ಲಖನೌ, ಆ.4-ಅಯೋಧ್ಯೆಯ ರಾಮಮಂದಿರದ ದೇಣಿಗೆ ಹಣ ಕಳುವಾಗಿದೆ ಎಂಬ ಆರೋಪದ ಕುರಿತು ಸಮಾಜವಾದಿ ಪಕ್ಷ (ಎಸ್ಪಿ) ಸದಸ್ಯರು ನಡೆಸಿದ ಪ್ರತಿಭಟನೆಯಿಂದ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಭಾರೀ ಗದ್ದಲ ನಡುವೆ 11 ಮಸೂದೆಗಳು ಅಂಗೀಕಾರಗೊಂಡಿದೆ.
ಬೆಳಿಗ್ಗೆ 11 ಗಂಟೆಗೆ ಸದನ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷದ ನಾಯಕ ಮಾತಾ ಪ್ರಸಾದ್ ಪಾಂಡೆ ಅವರು, ರಾಮಮಂದಿರದ ದೇಣಿಗೆ ಕಳವು ಪ್ರಕರಣವು ಜನರ ಭಾವನೆಗಳಿಗೆ ಸಂಬಂಧಿಸಿದ ವಿಷಯವಾಗಿದ್ದು, ಇದರ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಆದರೆ ಸಭಾಧ್ಯಕ್ಷ ಸತೀಶ್ ಮಹಾನಾಅವರು ಚರ್ಚೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಸದಸ್ಯರು ಸಭಾಧ್ಯಕ್ಷರ ಆಸನದ ಎದುರಿನ ಭಾಗಕ್ಕೆ (ವೆಲ್) ಧಾವಿಸಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷರು, ನೀವು ರಾಮಮಂದಿರ ನಿರ್ಮಾಣಕ್ಕೆ ಯಾವುದೇ ದೇಣಿಗೆ ನೀಡಿದ್ದರೆ ಅದರ ರಸೀದಿಗಳನ್ನು ತೋರಿಸಿ, ಎಂದು ಪ್ರತಿಭಟನಾ ನಿರತ ಸದಸ್ಯರಿಗೆ ಹೇಳಿದರು.
ಇದಕ್ಕೆ ಪ್ರತಿಯಾಗಿ ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಖನ್ನಾ ಸಮಾಜವಾದಿ ಪಕ್ಷದ ಆಡಳಿತಾವಧಿಯಲ್ಲಿ ಕಾರ್ ಸೇವಕರ ಮೇಲೆ ನಡೆದ ಗುಂಡಿನ ದಾಳಿಯನ್ನು ಉಲ್ಲೇಖಿಸಿ, ಜನರ ಧಾರ್ಮಿಕ ನಂಬಿಕೆಗಳೊಂದಿಗೆ ಆ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಟೀಕಿಸಿದರು.
ಗದ್ದಲದ ನಡುವೆಯೇ ಪ್ರಶ್ನೋತ್ತರ ಅವಧಿಯನ್ನು ಸ್ಥಗಿತಗೊಳಿಸಿದ ಸಭಾಧ್ಯಕ್ಷರು, ಸದನವನ್ನು ಮಧ್ಯಾಹ್ನ 12.20ರವರೆಗೆ ಮುಂದೂಡಿದರು.ನಂತರ ಸದನ ಆರಂಭವಾದಾಗ ಪ್ರತಿಭಟನೆ ನಡುವೆಯೂ ವಿಧಾನಸಭೆಯು ಧ್ವನಿ ಮತದ ಮೂಲಕ 11 ಮಸೂದೆಗಳನ್ನುಅಂಗೀಕರಿಸಿತು.
ಇವುಗಳಲ್ಲಿ ಉತ್ತರ ಪ್ರದೇಶ ಸಾರ್ವಜನಿಕ ಸೇವೆಗಳ ನ್ಯಾಯಮಂಡಳಿ (ತಿದ್ದುಪಡಿ) ಮಸೂದೆ2026 ಪ್ರಮುಖವಾಗಿದ್ದು, ಇದರಡಿ ನ್ಯಾಯಮಂಡಳಿಯ ಅಧ್ಯಕ್ಷರ ನಿವೃತ್ತಿ ವಯಸ್ಸನ್ನು 65ರಿಂದ 67 ವರ್ಷಕ್ಕೆಹಾಗೂ ಉಪಾಧ್ಯಕ್ಷರು ಮತ್ತು ಸದಸ್ಯರ ನಿವೃತ್ತಿ ವಯಸ್ಸನ್ನು 62ರಿಂದ 65 ವರ್ಷಕ್ಕೆ ಹೆಚ್ಚಿಸಲಾಗಿದೆ.
ಇದಲ್ಲದೆ, ದೇಶ ವಿಭಜನೆ ಹಾಗೂ 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಬಳಿಕ ಉತ್ತರ ಪ್ರದೇಶದಲ್ಲಿ ನೆಲೆಸಿರುವ ಸ್ಥಳಾಂತರಿತ ಕುಟುಂಬಗಳಿಗೆ ಭೂ ಮಾಲೀಕತ್ವದ ಹಕ್ಕು ನೀಡುವ ಉತ್ತರ ಪ್ರದೇಶ ಕಂದಾಯ ಸಂಹಿತೆ ತಿದ್ದುಪಡಿ ಮಸೂದೆಗೂ ಸದನ ಅನುಮೋದನೆ ನೀಡಿದೆ.
