ಬೆಂಗಳೂರು,ಆ.5- ಪಶುವೈದ್ಯಾಧಿಕಾರಿ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರ ವಿಚಾರಣೆ ಪೂರ್ಣಗೊಂಡಿದ್ದು, ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸೇರಿದಂತೆ ಅಕ್ರಮವಾಗಿ ಆಯ್ಕೆಯಾಗಿದ್ದಾರೆ ಎನ್ನಲಾದ 29 ಮಂದಿ ಅಭ್ಯರ್ಥಿಗಳಿಗೆ ಶೀಘ್ರವೇ ನೋಟಿಸ್ ಜಾರಿಗೊಳಿಸಲು ಸಿಐಡಿ ಅಧಿಕಾರಿಗಳು ಸಜ್ಜಾಗಿದ್ದಾರೆ.
ಹಾಸನ ಮೂಲದ ದೂರುದಾರ ಮಂಜುನಾಥ್ ಅವರನ್ನು ಸಿಐಡಿ ಕಚೇರಿಯಲ್ಲಿ ವಿಚಾರಣೆ ನಡೆಸಿದ ತನಿಖಾಧಿಕಾರಿಗಳು ಅವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಈ ವೇಳೆ ಮಂಜುನಾಥ್ ಅವರು ಮಧ್ಯವರ್ತಿಗಳು ಹಾಗೂ ಅಭ್ಯರ್ಥಿಗಳ ನಡುವಿನ ಧ್ವನಿಮುದ್ರಿಕೆ ಸೇರಿದಂತೆ ಹಲವು ಪ್ರಮುಖ ದಾಖಲೆಗಳನ್ನು ತನಿಖಾ ತಂಡಕ್ಕೆ ಒದಗಿಸಿದ್ದಾರೆ.
ಪಶುವೈದ್ಯಾಧಿಕಾರಿ ಹುದ್ದೆ ಪಡೆದಿರುವ 29 ಮಂದಿ ಅಭ್ಯರ್ಥಿಗಳ ಪೈಕಿ ಹಲವರ ಮೇಲೆ ಗಂಭೀರ ಅನುಮಾನಗಳಿವೆ. ಪರೀಕ್ಷೆ ನಡೆಯುವ ಹಿಂದಿನ ದಿನ ಈ ಅಭ್ಯರ್ಥಿಗಳು ತಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಹೀಗಾಗಿ, ಆ ನಿರ್ಣಾಯಕ ದಿನದಂದು ಇವರು ಎಲ್ಲಿದ್ದರು ? ಯಾರನ್ನು ಭೇಟಿಯಾಗಿದ್ದರು ಎಂಬ ಬಗ್ಗೆ ಸಿಐಡಿ ಮಾಹಿತಿ ಕಲೆಹಾಕಿದೆ.
ಮಾಜಿ ಅಧ್ಯಕ್ಷರಿಗೆ ಕುತ್ತು: ಕೆಪಿಎಸ್‌ಸಿ ಕಚೇರಿ ಮೇಲೆ ನಡೆಸಲಾದ ದಾಳಿಯ ವೇಳೆ ವಶಪಡಿಸಿಕೊಳ್ಳಲಾದ ಓಎಂಆರ್ ಶೀಟ್‌ಗಳ ಪರಿಶೀಲನೆ ಈಗ ಅಂತಿಮ ಹಂತದಲ್ಲಿದೆ. ಈ ವರದಿ ಹಾಗೂ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಎರಡುಮೂರು ದಿನಗಳಲ್ಲಿ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಯಲು ನಿರ್ಧರಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಮಂಜುನಾಥ್ ಅವರು, ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ದೊಡ್ಡ ಮಟ್ಟದ ಅವ್ಯವಹಾರ ಹಾಗೂ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದರು. ಈ ಸಂಬಂಧ ಕೆಪಿಎಸ್‌ಸಿ ಅಧ್ಯಕ್ಷರು, ಸದಸ್ಯರು ಹಾಗೂ ಅಕ್ರಮವಾಗಿ ಹುದ್ದೆ ಗಿಟ್ಟಿಸಿಕೊಂಡಿರುವ 29 ಅಭ್ಯರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಎಫ್‌ಐಆರ್ ಆಧರಿಸಿ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಅಧಿಕಾರಿಗಳು, ಮೇಲಟ್ಟದ ಪ್ರಭಾವಿಗಳು ಹಾಗೂ ಅಕ್ರಮದಲ್ಲಿ ಭಾಗಿಯಾದವರ ಪಾತ್ರದ ಬಗ್ಗೆ ತನಿಖೆಯನ್ನು ಚುರುಕುಗೊಳಿಸಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಸ್ಪೋಟಕ ಮಾಹಿತಿ ಹೊರಬರುವ ನಿರೀಕ್ಷೆಯಿದೆ.
