋಜನೆಯ ಮೂಲಕ ಜನಮನ ಸೆಳೆಯಲು ನಿರ್ಧರಿಸಲಾಗಿದೆ. ಸವಾಲಿನ ನಡುವೆಯೇ ಈಗಾಗಲೇ ಆಹಾರ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಿ ಮುನಿಯಪ್ಪ ಅವರಿಗೆ ಸಮಾಜ ಕಲ್ಯಾಣ ಖಾತೆಯ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬಲ ಹೆಚ್ಚಿಸಿಕೊಳ್ಳಲು ಕೂಡ ವರಿಷ್ಠರು ನಿರ್ಧರಿಸಿದ್ದಾರೆ.
ಇದೇ ರೀತಿ ಮುನಿಯಪ್ಪ ಅವರು ಕೂಡ ಈ ಖಾತೆಗಾಗಿ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದು, ಸಕಾರಾತಕವಾಗಿ ಪ್ರತಿಕ್ರಿಯೆ ವ್ಯಕ್ತವಾಗಿದೆಯೆಂದು ಮೂಲಗಳು ತಿಳಿಸಿವೆ.
ದಲಿತ ಎಡಗೈ ಸಮುದಾಯದ ಪ್ರಬಲ ಸಚಿವರು ಹಾಗೂ ಸಂಪುಟದ ಅತ್ಯಂತ ಹಿರಿಯ ಸಚಿವರು ಏಳು ಬಾರಿ ಸಂಸದರಾಗಿ ಕೇಂದ್ರದಲ್ಲಿ ಮೂರು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿರುವ ಮುನಿಯಪ್ಪ ಅವರಿಗೆ ಸಮಾಜ ಕಲ್ಯಾಣ ಖಾತೆ ನೀಡುವುದು ಬಹುತೇಕ ನಿಶ್ಚಿತವಾಗಿದೆ. ಇದೇ ರೀತಿ ಇನ್ನು ಹಲವರು ಸಚಿವರ ಖಾತೆಗಳು ಬದಲಾವಣೆ ಆಗುವುದು ಬಹುತೇಕ ನಿಶ್ಚಿತವಾಗಿದೆ.
