ಬೆಂಗಳೂರು,ಮಾ.8- ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಕೆಲವು ಹಾಲಿ ಸಂಸದರಿಗೆ ವಯಸ್ಸು ಹಾಗೂ ಅನಾರೋಗ್ಯ ಕಾರಣದಿಂದಾಗಿ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎಂಬ ಸುಳಿವನ್ನು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಎರಡು ದಿನಗಳ ಕಾಲ ದೆಹಲಿಯಲ್ಲಿ ಸಭೆ ನಡೆಸಲಾಗಿದೆ. ಒಂದು ಸುತ್ತಿನ ಮಾತುಕತೆ ನಡೆದಿದೆ. ರಾಜ್ಯ ಕೋರ್ ಕಮಿಟಿ ಕಳುಹಿಸಿದ್ದ ಪಟ್ಟಿ ಬಗ್ಗೆ ಚರ್ಚೆಯಾಗಿದೆ. ಸವಿಸ್ತಾರವಾಗಿ ವರಿಷ್ಠರ ಜೊತೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.
ವರಿಷ್ಠರು ಅಭ್ಯರ್ಥಿಗಳ ಮಾಹಿತಿ ಮತ್ತು ಅವರ ಹಿನ್ನೆಲೆಯನ್ನು ತೆಗೆದುಕೊಂಡಿದ್ದಾರೆ. ಕೆಲವರನ್ನು ವಯಸ್ಸು, ಆರೋಗ್ಯ ಕಾರಣದಿಂದ ಬದಲಾವಣೆ ಮಾಡಲಾಗುತ್ತದೆ. ಚರ್ಚೆ ಬಹುತೇಕ ಒಂದು ಹಂತಕ್ಕೆ ಬಂದಿದೆ. ಗೊಂದಲ ಇರುವ ಕ್ಷೇತ್ರಗಳ ಬಗ್ಗೆ ಚರ್ಚೆಯಾಗಬೇಕಿದೆ ಎಂದರು. ಹೈಕಮಾಂಡ್ ನಾಯಕರಿಗೆ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಹೈಕಮಾಂಡ್ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಯಾರಿಗೆ ಟಿಕೆಟ್ ಯಾರಿಗೆ ಇಲ್ಲ ಅನ್ನೋದು ಮುಖ್ಯ ಅಲ್ಲ. ಯಾರಿಗೇ ಕೊಟ್ಟರೂ ನಾವು ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಈ ಬಾರಿ ಹೊಸ ಮುಖಗಳಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಇನ್ನೊಂದು ಸುತ್ತಿನ ಮಾತುಕತೆ ನಡೆದ ಬಳಿಕ ಪಟ್ಟಿ ಬಿಡುಗಡೆ ಮಾಡುತ್ತಾರೆ. ಯಾವ ಕ್ಷೇತ್ರದಲ್ಲಿ ಸಮಸ್ಯೆ ಇದೆಯೋ ಅಲ್ಲಿ ಮತ್ತೊಮ್ಮೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತಾರೆ. ಮೈಸೂರು, ಮಂಡ್ಯ, ಕಲಬುರಗಿ, ಹಾಸನ ಎಲ್ಲಾ ಕ್ಷೇತ್ರಗಳ ಬಗ್ಗೆ ಚರ್ಚೆಯಾಗಿದೆ. ಹಾಲಿ ಉತ್ತಮ ಸಂಸದರಿಗೆ ಮತ್ತೊಮ್ಮೆ ಅವಕಾಶ ಕೊಡುವ ಬಗ್ಗೆ ಚರ್ಚೆಯಾಗಿದೆ ಎಂದು ತಿಳಿಸಿದರು.
ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಯಾರನ್ನು ಅಭ್ಯರ್ಥಿ ಮಾಡಬೇಕು ಎಂಬುದರ ಬಗ್ಗೆ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಮುಂದಿನ ತೀರ್ಮಾನ ವರಿಷ್ಠರಿಗೆ ಬಿಟ್ಟಿದ್ದು. ಜೆಡಿಎಸ್ ನಾಯಕರು ಇನ್ನು ಎರಡು-ಮೂರು ದಿನಗಳಲ್ಲಿ ದೆಹಲಿಗೆ ಹೋಗುತ್ತಾರೆ. ಅವರು ಯಾವ ಕ್ಷೇತ್ರದಲ್ಲಿ ಸೀಟು ಕೇಳುತ್ತಾರೋ ಅದನ್ನು ಬಿಟ್ಟು ಕೊಡುವ ಬಗ್ಗೆ ವರಿಷ್ಠರೊಂದಿಗೆ ಮಾತಾಡುತ್ತಾರೆ. ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಾರೆ ಎಂದರು.
