Sunday, April 28, 2024
Homeರಾಷ್ಟ್ರೀಯರಾಜ್ಯಸಭೆಗೆ ಸುಧಾ ಮೂರ್ತಿಯವರನ್ನು ನಾಮನಿರ್ದೇಶನ ಮಾಡಿದ ರಾಷ್ಟ್ರಪತಿ ಮುರ್ಮು

ರಾಜ್ಯಸಭೆಗೆ ಸುಧಾ ಮೂರ್ತಿಯವರನ್ನು ನಾಮನಿರ್ದೇಶನ ಮಾಡಿದ ರಾಷ್ಟ್ರಪತಿ ಮುರ್ಮು

ನವದೆಹಲಿ,ಮಾ.8- ಸಾಹಿತಿ, ಲೇಖಕಿ ಹಾಗೂ ಇನೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾ ಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ಪ್ರಧಾನಿ ನರೇಂದ್ರಮೋದಿ ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಧಾ ಮೂರ್ತಿ ಅವರನ್ನು ನಾಮನಿರ್ದೇಶನ ಮಾಡಿರುವುದಕ್ಕೆ ಅಂಕಿತ ಹಾಕಿದ್ದಾರೆ.

ಶಿಕ್ಷಣ, ಸಮಾಜಸೇವೆ, ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಪರಿಮಿತ ಸೇವೆ ಸಲ್ಲಿಸಿರುವ ಸುಧಾ ನಾರಾಯಣಮೂರ್ತಿ ಅವರನ್ನು ಮಹಿಳಾ ದಿನಾಚರಣೆಯಂದೇ ರಾಜಸಭೆಗೆ ನಾಮನಿರ್ದೇಶನ ಮಾಡಿರುವುದು ನಾರಿಶಕ್ತಿಯ ಪ್ರಬಲ ಸಾಕ್ಷಿಯಾಗಿದೆ. ಇದು ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಮಹಿಳೆಯರ ಶಕ್ತಿ ಮತ್ತು ಸಾಮಥ್ರ್ಯವನ್ನು ಉದಾಹರಿಸುತ್ತದೆ. ಅವರ ಸಂಸದೀಯ ಸೇವೆ ಫಲಪ್ರದವಾಗಲಿ ಎಂದು ಪ್ರಧಾನಿ ಮೋದಿಯವರು ಶುಭ ಕೋರಿದ್ದಾರೆ.

ವಿಶ್ವದ ಪ್ರಮುಖ ಐಟಿ ಕಂಪನಿಗಳಲ್ಲಿ ಒಂದಾಗಿರುವ ಇನೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರ ಪತ್ನಿಯಾಗಿರುವ ಸುಧಾಮೂರ್ತಿ ಅವರು ಸಾಹಿತ್ಯ, ಬರಹ, ಸಮಾಜಸೇವೆ, ಶಿಕ್ಷಣ ಮಹಿಳೆಯರ ಸಬಲೀಕರಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ತಮ್ಮನ್ನು ತೊಡಗಿಸಿಕೊಂಡಿದ್ದರು.

ಇನೋಸಿಸ್‍ನಂತಹ ದೈತ್ಯ ಕಂಪನಿಯ ಸಂಸ್ಥಾಪಕ ನಾರಾಯಣಮೂರ್ತಿ ಅವರ ಪತ್ನಿಯಾಗಿದ್ದರೂ ಅವರ ಸರಳತೆ, ಸಜ್ಜನಿಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಕಾರಣವಾಗಿತ್ತು. ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಸುಧಾಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ವಿವಾಹವಾಗಿದ್ದಾರೆ.

ಹಿನ್ನಲೆ:
ಸುಧಾ ಮೂರ್ತಿಯವರು ಆಗಸ್ಟ್ 19, 1950ರಂದು ಹಾವೇರಿಯ ಜಿಲ್ಲೆಯ ಶಿಗ್ಗಾಂವಿಯಲ್ಲಿ ಡಾ.ಆರ್.ಹೆಚ್.ಕುಲಕರ್ಣಿ ಮತ್ತು ವಿಮಲಾ ಕುಲಕರ್ಣಿ ದಂಪತಿಗೆ ಪುತ್ರಿಯಾಗಿ ಜನಿಸಿದರು. ಹುಬ್ಬಳ್ಳಿಯಲ್ಲಿರುವ ಕೆಎಲ್‍ಇ ಸಂಸ್ಥೆಯ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ, ನಂತರ ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಸುಧಾಮೂರ್ತಿ ಅವರು ಟಾಟಾ ಇಂಜಿನಿಯರಿಂಗ್ ಮತ್ತು ಲೊಕೊಮೊಟಿವ್ (ಟೆಲ್ಕೊ) ಕಂಪನಿಯಲ್ಲಿ ಕಾರ್ಯ ನಿರ್ವಹಿಸಲು ಆರಂಭಿಸಿದರು. ಭಾರತದ ಅತಿದೊಡ್ಡ ವಾಹನ ತಯಾರಿಕಾ ಘಟಕದಲ್ಲಿ ನೇಮಕಗೊಂಡ ಮೊದಲ ಮಹಿಳಾ ಇಂಜಿನಿಯರ್ ಇವರಾಗಿದ್ದರು. ಇವರನ್ನು ಮೊದಲು ಪುಣೆಯಲ್ಲಿ ಡೆವಲಪ್‍ಮೆಂಟ್ ಇಂಜಿನಿಯರ್ ಆಗಿ ನೇಮಿಸಲಾಯಿತು. ನಂತರ ಮುಂಬೈ ಮತ್ತು ಜಮ್‍ಶೆಡ್‍ಪುರಗೆ ವರ್ಗಾಯಿಸಲಾಯಿತು.

1970 ಫೆಬ್ರವರಿ 10ರಂದು ನಾರಾಯಣ ಮೂರ್ತಿ ಅವರನ್ನು ವಿವಾಹವಾದರು. ನಂತರ ಇವರು ಇನ್ಪೋಸಿಸ್ ಕಂಪನಿಯನ್ನು ಸ್ಥಾಪಿಸಿದರು. ಈ ಕಂಪನಿ ಜಗತ್ತಿನಾದ್ಯಂತ ಹೆಸರುವಾಸಿ ಆಯ್ತು. ಇವರ ಕಂಪನಿ ಬೆಳೆಯುತ್ತಾ ಹೋದಂತೆ, ಹೆಚ್ಚು ಆದಾಯ ಬರಲು ಆರಂಭಿಸಿತು. ಹೀಗೆ ಬಂದ ಆದಾಯದಲ್ಲಿ ಒಂದಿಷ್ಟು ಪ್ರತಿಷತದಷ್ಟು ಸಮಾಜ ಸೇವೆಗೆ ಮುಡಿಪಾಗಿಡಲು ಆರಂಭಿಸಿದರು.

1996ರಲ್ಲಿ ಸಾರ್ವಜನಿಕ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಇದುವರೆಗೆ 2,300 ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಶಾಲೆಗಳಲ್ಲಿ 70,000 ಗ್ರಂಥಾಲಯಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಇವರ ಸಂಸ್ಥೆ ಇದುವರೆಗೆ 16,000 ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿದೆ. ಇವರಿಗೆ 2006ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಸುಧಾಮೂರ್ತಿಯವರು ಇದುವರೆಗೆ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ.

RELATED ARTICLES

Latest News