Wednesday, May 1, 2024
Homeರಾಷ್ಟ್ರೀಯಮುಂದಿನ ವಾರ ಲೋಕಸಭೆ ಮಹಾಸಮರಕ್ಕೆ ಮುಹೂರ್ತ

ಮುಂದಿನ ವಾರ ಲೋಕಸಭೆ ಮಹಾಸಮರಕ್ಕೆ ಮುಹೂರ್ತ

ನವದೆಹಲಿ,ಮಾ.7- ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿರುವ ಲೋಕಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಇದೇ ತಿಂಗಳ 14 ಅಥವಾ 15ರಂದು ದಿನಾಂಕವನ್ನು ಪ್ರಕಟಿಸಲಿದೆ.

ಒಟ್ಟು 543 ಲೋಕಸಭಾ ಕ್ಷೇತ್ರಗಳಿಗೆ ಕಳೆದ ಬಾರಿಯಂತೆ ಈ ಬಾರಿಯೂ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ ತಿಂಗಳ ಕೊನೆಯವಾರ ಇಲ್ಲವೇ ಮೇ ಮೊದಲ ವಾರದಲ್ಲಿ ಮತದಾನ ನಡೆಯುವ ಸಂಭವವಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ. ಗುರುವಾರ ಅಥವಾ ಶುಕ್ರವಾರ ದಿನಾಂಕವನ್ನು ಘೋಷಣೆ ಮಾಡಲು ಚುನಾವಣಾ ಆಯೋಗ ಸಿದ್ಧತೆಯನ್ನು ಕೈಗೊಂಡಿದ್ದು, ಅಂದಿನಿಂದಲೇ ದೇಶಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಯಾವುದೇ ಹೊಸ ಯೋಜನೆಗಳನ್ನು ಘೋಷಣೆ ಮಾಡುವಂತಿಲ್ಲ ಅಥವಾ ಚುನಾವಣಾ ಆಯೋಗದ ಪೂರ್ವಾನುಮತಿ ಪಡೆಯದೆ ಸರ್ಕಾರಿ

ಕಾರ್ಯಕ್ರಮಗಳಲ್ಲೂ ಭಾಗವಹಿಸುವಂತಿಲ್ಲ:
ಪ್ರಧಾನಮಂತ್ರಿ ಹಾಗೂ ಅತಿ ಗಣ್ಯ ವ್ಯಕ್ತಿಗಳನ್ನು ಹೊರತುಪಡಿಸಿ ಸಚಿವರು, ಶಾಸಕರು, ಸಂಸದರು ಸೇರಿದಂತೆ ಯಾವುದೇ ಜನಪ್ರತಿನಿಧಿಗಳು ಸರ್ಕಾರಿ ವಾಹನಗಳನ್ನು ಬಳಸುವಂತಿಲ್ಲ. ಆಯೋಗದ ಅನುಮತಿ ಪಡೆಯಬೇಕಾಗುತ್ತದೆ. 16ನೇ ಲೋಕಸಭೆ ಚುನಾವಣೆಗೆ ಆಯೋಗವು ಮತದಾರರ ಪಟ್ಟಿ, ಭದ್ರತಾ ವ್ಯವಸ್ಥೆ, ಇವಿಎಂ, ಮತ ಎಣಿಕೆ ಕೇಂದ್ರಗಳು ಸೇರಿದಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಂಡಿದೆ.

ಆಯಾ ರಾಜ್ಯಗಳಲ್ಲಿ ನಡೆಯುವ ಪರೀಕ್ಷೆಗಳು, ಧಾರ್ಮಿಕ ಹಬ್ಬಗಳನ್ನು ನೋಡಿಕೊಂಡು ಚುನಾವಣೆಯ ದಿನಾಂಕವನ್ನು ನಿಗದಿಪಡಿಸಲಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ದಿನಾಂಕವನ್ನು ನಿಗದಿಪಡಿಸಲಿದೆ.