ಮಂಡ್ಯದಲ್ಲಿ ಬಿಜೆಪಿಯಿಂದ ಶೇ.500ರಷ್ಟು ನಾನೇ ಸ್ಪರ್ಧೆ ಮಾಡುತ್ತೇನೆ ಎಂಬ ಬಗ್ಗೆ ಸಂಸದೆ ಸುಮಲತಾ ಹೇಳಿಕೆ ವಿಚಾರವಾಗಿ ಮಾತನಾಡಿದ ಅಶೋಕ್, ಸುಮಲತಾ ಅಂಬರೀಶ್ ನಮಗೆ ಬರೀ ಬೆಂಬಲ ಅಷ್ಟೇ ಕೊಟ್ಟಿದ್ದಾರೆ. ಆದರೆ ಅವರು ಇನ್ನೂ ಪಕ್ಷಕ್ಕೆ ಸೇರಿಲ್ಲ. ಹೀಗಾಗಿ ಅವರ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು. ರಾಜ್ಯದಲ್ಲಿರುವ ಕಾಂಗ್ರೆಸ್ ಆಡಳಿತ ಎಡಬಿಡಂಗಿ ಸರ್ಕಾರವಾಗಿದೆ. ಮನಸ್ಸಿಗೆ ಬಂದಂತೆ ಐದು ಗ್ಯಾರಂಟಿ ಘೋಷಿಸಿ ಅದನ್ನು ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಬೇಜವಾಬ್ದಾರಿಯಿಂದ ಕೆಆರ್‍ಎಸ್ ನೀರನ್ನು ತಮಿಳುನಾಡಿಗೆ ಬಿಟ್ಟು ಕೊಟ್ಟಿದ್ದಾರೆ. ಇದೇ ಕಾರಣ ಇವತ್ತು ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಆಗಿರುವುದಕ್ಕೆ ಇಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಬೆಂಗಳೂರಿನ ವಾರ್ಡ್ ಮಟ್ಟದಲ್ಲಿ ಒಂದು ಸಭೆಯನ್ನೂ ಮಾಡಿಲ್ಲ. ಕೋವಿಡ್ ಸಂದರ್ಭದಲ್ಲಿ ಸಭೆ ಮಾಡಿ ಸಮರ್ಥವಾಗಿ ನಿಭಾಯಿಸಿದ್ದೇವೆ. ಕೇಂದ್ರ ಸರ್ಕಾರದ ಮೇಲೆ ಹೇಳುತ್ತೀರಲ್ಲಾ ನಾಚಿಕೆ ಆಗುವುದಿಲ್ಲವೇ? ಎಂದು ಕಿಡಿಕಾರಿದ ಅವರು, ರಾಜ್ಯದಲ್ಲಿ ಕುಡಿಯುವ ನೀರನ್ನು ಒದಗಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ರಾಜ್ಯದ ಹಣಕಾಸಿನ ಪರಿಸ್ಥಿತಿ ಪಾತಾಳಕ್ಕೆ ಇಳಿದಿದೆ ಎಂದು ಆರೋಪಿಸಿದರು.
ಕಾಂಗ್ರೆಸ್‍ನಲ್ಲಿ ದಲಿತ ಸಿಎಂಗಾಗಿ ಕೂಗು ವಿಚಾರವಾಗಿ ಇದೇ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ನಲ್ಲಿರುವ ದಲಿತರನ್ನು ಮುಖ್ಯಮಂತ್ರಿ ಅಲ್ಲ, ಉಪಮುಖ್ಯಮಂತ್ರಿಗಳನ್ನೂ ಮಾಡಲ್ಲ. ಪಾಪ ಸತೀಶ್ ಜಾರಕಿಹೊಳಿ, ಪರಮೇಶ್ವರ್ ಎಲ್ಲರು ಕ್ಯೂ ನಲ್ಲಿದ್ದಾರೆ. ಸಿದ್ದರಾಮಯ್ಯ ಮಗ ಬೇರೆ ನಮ್ಮ ಅಪ್ಪನೇ ಐದು ವರ್ಷ ಸಿಎಂ ಅಂತಾರೆ ಎಂದು ಅಶೋಕ್ ತಿರುಗೇಟು ನೀಡಿದರು.