ಬೆಂಗಳೂರು,ಆ.11- ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಹಿನ್ನೆಲೆಯಲ್ಲಿ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದ ಕನ್ನಡಪರ ಸಂಘಟನೆಗಳಲ್ಲಿ ಒಮತದ ಕೊರತೆ ಕಂಡುಬಂದಿದೆ. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವ ತೀರ್ಪಿನ ವಿರುದ್ದ ಇದೇ 13ರಂದು ಕನ್ನಡಪರ ಚಳುವಳಿ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಅಖಿಲ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿತ್ತು.
ಕಾವೇರಿ ಜಲಾಯನ ಪ್ರದೇಶದಲ್ಲಿ ಮಳೆ ಕೊರತೆ ಉಂಟಾಗಿ ಆ ಭಾಗದ ಜಲಾಶಯಗಳಲ್ಲಿ ನೀರಿನ ಕೊರತೆ ಇತ್ತು. ನಂತರದ ಬೆಳವಣಿಗೆಯಲ್ಲಿ ಜಲಾನಯನ ಪ್ರದೇಶದಲ್ಲಿ ಮಳೆಯಾಗಿ ಜಲಾಶಯಗಳಿಗೆ ನೀರು ಹರಿದುಬಂದು ತಮಿಳು ನಾಡಿಗೆ ನೀರನ್ನು ಬಿಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಕರ್ನಾಟಕ ಬಂದ್ ಆಚರಣೆ ಬಗ್ಗೆ ಕನ್ನಡಪರ ಸಂಘಟನೆಗಳಲ್ಲಿ ಗೊಂದಲ ಉಂಟಾಗಿದೆ. ಆ.13ರಂದು ನಿಗದಿಯಂತೆ ಬಂದ್ ಆಚರಣೆ ಮಾಡೇ ಮಾಡುತ್ತೇವೆ ಎಂದು ವಾಟಾಳ್ ನಾಗರಾಜ್ ಅವರು ಖಂಡಾತುಂಡವಾಗಿ ಹೇಳಿದ್ದಾರೆ. ಆದರೆ ಕನ್ನಡಪರ ಸಂಘಟನೆಗಳ ಮುಖಂಡರಾದ ಪ್ರವೀಣ್‌ಕುಮಾರ್ ಶೆಟ್ಟಿ, ಶಿವರಾಮೇಗೌಡ, ಸಾ.ರಾ.ಗೋವಿಂದು ಮತ್ತಿತರರು ಸದ್ಯದ ಪರಿಸ್ಥಿತಿಯಲ್ಲಿ ಬಂದ್ ಮಾಡುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಈಗಾಗಲೇ ಜಲಾನಯನ ಪ್ರದೇಶದಲ್ಲಿ ಮಳೆಯಾಗಿ ತಮಿಳುನಾಡಿಗೆ ನಾಲ್ಕೂವರೆ ಟಿಎಂಸಿ ನೀರು ಬಿಡಲಾಗಿದೆ. ಜಲಾಶಯಗಳಲ್ಲಿ ಸ್ವಲ್ಪ ಪ್ರಮಾಣದ ನೀರು ಸಂಗ್ರಹವಾಗಿದೆ. ಇಂತಹ ಸಂದರ್ಭದಲ್ಲಿ ನಾವು ಬಂದ್ ಮಾಡುವುದು ಸಮಂಜಸವೇ ಎಂದು ಹೋರಾಟಗಾರರು ಚರ್ಚೆ ನಡೆಸಿದ್ದಾರೆ.
ಬಂದ್‌ಗೆ ಬೆಂಬಲ ನೀಡುವಂತೆ ಹೋಟೆಲ್ ಮಾಲೀಕರ ಸಂಘವಾಗಲಿ, ಇನ್ನಿತರ ಸಂಘವಾಗಲಿ ಈವರೆಗೆ ಬಂದ್ ಆಯೋಜಕರು ಪತ್ರ ಬರೆದು ಮನವಿ ಮಾಡಿಲ್ಲ ಎಂದು ತಿಳಿದುಬಂದಿದೆ.
ಬಂದ್ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ರೂಪುರೇಷೆ ಹಾಗೂ ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲು ನಾಳೆ ಬೆಳಗ್ಗೆ ಪ್ರವೀಣ್ ಕುಮಾರ್ ಶೆಟ್ಟಿ ನೇತೃತ್ವದ ಕರವೇ ಬಣ ಸಭೆ ಕರೆದಿದೆ.
ವಾಟಾಳ್ ನೇತೃತ್ವದಲ್ಲಿ ಈಗಾಗಲೇ ಮೈಸೂರು, ಮಂಡ್ಯ, ಅತ್ತಿಬೆಲೆ ಗಡಿಯಲ್ಲಿ ಪ್ರತಿಭಟನೆಗಳನ್ನು ನಡೆಸಲಾಗಿದ್ದು, ಬಂದ್ ನಡೆಸಲು ತಯಾರಿ ಮಾಡಿಕೊಳ್ಳಲಾಗಿದೆ.
ಬಂದ್ ಯಾವ ಸ್ವರೂಪವಿರುತ್ತದೆ? ಹೋರಾಟಗಾರರು ಯಾವ ರೀತಿ ಪ್ರತಿಭಟನೆ ನಡೆಸಲಿದ್ದಾರೆ? ಬಂದ್ ಮಾಡುತ್ತಾರೆಯೇ? ಅಥವಾ ಹಿಂದೆ ಸರಿಯಲಿದ್ದಾರೆಯೇ? ಬಂದ್ ಬದಲು ಬೇರೆಯ ರೀತಿಯ ಹೋರಾಟ ಮಾಡಲಿದ್ದಾರೆಯೇ ಎಂಬ ಬಗ್ಗೆ ಕಾದು ನೋಡಬೇಕು.