2019ರಲ್ಲಿ 543 ಲೋಕಸಭಾ ಕ್ಷೇತ್ರಗಳಿಗೆ ಆಯೋಗ ಏಳು ಹಂತದ ಮತದಾನವನ್ನು ನಡೆಸಿತ್ತು. ಈ ಬಾರಿಯೂ ಆಯೋಗ ಏಳು ಹಂತಗಳಲ್ಲೇ ಚುನಾವಣೆಯನ್ನು ನಡೆಸಲಿದೆ ಎಂದು ಗೊತ್ತಾಗಿದೆ. ದೇಶದ ಅತಿದೊಡ್ಡ ರಾಜ್ಯವಾದ ಉತ್ತರಪ್ರದೇಶದಲ್ಲಿ ಐದು ಹಂತಳಲ್ಲಿ ಮತದಾನ ನಡೆದರೆ ನಕ್ಸಲ್ ಪೀಡಿತ ರಾಜ್ಯಗಳಾದ ಛತ್ತೀಸ್‍ಗಢ, ಜಾರ್ಖಂಡ್‍ನಲ್ಲಿ ನಾಲ್ಕು ಹಂತ, ಮಹಾರಾಷ್ಟ್ರ, ಬಿಹಾರ ಹಾಗೂ ಪಶ್ಚಿಮ ಬಂಗಾಳದಲ್ಲಿ ಎರಡು ಹಂತದ ಮತದಾನ ನಡೆಯಲಿದೆ.

ಉಗ್ರರ ಉಪಟಳವಿರುವ ಕಣಿವೆ ರಾಜ್ಯವಾಗಿದ್ದ ಈಗ ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು-ಕಾಶ್ಮೀರದಲ್ಲಿ 5 ಹಂತದ ಮತದಾನ ನಡೆಸಲು ಆಯೋಗ ಸಜ್ಜಾಗಿದೆ. ಮೊದಲ ಹಂತದ ಮತದಾನ ಏಪ್ರಿಲ್ ಎರಡನೇ ವಾರದಲ್ಲಿ ನಡೆಯಬಹುದು. ಮಾರ್ಚ್ 14ರಿಂದ ಮಾದರಿ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇದೆ. ಮಾರ್ಚ್ 13ರೊಳಗೆ, ಭಾರತದ ಚುನಾವಣಾ ಆಯೋಗವು ರಾಜ್ಯಗಳಲ್ಲಿ ತನ್ನ ಮೌಲ್ಯಮಾಪನವನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ. ಸುಮಾರು 97 ಕೋಟಿ ಭಾರತೀಯರು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ.

2024ರ ಲೋಕಸಭಾ ಚುನಾವಣೆಯ ಜೊತೆಗೆ, ಆಂಧ್ರಪ್ರದೇಶ, ಸಿಕ್ಕಿಂ, ಅರುಣಾಚಲಪ್ರದೇಶ ಮತ್ತು ಒಡಿಶಾ ರಾಜ್ಯಗಳು ಆಯಾ ರಾಜ್ಯ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಲಿವೆ. ಇದರ ವೇಳಾಪಟ್ಟಿಯನ್ನು ಚುನಾವಣಾ ಆಯೋಗವು ಶೀಘ್ರದಲ್ಲೇ ಪ್ರಕಟಿಸಲಿದೆ. 2019ರಲ್ಲಿ ನಡೆದ ಕೊನೆಯ ಚುನಾವಣೆಗಳಲ್ಲಿ ಬಿಜೆಪಿ 303 ಸ್ಥಾನಗಳೊಂದಿಗೆ ಎರಡನೇ ಬಾರಿಗೆ ಗೆಲುವು ಸಾಧಿಸಿತ್ತು. ಇದೇ ವೇಳೆ ಕಾಂಗ್ರೆಸ್ ಕೇವಲ 52 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಬಾರಿ ಬಿಜೆಪಿಗೆ ಬರೋಬ್ಬರಿ 370 ಸ್ಥಾನಗಳು ಮತ್ತು ಎನ್‍ಡಿಎಗೆ 400 ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಹೊಂದಿದೆ. ಕಾಂಗ್ರೆಸ್ ಕನಿಷ್ಠ 40 ಸ್ಥಾನಗಳನ್ನಾದರೂ ಗೆಲ್ಲಲಿ ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಈಗಾಗಲೇ ತನ್ನ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ, ಕೇಸರಿ ಪಕ್ಷವು ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಶಿವರಾಜ್‍ಸಿಂಗ್ ಚೌಹಾಣ್ ಮತ್ತು ವಿಪ್ಲವ್‍ಕುಮಾರ್ ದೇವ್ ಅವರನ್ನು ಕಣಕ್ಕಿಳಿಸಿದೆ. ಏತನ್ಮಧ್ಯೆ ಐಎನ್‍ಡಿಐಎ ಮೈತ್ರಿಕೂಟದ ಸದಸ್ಯರೊಂದಿಗೆ ಸೀಟು ಹಂಚಿಕೆ ಮಾತುಕತೆ ನಡೆಯುತ್ತಿರುವುದರಿಂದ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಬಗ್ಗೆ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ.

RELATED ARTICLES

Latest News